ಆಪಲ್ ಐಫೋನ್ ಬೆಂಗಳೂರಲ್ಲಿ ಉತ್ಪಾದನೆ ನಿಕ್ಕಿ ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ

Published : Feb 03, 2017, 04:19 PM ISTUpdated : Apr 11, 2018, 01:01 PM IST
ಆಪಲ್ ಐಫೋನ್ ಬೆಂಗಳೂರಲ್ಲಿ ಉತ್ಪಾದನೆ ನಿಕ್ಕಿ ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ

ಸಾರಾಂಶ

ಭಾರತೀಯ ಐಫೋನ್ ಪ್ರಿಯರಿಗೆ ಒಂದು ಸಂತಸದ ಸುದ್ಧಿ. ಆ್ಯಪಲ್ ಕಮಪನಿಯು ಐಫೋನ್ ಗಳ ಉತ್ಪಾದನೆಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಡಿಯಿಟ್ಟಿದ್ದು ಇದರಿಂದ ಅಗ್ಗದ ದರದಲ್ಲಿ ದೊರೆಯುವಂತಾಗಿದೆ. 

ಬೆಂಗಳೂರು (ಫೆ.03) (ವಿಶೇಷ ವರದಿ): ಭಾರತೀಯ ಐಫೋನ್ ಪ್ರಿಯರಿಗೆ ಒಂದು ಸಂತಸದ ಸುದ್ಧಿ. ಆ್ಯಪಲ್ ಕಮಪನಿಯು ಐಫೋನ್ ಗಳ ಉತ್ಪಾದನೆಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಡಿಯಿಟ್ಟಿದ್ದು ಇದರಿಂದ ಅಗ್ಗದ ದರದಲ್ಲಿ ದೊರೆಯುವಂತಾಗಿದೆ.

ಆಪಲ್ ಐಫೋನ್‌ನ  ಭಾರತೀಯ ವಿಭಾಗದ ಅಧಿಕಾರಿಗಳ ನಿಯೋಗ ಇತ್ತೀಚೆಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆಯವರನ್ನು ಭೇಟಿಯಾಗಿ ಚರ್ಚಿಸಿದ್ದು ಬೆಂಗಳೂರಲ್ಲೇ ಘಟಕ ತೆರೆಯುವುದನ್ನು ಬಹುತೇಕ ಖಚಿತಪಡಿಸಿದೆ. ಐಫೋನನ್ನು ಬೆಂಗಳೂರಿಗೆ ಸ್ವಾಗತಿಸಿರುವ ಖರ್ಗೆ ಎಲ್ಲ ಸವಲತ್ತುಗಳನ್ನು ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿರುವುದಲ್ಲದೇ ರಾಜ್ಯದ ಉದ್ಯಮ ಸ್ನೇಹಿ, ಕೈಗಾರಿಕಾ ಸ್ನೇಹಿ ನೀತಿಗಳ ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಕೌಶಲ್ಯ ಇನ್ನಿತರ ವಿಚಾರಗಳನ್ನು  ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ದೇಶದ ಬೇಡಿಕೆಯ ಐಫೋನ್‌ಗಳನ್ನು  ಬೆಂಗಳೂರಲ್ಲಿ ಉತ್ಪಾದಿಸಲು ಆಪಲ್ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ‘ಕನ್ನಡಪ್ರಭ‘’ಕ್ಕೆ ತಿಳಿಸಿದರು. ಕಳೆದ ಐದಾರು ತಿಂಗಳಿನಿಂದ ಸತತವಾಗಿ ಅನೇಕ ಸಂಸ್ಥೆಗಳನ್ನು ನಡೆಸಿದ ಬಳಿಕ ಆಪಲ್‌ಗೆ ಬೆಂಗಳೂರು ಪ್ರಶಸ್ತ ಸ್ಥಳ ಎಂಬುದು ಮನವರಿಕೆ ಆಗಿದೆ ಎಂದು ಅವರು ಹೇಳಿದರು. 

ಪೀಣ್ಯದಲ್ಲಿ ಉತ್ಪಾದನೆ

ಭಾರತದಲ್ಲಿ ಆಪಲ್ ಐಫೋನ್‌ಗಳಿಗೆ  ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು ಆಪಲ್ ಫೋನ್‌ಗಳ ಮಾರಾಟ ವ್ಯವಹಾರವು 2016 ರಲ್ಲಿ ₹9997 ಕೋಟಿಗೆ ಹೆಚ್ಚಳವಾಗಿದೆ. ಕಳೆದ ಅಕ್ಟೋಬರ್ 2015 ರಿಂದ ಸೆಪ್ಟೆಂಬರ್ 2016 ರವರೆಗೆ ಭಾರತದಲ್ಲಿ 25 ಲಕ್ಷ ಐಫೋನ್‌ಗಳು ಮಾರಾಟವಾಗಿರುವುದಾಗಿ ಮಾರುಕಟ್ಟೆ ಸಂಶೋಧನಾ ವರದಿ ಹೇಳುತ್ತಿದ್ದು ಭಾರತದಲ್ಲೇ ಉತ್ಪಾದನೆ ಆದರೆ ಕಡಿಮೆ ಬೆಲೆಯಲ್ಲಿ ಇತರೇ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತ ಪೈಪೋಟಿ ನೀಡಲು ಸಾಧ್ಯವಾಗಲಿದೆ.  ಇದೀಗ ಆಪಲ್ ಫೋನ್‌ಗಳ ಮೇಲೆ ಶೇ.12.5 ರಷ್ಟು ಹೆಚ್ಚುವರಿ ಆಮದು ಸುಂಕ ಅನ್ವಯವಾಗುತ್ತಿದ್ದು ಭಾರತದ ಬಳಕೆದಾರರು ಹೆಚ್ಚು ಬೆಲೆ ತೆತ್ತು ಖರೀದಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ದೇಶದಲ್ಲೇ ಉತ್ಪಾದನೆ ಆರಂಭಿಸಲು ಮುಂದಾಗಿದ್ದ ಆಪಲ್‌ಗೆ ಗುಜರಾತ್, ಆಂಧ್ರಪ್ರದೇಶ ಸೇರಿದಂತೆ ಕೆಲ ರಾಜ್ಯಗಳಿಂದ ತೀವ್ರ ಪೈಪೋಟಿ ಇತ್ತು. ರಾಜ್ಯವು ಈ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಿದ್ದು ಕೊನೆಗೂ ಆಪಲ್ ಐಫೋನ್ ತಯಾರಿಕೆಗೆ ಬೆಂಗಳೂರು ದೇಶದಲ್ಲೇ ಅತ್ಯುತ್ತಮ ವಾತಾವರಣ ಹೊಂದಿರುವುದನ್ನು ಮನವರಿಕೆ ಮಾಡಿಕೊಟ್ಟಿದೆ. 

ಪೀಣ್ಯದ ಆಪಲ್  ಸಂಸ್ಥೆಯ ಐಫೋನ್‌ಗಳ ಜೋಡಣೆ ಮಾಡುವ (ಒಇಎಮ್-ಮೂಲ ಉತ್ಪನ್ನ ತಯಾರಕರು) ಥೈವಾನ್ ಮೂಲದ ವಿಸ್ಟ್ರಾನ್ ಸಂಸ್ಥೆಯ ಘಟಕದಲ್ಲಿ ಐಫೋನ್‌ಗಳ ಉತ್ಪಾದನೆ ಆಗಲಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ‘’ಕ್ಕೆ ಖಚಿತಪಡಿಸಿದೆ.ವಿಸ್ಟ್ರಾನ್ ಆಡಳಿತ ಮಂಡಳಿಯು ಪೀಣ್ಯ ಘಟಕ ಸ್ಥಾಪನೆಗಾಗಿ  ಈಗಾಗಲೇ 33.5 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆಗೆ ಸಮ್ಮತಿಸಿದೆ. ಪೀಣ್ಯ ಘಟಕಕ್ಕೆ  ರಾಜ್ಯ ಸರ್ಕಾರದಿಂದ ನೀಡಬೇಕಾಗಿದ್ದ ಎಲ್ಲ ಲೈಸೆನ್ಸ್‌ಗಳನ್ನು ಜತೆಗೆ ವಿದ್ಯುತ್, ನೀರು ಹಾಗೂ ಇನ್ನಿತರ ಮೂಲ ಸೌಕರ್ಯಗಳ ಜತೆಗೆ ಅಗ್ನಿಶಾಮಕವೂ ಸೇರಿದಂತೆ ಇತರೇ ಅನುಮತಿಗಳನ್ನು ಆದ್ಯತೆಯ ಮೇಲೆ ನೀಡಲಾಗಿದ್ದು  ಆಪಲ್ ತನ್ನ ಐಫೋನ್‌ಗಳನ್ನು ಇದೇ ಘಟಕದಲ್ಲಿ ಉತ್ಪಾದಿಸಲು ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ. 

ಎರಡನೇ ಕೊಡುಗೆ

ಕಳೆದ ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಆಪಲ್‌ನ ಸಿಇಒ ಟಿಮ್ ಕುಕ್ ಬೆಂಗಳೂರಿನಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸುವ ಘೋಷಣೆ ಮಾಡಿದ್ದರು.ಆಪಲ್ ಟಿವಿ ಮತ್ತು ವಾಚ್‌ಗಳಿಗೆ ಪ್ರೋಗ್ರಾಮಿಂಗ್ ಲ್ಯಾಂಗುವೇಜ್ ಸಾಮರ್ಥ್ಯ ಒದಗಿಸಬಲ್ಲ  ಐಒ ಡೆವಲಪರ್ ಸಮೂಹವನ್ನು ಅಭಿವೃದ್ಧಿಪಡಿಸುವ ಈ ಯೋಜನೆ ಮುಂದಿನ ವರ್ಷದ ವೇಳೆಗೆ ಕಾರ್ಯಾರಂಭಿಸಲಿದೆ. ಇದೀಗ ಆಪಲ್ ಐಫೋನ್ ಉತ್ಪಾದನೆ ಬೆಂಗಳೂರಲ್ಲೇ ಆಗಲಿದ್ದು ಆಪಲ್ ಬೆಂಗಳೂರಿಗೆ ಎರಡನೇ ಕೊಡುಗೆ ನೀಡಿದಂತಾಗಿದೆ. ಮುಂದಿನ ಏಪ್ರಿಲ್ ವೇಳೆಗೆ ಪೀಣ್ಯದ ಉತ್ಪಾದನಾ ಘಟಕದಿಂದ ಐೆನ್‌ಗಳು ಹೊರಬರುವ ನಿರೀಕ್ಷೆ ಇದೆ.

ಆಪಲ್ ಸಂಸ್ಥೆಯ ಹಿರಿಯ ಅಧಿಕಾರಿಗಳ ನಿಯೋಗ ಭೇಟಿಯಾಗಿದ್ದು ಬೆಂಗಳೂರಿನಲ್ಲಿ ಐಫೋನ್ ಗಳ ಉತ್ಪಾದನೆ ಆರಂಭಿಸಲು ಉತ್ಸುಕತೆ ತೋರಿದೆ. ಇಲ್ಲಿನ ಎಲ್ಲ ಸೌಲಭ್ಯಗಳು ಮನವರಿಕೆ ಆದ ಬಳಿಕ ಆಪಲ್ ಬೆಂಗಳೂರಲ್ಲೇ ಐಫೋನ್ ಉತ್ಪಾದಿಸಲು ಸಿದ್ಧವಾಗಿದ್ದು ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಆದ್ಯತೆಯ ಮೂಲಕ ನೀಡಲಾಗುತ್ತಿದೆ. ಈ ಮೂಲಕ ಬೆಂಗಳೂರು ವಿದೇಶಿ ಹೂಡಿಕೆಗೆ ದೇಶದಲ್ಲೇ ಅಗ್ರಗಣ್ಯ ಸ್ಥಳವಾಗಿದೆ ಎಂಬುದು  ಸಾಬೀತಾಗಿದೆ. 

ಪ್ರಿಯಾಂಕ ಖರ್ಗೆ 

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ 

-ವರದಿ: ಪ್ರಶಾಂತ್ ಕುಮಾರ್ ಎಂ.ಎನ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!