ಬಿಜೆಪಿ ಬಿಟ್ಟು ಬೇರೆ ಯಾರಿಗಾದರೂ ವೋಟ್ ಹಾಕಿ: ಉ.ಪ್ರ. ಜನತೆಗೆ ಕೇಜ್ರಿವಾಲ್ ಮನವಿ

By Suvarna Web DeskFirst Published Dec 2, 2016, 7:46 AM IST
Highlights

"ಯಾರಿಗಾದರೂ ನೀವು ವೋಟ್ ಹಾಕಿ, ಆದರೆ ಬಿಜೆಪಿಗೆ ಮಾತ್ರ ಬೇಡ. ನಾನು ಪ್ರತಿಯೊಂದು ಮಾತನ್ನೂ ಪೂರ್ಣ ಹೊಣೆಗಾರಿಕೆಯಿಂದ ಆಡುತ್ತಿದ್ದೇನೆ..." ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮೀರತ್(ಡಿ. 02): ಭಾರತೀಯ ಜನತಾ ಪಕ್ಷದಿಂದ ಜನತೆಗೆ ಮಹಾಮೋಸವಾಗುತ್ತಿದೆ. ಚುನಾವಣೆಯಲ್ಲಿ ಆ ಪಕ್ಷಕ್ಕೆ ವೋಟ್ ಹಾಕಬೇಡಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ. ಚುನಾವಣೆಗೆ ಕ್ಷಣಗಣನೆ ಎದುರಿಸುತ್ತಿರುವ ಉತ್ತರಪ್ರದೇಶದಲ್ಲಿ ಸರಣಿ ಸಮಾವೇಶಗಳನ್ನು ಆರಂಭಿಸಿರುವ ಕೇಜ್ರಿವಾಲ್, ಕೇಂದ್ರದ ನೋಟ್ ಬ್ಯಾನ್ ನಿರ್ಧಾರವನ್ನು ಮತ್ತೊಮ್ಮೆ ಖಂಡತುಂಡವಾಗಿ ಖಂಡಿಸಿದ್ದಾರೆ. ಪ್ರಧಾನಿ ಮೋದಿಯವರು ತನ್ನ ಪಟಾಲಮ್ಮುಗಳಿಗೆ, ಸ್ನೇಹಿತರಿಗೆ ಸಾಲ ಮನ್ನಾ ಮಾಡಿ ಜನಸಾಮಾನ್ಯರಿಗೆ ಮಾತ್ರ ಬವಣೆ ತರುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

"ಉತ್ತರಪ್ರದೇಶದಿಂದಾಗಿ ಮೋದಿಯವರು ಪ್ರಧಾನಿಯಾಗಲು ಸಾಧ್ಯವಾಯಿತು. ನಿಮ್ಮ 80 ಸೀಟುಗಳ ಪೈಕಿ 73 ಸ್ಥಾನಗಳನ್ನು ಬಿಜೆಪಿಗೆ ನೀಡಿದಿರಿ. ಈಗ ಎಲ್ಲಾ ಲೆಕ್ಕವನ್ನೂ ಚುಕ್ತಾ ಮಾಡುವ ಸಂದರ್ಭ ಬಂದಿದೆ. ಬಿಜೆಪಿಯವರು ಮತ ಯಾಚಿಸಲು ಬಂದರೆ, ಅಂಬಾನಿ, ಅದಾನಿ ಬಳಿ ವೋಟ್ ಕೇಳುವಂತೆ ಹೇಳಿ" ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

Latest Videos

"ನಾನಿಲ್ಲಿ ವೋಟ್ ಕೇಳಲು ಬಂದಿಲ್ಲ. ನನಗೆ ವೋಟು ಬೇಕಿದ್ದರೆ ನಮ್ಮ ಪಕ್ಷ ಸ್ಪರ್ಧಿಸಿರುವ ಪಂಜಾಬ್ ಅಥವಾ ಗೋವಾಕ್ಕೆ ಹೋಗುತ್ತಿದ್ದೆ. ಈ ದೇಶವನ್ನು ಉಳಿಸಬೇಕೆಂದು ಬೇಡಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಯಾರಿಗಾದರೂ ನೀವು ವೋಟ್ ಹಾಕಿ, ಆದರೆ ಬಿಜೆಪಿಗೆ ಮಾತ್ರ ಬೇಡ. ನಾನು ಪ್ರತಿಯೊಂದು ಮಾತನ್ನೂ ಪೂರ್ಣ ಹೊಣೆಗಾರಿಕೆಯಿಂದ ಆಡುತ್ತಿದ್ದೇನೆ. ನಾನೇನಾದರೂ ತಪ್ಪು ಮಾತನಾಡಿದರೆ ನನ್ನ ಮೇಲೆ ಕೇಸು ಹಾಕಲು ಕಾಯುತ್ತಿರುತ್ತಾರೆ. ಈವರೆಗೆ 10 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರ ಕೇಸುಗಳಿಗೆ ನಾನು ಹೆದರುವುದಿಲ್ಲ," ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಭ್ರಷ್ಟರಿಗೆ ಫಿಫ್ಟಿ-ಫಿಫ್ಟಿ:
ತೆರಿಗೆ ಪಾವತಿಯಾಗದ ಕಪ್ಪುಹಣ ಘೋಷಿಸಿದರೆ 50% ಮಾತ್ರ ತೆರಿಗೆ ವಿಧಿಸುತ್ತೇವೆ ಎಂದು ಕೇಂದ್ರ ಸರಕಾರ ಮಾಡಿದ ನಿರ್ಧಾರವನ್ನು ಕೇಜ್ರಿವಾಲ್ ಟೀಕಿಸಿದ್ದಾರೆ. "ನೀವು ಲಂಚ ಪಡೆದ ಅಥವಾ ಭ್ರಷ್ಟತನದಿಂದ ಸಂಪಾದಿಸಿದ, ಅಥವಾ ಕಳ್ಳದಂಧೆಯಿಂದ ಪಡೆದ ಹಣವನ್ನು ತೋರಿಸಿದಾಗ ಯಾವ ಪ್ರಶ್ನೆಯನ್ನೂ ಕೇಳಲಾಗುವುದಿಲ್ಲವಂತೆ. ಎಲ್ಲವೂ 50-50. ಬಿಜೆಪಿಯವರು ಮೊದಲೇ ಈ ಕೆಲಸ ಮಾಡಬೇಕಿತ್ತು. ಜನಸಾಮಾನ್ಯನನ್ನು ಯಾಕೆ ಕ್ಯೂನಲ್ಲಿ ನಿಲ್ಲಿಸುತ್ತಿದ್ದೀರಿ?" ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

"ನೋಟ್ ನಿಷೇಧದ ಬಳಿಕ ಬ್ಯಾಂಕುಗಳಲ್ಲಿ 6-7 ಲಕ್ಷ ಕೋಟಿ ಜಮೆಯಾಗಿದೆ. ಆದರೆ, ಇರಲ್ಲಿ ಯಾವುದೂ ಕೂಡ ಕಪ್ಪುಹಣವಲ್ಲ. ಮೋದಿಯವರು 2 ವರ್ಷದಲ್ಲಿ 1.14 ಲಕ್ಷ ಕೋಟಿ ರೂ ಮೊತ್ತದಷ್ಟು ಕೆಟ್ಟ ಸಾಲಗಳನ್ನು ಮನ್ನಾ ಮಾಡಿದ್ದಾರೆ. ಸಾಲ ಮರುಪಾವತಿ ಮಾಡದ ಜನರ ಪಟ್ಟಿ ನೀಡುವಂತೆ ಸುಪ್ರೀಂಕೋರ್ಟ್ ಕೇಳುತ್ತಿದೆ. ಆದರೆ, ಮೋದಿಜೀಗೆ ಇದು ಕೇಳಿಸುತ್ತಿಲ್ಲ" ಎಂದು ದಿಲ್ಲಿ ಸಿಎಂ ಗುಡುಗಿದ್ದಾರೆ.

"ನೀವು ಸರಿಯಾದ ಸಮಯಕ್ಕೆ ಸಾಲ ಕಟ್ಟದೇ ಹೋದರೆ ಬ್ಯಾಂಕುಗಳು ಬೌನ್ಸರ್'ಗಳನ್ನು ಕಳುಹಿಸಿ ನಿಮ್ಮ ಕಾರು ಅಥವಾ ಮನೆಗಳನ್ನು ಮುಟ್ಟುಗೋಲು ಹಾಕಿಕೊಂಡುಬಿಡುತ್ತವೆ. ಆದರೆ, ಮೋದಿಯವರಿಂದ ಸಾಲ ಮನ್ನಾ ಮಾಡಿಕೊಂಡ ಕುಳಗಳ ಮನೆಗಳಿಗೆ ಎಷ್ಟು ಬಾರಿ ಬೌನ್ಸರ್'ಗಳನ್ನು ಕಳುಹಿಸಲಾಗಿದೆ? ಅವರಿಗೆ ಕಪ್ಪುಹಣವನ್ನು ಹತ್ತಿಕ್ಕುವ ಉದ್ದೇಶವಿದ್ದಿದ್ದೇ ಆದಲ್ಲಿ ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿಯಲ್ಲಿರುವ 638 ಜನರನ್ನು ಜೈಲಿಗೆ ಹಾಕುತ್ತಿದ್ದರು. ಇದು ಶ್ರೀಸಾಮಾನ್ಯನಿಗೆ ಸರಕಾರ ಮಾಡುತ್ತಿರುವ ಮಹಾಮೋಸವಾಗಿದೆ" ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.

click me!