
ಬೆಂಗಳೂರು : ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಅವರು ಮಾನಹಾನಿಕರವಾದ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಬೇಕು ಎಂದು ಕೋರಿ ಹಿರಿಯ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.
ತಮ್ಮ ವಿರುದ್ಧ ಅಪಮಾನಕರ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಐದು ಕೋಟಿ ರು.ಗಳ ಮಾನನಷ್ಟ ಪ್ರಕರಣ ದಾಖಲಿಸಿದ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್‌ಸುಂದರ್, ತಮ್ಮ ಕಕ್ಷಿದಾರರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಪ್ರಕರಣದ ಪ್ರತಿವಾದಿ ಶ್ರುತಿ ಹರಿಹರನ್ ಪರ ವಾದ ಆಲಿಸದೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಶ್ರುತಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಇಂದು ಸಾಕ್ಷಿಗಳ
ವಿಚಾರಣೆ: ನಟ ಅರ್ಜುನ್ ಸರ್ಜಾ ಅವರು ನಟಿ ಶ್ರುತಿ ಹರಿಹರನ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಸಂಬಂಧ ಐವರು ಸಾಕ್ಷಿದಾರರಿಗೆ ಪೊಲೀಸರು ನೋಟಿಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಆಪ್ತ ಸಹಾಯಕರಾದ ಬೋರೇಗೌಡ, ಕಿರಣ್, ಸ್ನೇಹಿತೆ ಯಶಸ್ವಿನಿ ಹಾಗೂ ವಿಸ್ಮಯ ಚಿತ್ರದ ಸಹ ನಿರ್ದೇಶಕರಾದ ಭರತ್ ನೀಲಕಂಠ, ಮೋನಿಕಾ ಬಳಿ ಅರ್ಜುನ್ ಸರ್ಜಾ ನಡವಳಿಕೆ ಕುರಿತು ತಾನು ಹೇಳಿಕೊಂಡಿದ್ದೆ ಎಂದು ಶ್ರುತಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಸ್ಮಯ ಚಿತ್ರ ನಿರ್ಮಾಪಕ ಸೇರಿದಂತೆ ಐದು ಮಂದಿಗೆ ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಪೊಲೀಸರು ಶ್ರುತಿ ಹರಿಹರನ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಕರೆದೊಯ್ದು ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.