ಅಡುಗೆ ಮನೆಯಲ್ಲಿ ಬಿದ್ದಿದ್ದ ಪೇಂಟಿಂಗ್'ಗೆ ಸಿಕ್ತು ಕೋಟಿ ಕೋಟಿ ದುಡ್ಡು!

By Web DeskFirst Published Oct 30, 2019, 2:25 PM IST
Highlights

ಕೋಟಿ ಕೋಟಿ ಹಣ ತಂದು ಕೊಟ್ಟ ಅಡುಗೆ ಮನೆ ಗೋಡೆ ಮೇಲೆ ನೇತು ಹಾಕಿದ್ದ ಪೇಂಟಿಂಗ್| ಕೇವಲ ಒಂದು ಪೇಂಟಿಂಗ್'ನಿಂದ ಕೋಟ್ಯಧಿಪತಿಯಾದ ವೃದ್ಧ ಮಹಿಳೆ| ಫ್ರಾನ್ಸ್‌ನ ಕಂಪಿಗ್ನೇ ಎಂಬ ಪಟ್ಟಣದಲ್ಲಿರುವ ವೃದ್ಧೆಯ ಮನೆಯಲ್ಲಿ ಅಪರೂಪದ ಪೇಂಟಿಂಗ್| 13 ನೇ ಶತಮಾನದ ಇಟಲಿಯ ಖ್ಯಾತ ಚಿತ್ರಕಾರ ಸಿಮಾಬ್ಯೂ ರಚಿಸಿದ್ದ ಅಪರೂಪದ ಪೇಂಟಿಂಗ್| ಪೇಂಟಿಂಗ್ ಹರಾಜು ಹಾಕಿದ ಆಕ್ಟಿಯಾನ್ ಹರಾಜು ಸಂಸ್ಥೆ| 24 ಮಿಲಿಯನ್ ಯೂರೋ (188 ಕೋಟಿ ರೂ.)ಗೆ ಹರಾಜಾದ ಅಪರೂಪದ ಪೇಂಟಿಂಗ್|

ಪ್ಯಾರಿಸ್(ಅ.30): ಕಲೆ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಕಲೆ ವ್ಯಾಪಾರಕ್ಕಿಂತಲೂ ಹೆಚ್ಚಾಗಿ ಮನಸ್ಸಿನ ನೆಮ್ಮದಿಗಾಗಿ, ಮನುಷ್ಯನ ಅಭಿರುಚಿಯ ಫಲವಾಗಿ ಮೂಡಿ ಬರುತ್ತದೆ. ಆದರೆ ಕೆಲವೊಮ್ಮೆ ಇದೇ ಕಲೆ ಮನುಷ್ಯನ ವಿಧಿ ಬದಲಾಯಿಸುವ ಸಾಧನವಾಗಿಯೂ ಮಾರ್ಪಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಉತ್ತರ ಫ್ರಾನ್ಸ್ ಮನೆಯೊಂದರ ಅಡುಗೆ ಮನೆಯಲ್ಲಿ ನೇತು ಹಾಕಿದ್ದ ಸಣ್ಣ ಪೇಂಟಿಂಗ್'ವೊಂದು ಇದೀಗ ಮನೆಯೊಡತಿಯ ಭಾಗ್ಯದ ಬಾಗಿಲು ತೆರೆಯವಂತೆ ಮಾಡಿದೆ. ಆ ಒಂದು ಸಣ್ಣ ಪೇಂಟಿಂಗ್ ಈಗ ಮನೆಯೊಡತಿಯನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ.

ರವಿವರ್ಮನ ‘ತಿಲೋತ್ತಮೆ’ ಚಿತ್ರಕಲೆ 5.17 ಕೋಟಿಗೆ ಮಾರಾಟ

ಆಕ್ಟಿಯಾನ್ ಹರಾಜು ಸಂಸ್ಥೆಯ ಡೊಮಿನಿಕ್ ಲೆ ಕೋಂಟ್ ಕಳೆದ ಜೂನ್‌ನಲ್ಲಿ ಉತ್ತರ ಫ್ರಾನ್ಸ್‌ನ ಕಂಪಿಗ್ನೇ ಎಂಬ ಪಟ್ಟಣದಲ್ಲಿರುವ ವೃದ್ಧೆಯ ಮನೆಯಲ್ಲಿ ಅಮೂಲ್ಯ ಪೇಂಟಿಂಗ್ ಇರುವುದನ್ನು ಗುರುತಿಸಿದ್ದರು. ಈ ಪೇಂಟಿಂಗ್ 13 ನೇ ಶತಮಾನದ ಇಟಲಿಯ ಖ್ಯಾತ ಚಿತ್ರಕಾರ ಸಿಮಾಬ್ಯೂ ರಚಿಸಿದ್ದೆಂದು ಡೊಮೆನಿಕ್ ವಾದ.

ಈ ಕಲಾಕೃತಿ ಮಹಿಳೆ ಬಳಿ ಹೇಗೆ ಬಂದಿತು ಎಂಬುದು ತಿಳಿದಿಲ್ಲವಾದರೂ, ಹಿರಿಯರಿಂದ ಬಳುವಳಿಯಾಗಿ ಬಂದ ಅಮೂಲ್ಯ ವಸ್ತು ಎಂಬುದು ಖಾತ್ರಿಯಾಗಿದೆ. ನವೋದಯ ಚಿತ್ರಕಲೆಯ ಪ್ರಾರಂಭದ ಕಾಲದ ಕಲಾಕೃತಿ ಇದಾಗಿದ್ದು, 10×8 ಇಂಚು ಅಳತೆ ಹೊಂದಿದೆ.

ಈ ಕಲಾಕೃತಿಯನ್ನು ಸಿಮಾಬ್ಯೂ ಸುಮಾರು ಕ್ರಿ.ಶ 1280ರಲ್ಲಿ ಚಿತ್ರಿಸಿದ್ದು, ಈ ಪೇಂಟಿಂಗ್'ನ್ನು 24 ಮಿಲಿಯನ್ ಯೂರೋ (2.66 ಕೋಟಿ ರೂ.) ನೀಡಿ ಕಲಾಪ್ರೇಮಿಯೊಬ್ಬರು ಖರೀದಿಸಿದ್ದಾರೆ. ಈ ಮೊತ್ತದ ದೊಡ್ಡ ಪಾಲು ವೃದ್ಧ ಮಹಿಳೆಗೆ ಸೇರಲಿದೆ ಎಂದು ಲೆ ಕೋಂಟ್ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!