ಕರ್ನಾಟಕ ರಾಜಕೀಯದಲ್ಲಿ ಬಿಜೆಪಿಯ 'ಎವರ್‌ಗ್ರೀನ್' ನಾಯಕ ಅನಂತ್ ಕುಮಾರ್

By Web DeskFirst Published Nov 12, 2018, 2:16 PM IST
Highlights

ಅನಂತ್ ಕುಮಾರ್ ವ್ಯಕ್ತಿತ್ವ ಅದೆಷ್ಟು ಸರಳವಾಗಿತ್ತೆಂದರೆ, ಯಾವುದೇ ಪಕ್ಷದ ರಾಜಕಾರಣಿ ದೆಹಲಿಗೆ ಆಗಮಿಸಿದರೆ ಯಾವುದೇ ಹಿಂಜರಿಕೆ ಇಲ್ಲದೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಅನಂತ್ ಕುಮಾರ್‌ರವರ ಸಾವು ಕರ್ನಾಟಕ ಹಾಗೂ ಬಿಜೆಪಿ ರಾಜಕೀಯಕ್ಕೆ ತುಂಬಲಾರದ  ನಷ್ಟವೆನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಅವರಂತಹ ಚಾಣಾಕ್ಷ, ಶಕ್ತಿಶಾಲಿ ಹಾಗೂ ಮೇಧಾವಿ ನಾಯಕ ಸಿಗುವುದು ಕಷ್ಟವೆನ್ನಬಹುದು.

1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದಕ್ಷಿಣ ಬೆಂಗಳೂರು ಕ್ಷೇತ್ರದಿಂದ ಅನಂತ್ ಕುಮಾರ್‌ರವರಿಗೆ ಮೊದಲ ಬಾರಿ ಟಿಕೆಟ್ ನೀಡಲಾಗಿತ್ತು. ಈ ಕ್ಷೇತ್ರದ ಅಂದಿನ ಸಂಸದ ಹಾಗೂ ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ಕೆ. ವೆಂಕಟಗಿರಿ ಗೋಡಾರವರ ಬದಲಾಗಿ ಅನಂತ್ ಕುಮಾರ್‌ರವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಆಗ ಅನಂತ್ ಕುಮಾರ್‌ಗೆ ಕೇವಲ 36 ವರ್ಷ.

ಕಾಂಗ್ರೆಸ್ ಅಂದು ಈ ಕ್ಷೇತ್ರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ವಿಧವೆ ವರಲಕ್ಷ್ಮಿಯವರನ್ನು ಅನಂತ್ ಕುಮಾರ್ ವಿರುದ್ಧ ಕಣಕ್ಕಿಳಿಸಿತ್ತು. ಅಂದು ರಾಜ್ಯದಲ್ಲಿ ಎಚ್. ಡಿ ದೇವೇಗೌಡರವರ ನೇತೃತ್ವದ ಜನತಾ ದಳ ಅಧಿಕಾರ ವಹಿಸಿಕೊಂಡಿತ್ತು. ಹೀಗಿರುವಾಗ ಅನಂತ್ ಕುಮಾರ್‌ ಕಾಂಗ್ರೆಸ್ ಹಾಗೂ ಜನತಾ ದಳದ ಅಭ್ಯರ್ಥಿಗಳ ಎದುರು ಗೆಲುವು ಪಡೆಯುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ.

ಇನ್ನು ಬೆಂಗಳೂರಿನ ಈ ಕ್ಷೇತ್ರದಲ್ಲಿ ಅಂದಿನವರೆಗೆ ರಾಜ್ಯ ಸರ್ಕಾರದ ವಿಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಿದ್ದರು. ಹೀಗಿರುವಾಗ ಬಿ. ಎಸ್ ಯಡಿಯೂರಪ್ಪನವರ ಆಪ್ತ ಅನಂತ್ ಕುಮಾರ್ ಎಲ್ಲಾ ಊಹೆಗಳನ್ನು ಸುಳ್ಳಾಗಿಸಿದರು. ವರಲಕ್ಷ್ಮೀ ಗುಂಡೂರಾವ್ ಅವರ ಹೆಂಡತಿಯನ್ನು ಸೋಲಿಸಿದ ಅನಂತ್ ಕುಮಾರ್ ಲೋಕಸಭೆಗೆ ಪ್ರವೇಶಿಸಿದ್ದರು.

ಆರ್‌ಎಸ್ಎಸ್‌ ಎಬಿವಿಪಿ  ಹಾಗೂ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರೂ ಸದ್ದು ಮಾಡದ ಅನಂತ್ ಕುಮಾರ್ ಅಂದು ಮೊದಲ ಬಾರಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅತ್ಯಂತ ಬುದ್ಧಿವಂತರಾಗಿದ್ದ ಅವರಿಗೆ ರಾಜಕೀಯದಲ್ಲಿ ಹೊಸಬರ ಗೆಳೆತನ ಸಂಪಾದಿಸುವುದು ಹೇಗೆ ಎಂದು ತಿಳಿದಿತ್ತು. ದೆಹಲಿಗೆ ರಾಜಕೀಯಕ್ಕೆ ಹೊಸಬರಾಗಿದ್ದ ಅವರು ಕೆಲವೇ ತಿಂಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅಲ್ಪ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣಾ ಅಡ್ವಾಣಿಯವರ ಆತ್ಮೀಯರಾದರು.

1996ರಲ್ಲಿ ಸಂಸದರಾಗುವುದಕ್ಕೂ ಮೊದಲು ಅವರು ವಿದ್ಯಾರ್ಥಿ ಸಂಘವಾಗಿರುವ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. ಸಂಘದಿಂದ ಬಿಜೆಪಿಗೆ ಹೋಗಿದ್ದ ಅನಂತ್ ಕುಮಾರ್ ಕ್ಷಮತೆಯನ್ನು ಎಲ್ಲರಿಗಿಂತಲೂ ಮೊದಲು ಗುರುತಿಸಿದ್ದು ಬಿ. ಎಸ್ ಯಡಿಯೂರಪ್ಪ. ಬಿಎಸ್‌ವೈ ಅವರನ್ನು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. 1994ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಬಹಳ ಮಹತ್ವದ ಪಾತ್ರ ವಹಿಸಿದ್ದರು. 1989ರಲ್ಲಿ ಕೇವಲ 4 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ 1994ರ ಚುನಾವಣಾ ಫಲಿತಾಂಶ ಸಿಹಿ ನೀಡಿತ್ತು. ಅಂದು ಬಿಜೆಪಿ ಒಟ್ಟು 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ವಿಪಕ್ಷ ಸ್ಥಾನವನ್ನು ಪಡೆಯಿತು.

ಓರ್ವ ಅತ್ಯುತ್ತಮ ಹಾಗೂ ಬಲಶಾಲಿ ವ್ಯಕ್ತಿಯಾಗಿದ್ದ ಅನಂತ್ ಕುಮಾರ್ ನೋಡ ನೋಡುತ್ತಿದ್ದಂತೆಯೇ ರಾಜಕೀಯದ ಉತ್ತುಂಗಕ್ಕೇರಿದರು ಹಾಗೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ಆತ್ಮೀಯರಾದರು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಎಸ್ ವೈ 'ಅನಂತ್ ಕುಮಾರ್ ನನ್ನ ತಮ್ಮನಂತಿದ್ದರು. ನಾವಿಬ್ಬರೂ ಸೇರಿ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿದ್ದೇವೆ' ಎಂದಿದ್ದಾರೆ.

ಅನಂತ್ ಕುಮಾರ್ ನಿಧನದಿಂದ ದುಃಖಿತರಾಗಿರುವ ಯಡಿಯೂರಪ್ಪನವರು 'ಅನಂತ್ ಕುಮಾರ್ ಬಳಿ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಮನೆ ಇರಲಿಲ್ಲ. ಅವರು ಹಲವಾರು ವರ್ಷಗಳವರೆಗೆ ನನ್ನೊಂದಿಗಿದ್ದರು. ಅವರು ಅತ್ಯಂತ ವಿನಮ್ರ ಹಾಗೂ ಶ್ರಮಜೀವಿ ನಾಯಕರಾಗಿದ್ದರು. ಹೀಗಾಗಿ ಅವರು ಯಾವತ್ತೂ ತಮ್ಮ ಕೆಲಸದ ಮೇಲೆಯೇ ಗಮನ ಹರಿಸುತ್ತಿದ್ದರು. ನನಗವರು ನನ್ನ ಕುಟುಂಬದ ಸದಸ್ಯರಾಗಿದ್ದರು. 40 ವರ್ಷಗಳಿಂದ ನಾವಿಬ್ಬರೂ ಒಟ್ಟಿಗಿದ್ದೇವೆ. ಏನು ಹೇಳಬೇಕೆಂದೇ ನನಗೆ ತೋಚುತ್ತಿಲ್ಲ. ಅವರಿಗಿನ್ನೂ 58 ವರ್ಷ ವಯಸ್ಸಷ್ಟೇ' ಎಂದಿದ್ದಾರೆ.

1998ರ ಲೋಕಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರು ಬಹಳಷ್ಟು ಅಂತರದಿಂದ ಗೆಲುವು ಸಾಧಿಸಿದರು ಹಾಗೂ ವಾಜಪೇಯಿಯವರ ಎನ್ ಡಿ ಎ1 ಸರ್ಕಾರದಲ್ಲಿ ಮೊದಲ ಬಾರಿ ಕ್ಯಾಬಿನೆಟ್ ಮಂತ್ರಿಯಾದರು. ವಾಜಪೇಯಿ ಸರ್ಕಾರದಲ್ಲಿ ಅವರಿಗೆ ನಾಗರಿಕ ವಿಮಾನ ಖಾತೆ ಜವಾಬ್ದಾರಿಯನ್ನು ನೀಡಲಾಯ್ತು. ಈ ಮೂಲಕ 38ರ ಹರೆಯದಲ್ಲಿ ಎಲ್ಲರಿಗಿಂತಲೂ ಯುವ ಸಚಿವರಾದರು.

ಅನಂತ್ ಕುಮಾರ್ ವ್ಯಕ್ತಿತ್ವ ಅದೆಷ್ಟು ಸರಳವಾಗಿತ್ತೆಂದರೆ, ಯಾವುದೇ ಪಕ್ಷದ ರಾಜಕಾರಣಿ ದೆಹಲಿಗೆ ಆಗಮಿಸಿದರೆ ಯಾವುದೇ ಹಿಂಜರಿಕೆ ಇಲ್ಲದೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಅನಂತ್ ಕುಮಾರ್ ರವರ ದಸಾವು ಕರ್ನಾಟಕ ಹಾಗೂ ಬಿಜೆಪಿ ರಾಜಕೀಯಕ್ಕೆ ತುಂಬಲಾರದ  ನಷ್ಟವೆನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಅವರಂತಹ ಚಾಣಾಕ್ಷ, ಶಕ್ತಿಶಾಲಿ ಹಾಗೂ ಮೇಧಾವಿ ನಾಯಕ ಸಿಗುವುದು ಕಷ್ಟವೆನ್ನಬಹುದು.

click me!