ಅಧಿಕೃತ ಸರ್ಕಾರಿ ಬಂಗಲೆ ತೆರವುಗೊಳಿಸಿದ ಜೇಟ್ಲಿ, ಭದ್ರತಾ ಸಿಬ್ಬಂದಿಗಳೂ ಹಿಂದಕ್ಕೆ

By Web DeskFirst Published Jun 7, 2019, 8:38 AM IST
Highlights

ಸರ್ಕಾರಿ ಬಂಗಲೆ ತೆರವುಗೊಳಿಸಿದ ಜೇಟ್ಲಿ| ಕೆಲವು ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳನ್ನೂ ಹಿಂದಕ್ಕೆ ಕಳುಹಿಸಿದ ಮಾಜಿ ಹಣಕಾಸು ಸಚಿವ| ದಕ್ಷಿಣ ದೆಹಲಿಯಲ್ಲಿರುವ ಸ್ವಂತ ಮನೆಗೆ ಶಿಫ್ಟ್

ನವದೆಹಲಿ[ಜೂ.07]:  ಅನಾರೋಗ್ಯದ ಕಾರಣ, ಕೇಂದ್ರ ಸಚಿವ ಸಂಪುಟ ಸೇರ್ಪಡೆಯಿಂದ ಹಿಂದೆ ಸರಿದಿದ್ದ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ, ತಮಗೆ ಒದಗಿಸಲಾಗಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನೂ ತೆರವುಗೊಳಿಸುತ್ತಿದ್ದಾರೆ. ಅಲ್ಲದೆ ತಮಗೆ ಒದಗಿಸಲಾಗಿದ್ದ ಸರ್ಕಾರಿ ಕಾರನ್ನು ಮರಳಿಸಿದ್ದು, ಕೆಲವು ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳನ್ನೂ ಹಿಂದಕ್ಕೆ ಕಳುಹಿಸಿದ್ದಾರೆ.

ಜೇಟ್ಲಿ ಅವರು ಕೇಂದ್ರ ಸಚಿವರಲ್ಲದೇ ಇದ್ದರೂ, ಅವರಿನ್ನೂ ರಾಜ್ಯಸಭಾ ಸಂಸದ. 2018ರಲ್ಲಷ್ಟೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರಿಗಿನ್ನೂ 5 ವರ್ಷಗಳ ಅಧಿಕಾರ ಇದೆ. ಆದರೆ ಸರ್ಕಾರಿ ಬಂಗಲೆ ಬದಲು ಜೇಟ್ಲಿ ಅವರು ತಮ್ಮ ದಕ್ಷಿಣ ದೆಹಲಿಯಲ್ಲಿರುವ ಸ್ವಂತ ಮನೆಯಲ್ಲೇ ಇರುವುದನ್ನು ಕುಟುಂಬ ಸದಸ್ಯರು ಬಯಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬಾಕಿ ಉಳಿಸಿಕೊಂಡಿರುವ ನೀರು, ವಿದ್ಯುತ್‌ ಹಾಗೂ ದೂರವಾಣಿ ಸೇವೆಯ ಬಿಲ್ಲುಗಳನ್ನು ಪಾವತಿಸುವಂತೆ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದು, ನಿತ್ಯ ತಮ್ಮ ಮನೆಗೆ ಪೂರೈಸಲಾಗುತ್ತಿದ್ದ 25 ದಿನ ಪತ್ರಿಕೆಗಳನ್ನು ನಿಲ್ಲಿಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಸಣ್ಣ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳಬೇಕು ಎಂಬುದು ಜೇಟ್ಲಿ ಬಯಕೆಯಾಗಿದೆ.

click me!