
ಈ ವ್ಯಕ್ತಿಗೆ ಬಯಲೇ ಬದುಕು. ಕಾಡು, ಕೆರೆ, ನದಿ ಬೆಟ್ಟ ಗುಡ್ಡಗಳಲ್ಲೇ ಓಡಾಟ. ಪ್ರತಿ ಗಿಡಮರಗಳನ್ನೂ ಮುಟ್ಟಿ ನೋಡುವ ತವಕ. ಚಿಟ್ಟೆಯಿಂದ ಹಿಡಿದು ಆನೆಯವರೆಗೆ ಪ್ರತಿ ಪ್ರಾಣಿಯ ಬಗ್ಗೆಯೂ ಆಳವಾದ ಜ್ಞಾನ. ಶಿರಸಿ ಸಮೀಪದ ಸಣ್ಣ ಊರಿನಲ್ಲಿ ವಾಸ ಮಾಡುತ್ತಲೇ ಪ್ರಕೃತಿಯ ಅಗಾಧತೆಯನ್ನು ಜಗತ್ತಿಗೆ ವಿಶಿಷ್ಟವಾಗಿ ತೆರೆದಿಟ್ಟ ಹಸಿರು ಯೋಧ.
ಶಿರಸಿ ಎಂದಾಕ್ಷಣ ಶಿವಾನಂದ ಕಳವೆ ಹೆಸರು ನೆನಪಿಗೆ ಬರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕಳವೆ ಎನ್ನುವ ಊರಿನವರಾದ ಶಿವಾನಂದ ಇಡೀ ರಾಜ್ಯಕ್ಕೆ ಚಿರಪರಿಚಿತ ಹೆಸರು. ಪರಿಸರ ಹೋರಾಟಗಳು, ಕೃಷಿ ಚಿಂತನಾ ಸಭೆಗಳು, ಜಲ ಸಾಕ್ಷರತೆಯಿಂದ ಹಿಡಿದು ಹಸಿರಿನ ಜ್ಞಾನ ಹೆಚ್ಚಿಸುವ ಎಲ್ಲ ಮಾದರಿಯ ಚಟುವಟಿಕೆಗಳಲ್ಲೂ ಸದಾ ಸಕ್ರಿಯ.
ಸಮಾಜ ಬದಲಾಗಬೇಕಾದರೆ ಮೊದಲು ನಮ್ಮಲ್ಲಿ ಬದಲಾವಣೆ ಆಗಬೇಕು ಎನ್ನುವ ಗಾಂಧೀಜಿ ಸಿದ್ಧಾಂತವನ್ನು ಬಲವಾಗಿ ನಂಬಿರುವ ಇವರು, ತಮ್ಮ ಜೀವನದ ಇಡೀ ಹೋರಾಟ, ಅಧ್ಯಯನದ ಆಸಕ್ತಿ ಹಾಗೂ ಸಾಮಾಜಿಕ ಬದಲಾವಣೆಯ ಮೊದಲ ಹೆಜ್ಜೆ ಇಟ್ಟಿದ್ದು ತಮ್ಮದೇ ಊರಿನಿಂದ. ಕಳವೆಯ ಜನರಿಗೆ ಪರಿಸರದ ಪಾಠ ಹೇಳಿಕೊಟ್ಟರು. ಕೃಷಿ ಬದಲಾವಣೆಗಳನ್ನು ತೋರಿಸಿಕೊಟ್ಟರು. ಅನೇಕ ದೇಸಿ ತಳಿಗಳನ್ನು ಸಂರಕ್ಷಿಸಿದರು. ಕಳವೆಯಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದರು.
ಶಿವಾನಂದ್ ಕಳವೆರವರು ಪರಿಸರ ಆಸಕ್ತಿ ಉಳ್ಳವರಾಗಿದ್ದು, ಮೋನೊಕಲ್ಚರ್ ಮಹಾಯಾನ, ಬುಕಾನನ್ ನಡೆದ ಹಾದಿಯಲ್ಲಿ, ಕಾಡುನೆಲದ ಕಾಲಮಾನ ಹೀಗೆ 20ಕ್ಕೂ ಹೆಚ್ಚು ಕೃತಿಗಳನ್ನು ಶಿವಾನಂದ್ ಕಳವೆಯವರು ಬರೆದಿದ್ದಾರೆ. ನಾಡಿನ ಎಲ್ಲ ದಿನಪತ್ರಿಕೆ, ವಾರಪತ್ರಿಕೆಗಳಿಗೂ ನಿಯಮಿತವಾಗಿ ಲೇಖನಗಳನ್ನು ಬರೆದಿದ್ದಾರೆ. ಆ ಮೂಲಕ ಜನಜಾಗೃತಿಯ ವಿಸ್ತಾರವನ್ನು ಹೆಚ್ಚಿಸಿದ್ದಾರೆ. ಕೃಷಿ, ಗ್ರಾಮೀಣ, ಪರಿಸರ ಹೀಗೆ ಅನೇಕ ಮಹತ್ವದ ಹಾಗೂ ಸೂಕ್ಷ್ಮ ವಿಚಾರಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ವಿಜ್ಞಾನಿಗಳವರೆಗೆ ಹಾಗೂ ಪತ್ರಕರ್ತರಿಗೂ ಶಿಬಿರಗಳನ್ನು ಆಯೋಜಿಸಿದ್ದಾರೆ. ಕಳವೆಯವರ ಕಲಿಕಾ ಶಿಬಿರದ ವಿಶೇಷ ಏನೆಂದರೆ ತರಗತಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಕಾಡಿನಲ್ಲಿ, ಹೊಲ, ತೋಟಗಳಲ್ಲಿ ಪಾಠ ಮಾಡುತ್ತಾರೆ.
ಕಳವೆಯಲ್ಲಿ `ಕಾನ್ಮನೆ ' ಎನ್ನುವ ವಿಶಿಷ್ಟ ಜ್ಞಾನಕೇಂದ್ರವನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ನಾನಾ ಹಳ್ಳಿಗಳಿಗೆ ಭೇಟಿ ಕೊಟ್ಟು ವಿಶಿಷ್ಟ ಅರಣ್ಯಗಳನ್ನು ರೂಪಿಸಿರುವ 20 ಹಳ್ಳಿಗಳ ಪಟ್ಟಿ ಮಾಡಿ ಕೃತಿಯೊಂದನ್ನು ಹೊರತಂದಿದ್ದಾರೆ. 40ಕ್ಕೂ ಹೆಚ್ಚು ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಕೃಷಿ ಮತ್ತು ಪರಿಸರಕ್ಕೆ ಬಿಡಲಾಗದ ನಂಟು. ಆದ್ದರಿಂದಲೇ ನಮ್ಮ ರೈತರು, ಜನ ಈ ಎರಡಕ್ಕೂ ಸಮಾನ ಆದ್ಯತೆ ಕೊಡಬೇಕು ಎನ್ನುವುದು ಕಳವೆಯವರ ಅಭಿಮತ. ಕುಗ್ರಾಮದಲ್ಲಿದ್ದುಕೊಂಡೇ ಜ್ಞಾನ ಪಸರಿಸುವ ಕೆಲಸ ಮಾಡುತ್ತಿರುವ ಶಿವಾನಂದ್ ತಮ್ಮ ಜಿಲ್ಲೆಯಲ್ಲಿ ಬದಲಾವಣೆಗೆ ಕಾರಣರಾದವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.