ಕೆಂಪೇಗೌಡರ ಮೊಮ್ಮಗನ ಮಾಸ್ತಿಗಲ್ಲು ಪತ್ತೆ

By Suvarna Web DeskFirst Published May 2, 2017, 3:14 AM IST
Highlights

ಶಾಸನದಲ್ಲಿ ವೀರನೊಬ್ಬ ಖಡ್ಗ ಹಿಡಿದಿದ್ದರೆ ವೀರಗಲ್ಲು ಎನ್ನುತ್ತಾರೆ. ವೀರ ಮತ್ತು ಅವನ ಹೆಂಡತಿ ಜೊತೆಯಲ್ಲಿದ್ದರೆ ವೀರಮಾಸ್ತಿಗಲ್ಲು ಎಂದು ಕರೆಯುತ್ತಾರೆ. ವೀರಮಾಸ್ತಿಗಲ್ಲುಗಳಲ್ಲಿ ಮಹಿಳೆಯೇ ಕೇಂದ್ರ ಪಾತ್ರ ವಹಿಸಿ ಅವಳಿಗೋಸ್ಕರವೇ ನಿರ್ಮಿಸಿರುತ್ತಾರೆಂದು ಚಿತ್ರದಲ್ಲಿ ಗೋಚರವಾಗಿದೆ.

ರಾಮನಗರ: ನಾಡಪ್ರಭು ಮಾಗಡಿ ಕೆಂಪೇಗೌಡರ ಮೊಮ್ಮಗ ದೊಡ್ಡವೀರಪ್ಪ ಗೌಡರ ಅಳ್ವಿಕೆಯಲ್ಲಿ ವೀರ ಮರಣವನ್ನಪ್ಪಿದ ಶೂರರ ವೀರಮಾಸ್ತಿಗಲ್ಲು ಗಳು ಮಾಗಡಿ ತಾಲೂಕಿನ ಮಾಡಬಾಳ್‌ ಹೋಬಳಿಯ ಚಕ್ರಬಾವಿ ಗ್ರಾಮದಲ್ಲಿ ಸಿಕ್ಕಿವೆ.

ಗ್ರಾಮದಲ್ಲಿ ಇತ್ತೀಚೆಗಷ್ಟೆಅಶ್ವಮೇಧ ಕುದುರೆಯಿರುವ ಕಲ್ಲು ಪತ್ತೆಯಾಗಿತ್ತು. ಹಾಗೆಯೇ ಹುಲಿಕಟ್ಟೆಯಲ್ಲಿ ತುರುಗೋಲ್ ಶಾಸನ ಪತ್ತೆಯಾದ ಕೆಲವೇ ದಿನಗಳಲ್ಲಿ ಮತ್ತೆ 300ರಿಂದ 350 ವರ್ಷಗಳ ಹಿಂದಿನ ವೀರ ಮಾಸ್ತಿಗಲ್ಲು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ. ಚಕ್ರಬಾವಿ ಕೆರೆಯಲ್ಲಿ 15 ವೀರಮಾಸ್ತಿಗಲ್ಲಿನಂತೆಯೇ ಚಕ್ರಬಾವಿ ಗ್ರಾಮದಿಂದ 1 ಕಿ.ಮೀ ದೂರದ ಚಿಕ್ಕಯ್ಯನಗುಡಿ ಬಳಿ 25 ವೀರಗಲ್ಲುಗಳು ಸಿಕ್ಕಿವೆ. ಇದು ಚಕ್ರಬಾವಿ ಗ್ರಾಮ ಐತಿಹಾಸಿಕವಾಗಿ ಹಲವು ಕುರುಹುಗಳನ್ನು ಒಡಲಲ್ಲಿ ಇಟ್ಟುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ.

ಕುತೂಹಲ: ಭಾರತದಲ್ಲಿ ಸತಿ ಸಹಗಮನ ಪದ್ಧತಿ ಆಚರಣೆಯಲ್ಲಿತ್ತು ಎಂಬುದು ಇತಿಹಾಸದಲ್ಲಿ ತಿಳಿಯುತ್ತದೆ. ಈಗ ಚಕ್ರಬಾವಿ ಗ್ರಾಮದಲ್ಲಿ ಸತಿ ಸಹಗಮನ ಪದ್ಧತಿ ಹೋಲುವ ಕಲ್ಲು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಕುತೂಹಲ ಹೆಚ್ಚಿಸಿದೆ. ಮಹಿಳೆಯರ ಮೇಲೆ ಸತಿ ಸಹಗಮನ ಪದ್ಧತಿ ಸಾಕಷ್ಟುಪ್ರಭಾವವನ್ನು ಬೀರಿತ್ತು. ಗಂಡ ಸತ್ತ ಮೇಲೆ ಹೆಂಡತಿ ಸಾಯುವ ಮೂಲಕ ಜಗತ್ತಿಗೆ ನಾವು ಎಷ್ಟುಪವಿತ್ರಳು ಎಂಬುದನ್ನು ತೋರುತ್ತಿದ್ದರು. ಪತ್ನಿ ದೇವತೆ ಸಮನಳಾಗುತ್ತಿದ್ದಳು ಸ್ವರ್ಗಕ್ಕೆ ಹೋಗುತ್ತಾರೆಂಬ ಚಿತ್ರಣ ವೀರಗಲ್ಲಿನಲ್ಲಿ ಪತ್ತೆಯಾಗಿದೆ.

ಶಾಸನದಲ್ಲಿ ವೀರನೊಬ್ಬ ಖಡ್ಗ ಹಿಡಿದಿದ್ದರೆ ವೀರಗಲ್ಲು ಎನ್ನುತ್ತಾರೆ. ವೀರ ಮತ್ತು ಅವನ ಹೆಂಡತಿ ಜೊತೆಯಲ್ಲಿದ್ದರೆ ವೀರಮಾಸ್ತಿಗಲ್ಲು ಎಂದು ಕರೆಯುತ್ತಾರೆ. ವೀರಮಾಸ್ತಿಗಲ್ಲುಗಳಲ್ಲಿ ಮಹಿಳೆಯೇ ಕೇಂದ್ರ ಪಾತ್ರ ವಹಿಸಿ ಅವಳಿಗೋಸ್ಕರವೇ ನಿರ್ಮಿಸಿರುತ್ತಾರೆಂದು ಚಿತ್ರದಲ್ಲಿ ಗೋಚರವಾಗಿದೆ. ಇವು ಕೆಂಪೇಗೌಡರ ಮೊಮ್ಮಗನ ಕಾಲದವು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಪ್ರಾಚ್ಯವಸ್ತು ಇಲಾಖೆ ಇವುಗಳನ್ನು ಸಂರಕ್ಷಣೆ ಮಾಡಿ, ಅದರ ಬಗ್ಗೆ ಅಧ್ಯಯನ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವ್ಯಾಪ್ತಿ, ವಿಸ್ತಾರ: ಮಾಗಡಿ ಕೆಂಪೇಗೌಡರ ಮೊಮ್ಮಗ ದೊಡ್ಡವೀರಪ್ಪಗೌಡರ ಆಡಳಿತದಲ್ಲಿ ಚಕ್ರಬಾವಿ ಗ್ರಾಮವು ಹೋಬಳಿ ಕೇಂದ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸೇನೆಯ ಸಾಕಷ್ಟು ಸೈನಿಕರು ಇಲ್ಲೇ ಇದ್ದರು ಎಂಬ ಕುರುಹುಗಳು ಪತ್ತೆಯಾಗಿದೆ. ಯಾರೋ ಶತ್ರುಗಳು ಬಂದು ದೊಡ್ಡವೀರಪ್ಪಗೌಡರ ಸೈನ್ಯದ ಮೇಲೆ ದೊಡ್ಡ ಯುದ್ಧವೇ ನಡೆಸಿದೆ. ಇದರಲ್ಲಿ ನೂರಾರು ಯೋಧರು ಸಾವನ್ನಪ್ಪಿದ್ದು, ಒಂದೇ ಜಾಗದಲ್ಲಿ 15 ರಿಂದ 20 ವೀರಮಾಸ್ತಿಗಲ್ಲು ಪತ್ತೆಯಾಗಿರುವುದಕ್ಕೆ ಉದಾಹರಣೆ. ಒಂದೇ ಕಡೆ ಇಷ್ಟು ವೀರಮಾಸ್ತಿಗಲ್ಲು ಪತ್ತೆಯಾಗಿರುವುದಕ್ಕೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು, ಕೆಂಪೇಗೌಡರು ತಮ್ಮ ಸಾಮಾಜ್ಯವನ್ನು ಎಲ್ಲಿಯವರೆಗೂ ವಿಸ್ತರಿಸಿದ್ದರು, ದೊಡ್ಡವೀರಪ್ಪಗೌಡರ ಮೇಲೆ ಯಾರು ದಾಳಿ ಮಾಡಿದ್ದರು ಎಂಬುದರ ಬಗ್ಗೆ ಸೂಕ್ತ ಅಧ್ಯಯನ, ಸಂಶೋಧನೆ ನಡೆಯಬೇಕಿದೆ. ಜೊತೆಗೆ ಈ ವೀರಮಾಸ್ತಿಗಲ್ಲುಗಳ ರಕ್ಷಣೆ ಆಗಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಚಕ್ರಬಾವಿ ಗ್ರಾಮದಲ್ಲಿ ಒಂದೇ ಕಾಲಘಟ್ಟದ ವೀರ ಮಾಸ್ತಿಗಲ್ಲುಗಳು ಪತ್ತೆಯಾಗಿವೆ. ವೀರಮಾಸ್ತಿಗಲ್ಲುಗಳು ಸತಿ ಸಹಗಮನ ಪದ್ಧತಿಯನ್ನು ಹೇಳುತ್ತದೆ. ಒಬ್ಬ ಗಂಡನಿಗೆ ನಾಲ್ವರು, ಮೂವರು ಹೆಂಡತಿರು ಇದ್ದು, ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಶಿಲ್ಪಗಳು ಹೇಳುತ್ತಿವೆ. ಈ ವೀರಮಾಸ್ತಿಗಲ್ಲುಗಳ ಕುರಿತು ಮತ್ತಷ್ಟುಅಧ್ಯಯನ ನಡೆಯಬೇಕಿದೆ.
- ಪ್ರೊ.ಜಯರಾಮು, ಕೆಂಪೇಗೌಡರ ಕುರಿತು ಅಧ್ಯಯನ ನಡೆಸಿ ಪಿಎಚ್‌'ಡಿ ಪದವಿ ಪಡೆದವರು. 

ಕನ್ನಡಪ್ರಭ ವಾರ್ತೆ
epaper.kannadaprabha.in

click me!