ಕಾಶ್ಮೀರ: ಅನಂತ್'ನಾಗ್ ಲೋಕಸಭಾ ಕ್ಷೇತ್ರ ಉಪಚುನಾವಣೆ ರದ್ದು

By Suvarna Web DeskFirst Published May 2, 2017, 4:47 AM IST
Highlights

ಏ. 8ರಂದೇ ಅನಂತನಾಗ್ ಕ್ಷೇತ್ರಕ್ಕೆ ಚುನಾವಣೆಯಾಗಬೇಕಿತ್ತು. ಅಂದು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಏ. 12ಕ್ಕೆ ಚುನಾವಣೆ ಮುಂದೂಡಲಾಯಿತು. ಬಳಿಕ ಮೇ 25ಕ್ಕೆ ಚುನಾವಣೆಯನ್ನು ಮುಂದೂಡಲಾಯಿತು. ಇದೀಗ, ಸರಿಯಾದ ಭದ್ರತಾ ವ್ಯವಸ್ಥೆ ಸಾಧ್ಯವಿಲ್ಲದ್ದರಿಂದ ಚುನಾವಣೆಯನ್ನೇ ರದ್ದುಗೊಳಿಸಲು ನಿರ್ಧರಿಸಲಾಗಿದೆ.

ನವದೆಹಲಿ(ಮೇ 02): ಕಣಿವೆ ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಅನಂತನಾಗ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಚುನಾವಣೆ ನಿರ್ವಹಣೆಗೆ ಸರಿಯಾದ ಭದ್ರತೆ ಒದಗಿಸಲು ಅಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉಗ್ರಗಾಮಿ ಹಾಗೂ ದೇಶವಿರೋಧಿ ಚಟುವಟಿಕೆಗಳು ಹೆಚ್ಚಾಗಿರುವ ಅನಂತ್'ನಾಗ್ ಜಿಲ್ಲೆಯಲ್ಲಿ ಚುನಾವಣೆ ನಿರ್ವಹಣೆಗೆ ತನಗೆ 740 ಪ್ಯಾರಾಮಿಲಿಟರಿ ಕಂಪನಿಗಳ (74 ಸಾವಿರ ಸೈನಿಕರು) ಅಗತ್ಯವಿದೆ ಎಂದು ಚುನಾವಣಾ ಆಯೋಗವು ಗೃಹ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ, ಕಾಶ್ಮೀರದಲ್ಲೀಗ ವಿಷಮ ಸ್ಥಿತಿ ಇರುವುದರಿಂದ 300 ಕಂಪನಿಗಳನ್ನು ಮಾತ್ರ ಕೊಡುವುದಾಗಿ ಗೃಹ ಸಚಿವಾಲಯ ಹೇಳುತ್ತಿದೆ.

ಅಚ್ಚರಿ ಎಂದರೆ, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಗೆ ಬಳಕೆಯಾಗಿದ್ದು 70 ಸಾವಿರ ಪ್ಯಾರಾಮಿಲಿಟರಿ ಪಡೆ ಮಾತ್ರ. ಈಗ ಅನಂತನಾಗ್ ಕ್ಷೇತ್ರವೊಂದಕ್ಕೇ ಅದಕ್ಕಿಂತ ಹೆಚ್ಚು ಸೇನಾಪಡೆಗಳನ್ನು ಚುನಾವಣಾ ಆಯೋಗ ಕೇಳಿದೆ. ಕಡಿಮೆ ಅವಧಿಯಲ್ಲಿ ಅಷ್ಟು ಸೈನಿಕರನ್ನು ನಿಯೋಜಿಸುವುದು ಅಸಾಧ್ಯ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

click me!