ಸರ್ಕಾರ ಒಪ್ಪುತ್ತಿಲ್ಲ; ಕಾರ್ಯಕರ್ತೆಯರು ಬಿಡುತ್ತಿಲ್ಲ; 5 ನೇ ದಿನಕ್ಕೆ ಕಾಲಿಟ್ಟಿದೆ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

By Shrilakshmi ShriFirst Published Feb 9, 2018, 8:55 AM IST
Highlights

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಮಂಗಳವಾರದಿಂದ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಒಕ್ಕೂಟದ ಪ್ರತಿಭಟನೆಗೆ ಸಮಾನಾಂತರವಾಗಿ  ಸಿಐಟಿಯು ಸಂಯೋಜಿತ ಬಿಸಿಯೂಟ ಕಾರ್ಯಕರ್ತರು ಗುರುವಾರದಿಂದ ಫ್ರೀಡಂಪಾರ್ಕ್'ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಬೆಂಗಳೂರು (ಫೆ.09): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಮಂಗಳವಾರದಿಂದ ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಒಕ್ಕೂಟದ ಪ್ರತಿಭಟನೆಗೆ ಸಮಾನಾಂತರವಾಗಿ  ಸಿಐಟಿಯು ಸಂಯೋಜಿತ ಬಿಸಿಯೂಟ ಕಾರ್ಯಕರ್ತರು ಗುರುವಾರದಿಂದ ಫ್ರೀಡಂಪಾರ್ಕ್'ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಶಾಲೆಗಳಿಗೆ ಮೂರು ದಿನ ರಜೆ ಪಡೆದು ಬಂದಿರುವ ಕಾರ್ಯಕರ್ತೆಯರು ತೀವ್ರವಾಗಿ ಪ್ರತಿಭಟನೆ ನಡೆಸಲು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗೆ ಓಗೊಡದಿದ್ದಲ್ಲಿ ಶಾಂತಿಯುತ ಪ್ರತಿಭಟನೆ ಹೆಚ್ಚು ದಿನಗಳ ಕಾಲ ಉಳಿಯುವುದಿಲ್ಲ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಬೇಡಿಕೆಗೆ ಮಣಿಯದಿದ್ದರೆ ತಾಲೂಕು ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಬಿಸಿಯೂಟ ಕಾರ್ಯಕರ್ತರು ‘ನಾವು ಎಲ್ಲದಕ್ಕೂ ಸಿದ್ಧರಾಗಿಯೇ ಬಂದಿದ್ದೀವಿ. ಪ್ರಾಣ ಹೋದರೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ನಾವು ಕನಿಷ್ಠ ವೇತನ ಕೇಳುತ್ತಿದ್ದೇವೆ. ನಮ್ಮ ಬೆವರಿನ ಶ್ರಮಕ್ಕೆ ಪ್ರತಿಫಲ ನೀಡಿ. ನೀವು ಒಮ್ಮೆ ಕಾಫಿ ಕುಡಿಯಲು ಖರ್ಚು ಮಾಡುವ ಹಣವಷ್ಟೇ ನಾವು ಕೇಳುತ್ತಿದ್ದೇವೆ!’ ಎಂದು ನೋವು ತೋಡಿಕೊಂಡರು.

‘ಪ್ರತಿಭಟನೆಯಿಂದಾಗಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಿದೆ. ಆದರೆ, ಇದಕ್ಕೆ ಸರ್ಕಾರವೇ ಹೊಣೆ. ನಾವು ಕಳೆದ 14 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. 2-3 ತಿಂಗಳಿಗೊಮ್ಮೆ ಸಂಬಳ ನೀಡುತ್ತಾರೆ. ಮಕ್ಕಳು ತಿಂದ ತಟ್ಟೆ, ಪಾತ್ರೆ ಎಲ್ಲವನ್ನೂ ಸ್ವಚ್ಛಗೊಳಿಸುತ್ತೇವೆ. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ನೀಡುವ ಕಿರುಕುಳ, ದೌರ್ಜನ್ಯವನ್ನೂ ಸಹಿಸಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ನಮ್ಮನ್ನು ನಂಬಿದ ಜೀವಗಳಿವೆ. ನಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ, ಉತ್ತಮ ಬದುಕು ರೂಪಿಸಲು ಮಾಡುತ್ತಿದ್ದೇವೆ. ಈ ನೋವು ಯಾಕೆ ಸರ್ಕಾರ, ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ’ ಎಂದು ಅವರು ಸಿಟ್ಟಿನಿಂದ ನುಡಿದರು.

ಬೇಡಿಕೆಗಳು ಏನು?

ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು

ತಮಿಳುನಾಡಿನ ಮಾದರಿಯಲ್ಲಿ ಕಾಯಂ ನೌಕರಿ ಮಾಡಬೇಕು

ESI, PF, ಗ್ರಾಚುಟಿ ಯೋಜನೆ ಜಾರಿಗೊಳಿಸಬೇಕು

ಅಕಾಲಿಕವಾಗಿ ನಿಧನ ಹೊಂದಿದರೆ 5 ಲಕ್ಷ ವಿಮೆ ನೀಡಬೇಕು

ಮಹಿಳಾ ಸಿಬ್ಬಂದಿಗೆ ಹೆರಿಗೆ ವೇಳೆ ಪೂರ್ಣ ಸಂಬಳ ನೀಡಬೇಕು

ಸ್ವಾಭಾವಿಕವಾಗಿ ಮೃತಪಟ್ಟರೂ 2 ಲಕ್ಷ ಪರಿಹಾರ ನೀಡಬೇಕು

ವೈದ್ಯಕೀಯ ಚಿಕಿತ್ಸೆಗೆ ಕನಿಷ್ಠ 1ಲಕ್ಷ ವಿಮೆ ನೀಡಬೇಕು

ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಮಾಡಿಕೊಂಡ ಗುತ್ತಿಗೆ ರದ್ದಾಗಬೇಕು

ಶಾಲೆಗಳಲ್ಲೇ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡಬೇಕು

ಅಡುಗೆ ತಯಾರಕರು ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕಾಗಿ 15,000 ನೀಡಬೇಕು

ಅಡುಗೆ ಸಿಬ್ಬಂದಿಗೆ ಒಂದು ವರ್ಷಕ್ಕೆ ಒಂದು ಸಮವಸ್ತ್ರ ನೀಡಬೇಕು

ಜನಶ್ರೀ ಭೀಮಾ ಯೋಜನೆ ಎಲ್ಲರಿಗೂ ಅನ್ವಯವಾಗಬೇಕು

ಬಿಸಿಯೂಟ ತಯಾರಿಕರಿಗೆ ಮಾಸಿಕ ಪಿಂಚಣಿ 3 ಸಾವಿರ ನೀಡಬೇಕು

ಮೂಲ ಕೈಪಿಡಿಯಲ್ಲಿರುವಂತೆ ಸಿಬ್ಬಂದಿಯ ಆಯ್ಕೆ ಮಾಡಬೇಕು

 

click me!