
ನವದೆಹಲಿ(ಆ.03): ಭಾರತ ಬಿಟ್ಟು ತೊಲಗಿ ಚಳವಳಿಯ 77ನೇ ವರ್ಷಾಚರಣೆಯಂದು ದೇಶಾದ್ಯಂತ ಇವಿಎಂ ತೊಲಗಿಸಿ ಆಂದೋಲನ ಹಮ್ಮಿಕೊಳ್ಳಲು ಇವಿಎಂ ವಿರೋಧಿ ರಾಷ್ಟ್ರೀಯ ಜನ್ ಆಂದೋಲನ ಸಮಿತಿ ನಿರ್ಧರಿಸಿದೆ.
ವಿರುದ್ಧ 'ಇವಿಎಂ ತೊಲಗಿಸಿ, ಬ್ಯಾಲಟ್ ಪೇಪರ್ ಮರಳಿಸಿ, ದೇಶ ರಕ್ಷಿಸಿ ' ಎಂಬ ಘೋಷಣೆಯಡಿ, ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಸಂಯೋಜಕ ಭೂಪೇಂದರ್ ಸಿಂಗ್ ರಾವತ್ ತಿಳಿಸಿದ್ಧಾರೆ.
2019ರ ಲೋಕಸಭಾ ಚುನಾವಣಾ ಫಲಿತಾಂಶ ದೇಶದಲ್ಲಿನ ರಾಜಕೀಯ ಹಾಗೂ ಸಾಂಸ್ಥಿಕ ಸವಾಲುಗಳನ್ನು ಎದುರಿಸುವುದು ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಯಂತ್ರಗಳ ಬಳಕೆಯಿಂದ ಭಾರತೀಯ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯವನ್ನು ಗುರುತಿಸಬೇಕಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವ ಉಳಿಯಲು ಇವಿಎಂ ಯಂತ್ರಗಳನ್ನು ನಿಷೇಧಿಸಿವುದು ಅತೀ ಅವಶ್ಯ ಎಂದು ಅಭಿಪ್ರಾಯಪಟ್ಟಿರುವ ರಾವತ್, ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ನಡೆದ ಹಲವು ಅನುಮಾನಾಸ್ಪದ ಸಂಗತಿಗಳೇ ಪುಷ್ಠಿ ನೀಡುತ್ತವೆ ಎಂದಿದ್ದಾರೆ.
ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ, ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿರುವ ಇವಿಎಂ ಗಳ ಮತಗಳು ಹಾಗೂ ಚಲಾವಣೆಯಾದ ಮತಗಳ ನಡುವೆ ಭಾರಿ ವ್ಯತ್ಯಾಸವಿದೆ ಎಂದೂ ಇವಿಆರ್’ಜೆಎ ಸಂಘಟನೆ ಆರೋಪಿಸಿದೆ.
ಮತಯಂತ್ರ, ವಿವಿಪ್ಯಾಟ್’ಗಳ ನಡುವಿನ ವ್ಯತ್ಯಾಸ, ಇವಿಎಂ ಯಂತ್ರಗಳ ನಾಪತ್ತೆ ಪ್ರಕರಣಗಳು ಇಡೀ ಚುನಾವಣಾ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಇವಿಎಂ ರದ್ದುಪಡಿಸಿ ಬ್ಯಾಲೆಟ್ ಪೇಪರ್’ಗಳನ್ನು ಬಳಸಬೇಕೆಂದು ಸಂಘಟನೆ ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಇದೇ ಆ.09ರಂದು ಭಾರತ ಬಿಟ್ಟು ತೊಲಗಿ ಚಳವಳಿಯ 77ನೇ ವರ್ಷಾಚರಣೆ ನಡೆಯಲಿದ್ದು, ಅಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇವಿಎಂ ತೊಲಗಿಸಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.