ಶೀಘ್ರದಲ್ಲೇ ಭೂಮಿಗೆ ಗಂಡಾಂತರ; ಕ್ಷುದ್ರ ಗ್ರಹ ಅಪ್ಪಳಿಸುವುದು ಖಚಿತ?

By Suvarna Web DeskFirst Published Jun 21, 2017, 5:26 PM IST
Highlights

1908ರ ಜೂನ್ 30ರಂದು ಸೈಬೀರಿಯಾದ ನಿರ್ಜನ ಪ್ರದೇಶ ಟುಂಗುಸ್ಕಾ ಎಂಬಲ್ಲಿ ಪುಟ್ಟ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಆಗ ಸುಮಾರು 800 ಚದರ ಮೈಲಿ ವಿಸ್ತೀರ್ಣದಷ್ಟು ಭೂಭಾಗಕ್ಕೆ ಘಾಸಿಯಾಗಿತ್ತು. ಈಗಲೂ ಅಲ್ಲಿ ಬೃಹದಾಕಾರದ ಕುಳಿ ಇರುವುದನ್ನು ಕಾಣಬಹುದು.

ಲಂಡನ್(ಜೂನ್ 21): ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಕಾಲ ಸನ್ನಿಹಿತವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹಾಗೇನಾದರೂ ಆದಲ್ಲಿ ಭೂಮಿಗೆ ಸಾಕಷ್ಟು ಘಾಸಿಯಾಗಲಿದೆ. ಆಕಾಶದಲ್ಲಿ ಅಡ್ಡಾಡುತ್ತಿರುವ ಸಾವಿರಾರು ಕ್ಷುದ್ರಗಹ(Asteroid)ಗಳ ಪೈಕಿ ಯಾವುದಾದರೂ ಒಂದು ಆಕಾಶಕಾಯವು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಬಹಳಷ್ಟಿದೆ ಎಂದು ಐರ್ಲೆಂಡ್ ದೇಶದ ಕ್ವೀನ್ಸ್ ಯೂನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕ್ಷುದ್ರ ಗ್ರಹದಿಂದ ಎಷ್ಟು ಅಪಾಯ?
1908ರ ಜೂನ್ 30ರಂದು ಸೈಬೀರಿಯಾದ ನಿರ್ಜನ ಪ್ರದೇಶ ಟುಂಗುಸ್ಕಾ ಎಂಬಲ್ಲಿ ಪುಟ್ಟ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಆಗ ಸುಮಾರು 800 ಚದರ ಮೈಲಿ ವಿಸ್ತೀರ್ಣದಷ್ಟು ಭೂಭಾಗಕ್ಕೆ ಘಾಸಿಯಾಗಿತ್ತು. ಈಗಲೂ ಅಲ್ಲಿ ಬೃಹದಾಕಾರದ ಕುಳಿ ಇರುವುದನ್ನು ಕಾಣಬಹುದು.

ಈಗ ಅಂಥದ್ದೇ ಪುಟ್ಟ ಕ್ಷುದ್ರಗ್ರಹವು ನಗರ ಪ್ರದೇಶದ ಮೇಲೆ ಬಿದ್ದರೆ ಇಡೀ ನಗರವೇ ನಾಶವಾಗಿಬಿಡುತ್ತದೆ. ಭೂಮಿಯಷ್ಟೇ ದೊಡ್ಡದಿರುವ ಆಕಾಶಕಾಯಗಳೂ ಇವೆ. ಒಂದು ವೇಳೆ, ತುಸು ದೊಡ್ಡದಾಗಿರುವ ಕ್ಷುದ್ರಗ್ರಹವೇನಾದರೂ ಭೂಮಿಗೆ ಢಿಕ್ಕಿ ಹೊಡೆದರೆ ಅದರಿಂದಾಗುವ ಅಂದಾಜನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಭೂಮಿಯಲ್ಲಿರುವ ಬಹುತೇಕ ಜೀವಿಗಳು ನಿರ್ನಾಮವಾಗಲಿವೆ ಎಂದು ವಿಜ್ಞಾನಿಗಳು ಅಂದಾಜಿಸುತ್ತಾರೆ. ದೊಡ್ಡ ಕ್ಷುದ್ರ ಗ್ರಹಗಳಿಂದ ಸದ್ಯಕ್ಕೆ ಅಪಾಯವಿಲ್ಲ. ಆದರೆ, ಸಣ್ಣ ಕ್ಷುದ್ರಗ್ರಹಗಳು ಯಾವಾಗ ಬೇಕಾದರೂ ಭೂಮಿಗೆ ಅಪ್ಪಳಿಸಬಹುದು ಎಂದನ್ನಲಾಗುತ್ತಿದೆ.

ಕಳೆದ ಶತಮಾನದ ಆರಂಭದಲ್ಲಿ ಸಂಭವಿಸಿದ ಸೈಬೀರಿಯಾದ ಘಟನೆಯ ಸ್ಮರಣಾರ್ಥ ಪ್ರತೀ ವರ್ಷ ಜೂನ್ 30ರಂದು ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನವೆಂದು ಪರಿಗಣಿಸಲಾಗಿದೆ.

click me!