
ನವದೆಹಲಿ(ಅ.20): ಅಮೃತಸರದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ನೀಡಲು ರೈಲ್ವೇ ಇಲಾಖೆ ಸ್ಪಷ್ಟವಾಗಿ ನಿರಾಕರಿಸಿದೆ.
ಅಮೃತಸರದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತವಲ್ಲ. ಹೀಗಾಗಿ ಇಲಾಖೆ ಯಾವುದೇ ರೀತಿಯ ಪರಿಹಾರವನ್ನೂ ನೀಡುವುದಿಲ್ಲ ಎಂದು ಕೇಂದ್ರ ಸಂವಹನ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.
ದುರಂತ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿನ್ಹಾ, ದುರ್ಘಟನೆ ರೈಲು ಅಪಘಾತವಲ್ಲ. ಹೀಗಾಗಿ ಇಲಾಖೆ ಪರಿಹಾರವನ್ನು ನೀಡುವುದಿಲ್ಲ. ಹರೈಲು ಅಪಘಾತಗಳ ಪಟ್ಟಿಯಲ್ಲಿ ಈ ಪ್ರಕರಣನ್ನು ಸೇರ್ಪಡೆಗೊಳಿಸುವುದೂ ಇಲ್ಲ ಎಂದು ಹೇಳಿದ್ದಾರೆ.
ದುರಂತ ಕುರಿತಂತೆ ರೈಲ್ವೇ ಇಲಾಖೆ ತನಿಖೆ ನಡೆಸುವ ಅಗತ್ಯವಿಲ್ಲ. ರೈಲನ್ನು ಎಲ್ಲೆಲ್ಲಿ ತಡವಾಗಿ ಚಾಲನೆ ಮಾಡಬೇಕು, ಎಲ್ಲಿ ವೇಗವಾಗಿ ಚಾಲನೆ ಮಾಡಬೇಕೆಂಬ ಸೂಚನೆಗಳನ್ನು ಚಾಲಕರಿಗೆ ನೀಡಲಾಗಿತ್ತು. ಹಳಿ ಮೇಲೆ ಜನರಿರುವುದು ಚಾಲಕನಿಗೆ ಕಾಣಿಸಿಲ್ಲ. ಘಟನೆ ಕುರಿತು ಏನೆಂದು ತನಿಖೆಗೆ ಆದೇಶಿಸಬೇಕು? ರೈಲುಗಳು ವೇಗವಾಗಿಯೇ ಚಲಿಸುತ್ತೇವೆ. ರೈಲ್ವೇ ಹಳಿಗಳ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾಗ ಜನರು ಹಳಿಗಳಿಂದ ದೂರವಿರಬೇಕಿತ್ತು ಎಂದು ಸಿನ್ಹಾ ಹೇಳಿದ್ದಾರೆ.
ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿರುವ 13 ವರ್ಷದ ಬಾಲಕನ ಮೃತದೇಹವನ್ನಿಟ್ಟುಕೊಂಡು ಪರಿಹಾರ ನೀಡುವಂತೆ ಕುಟುಂಬವೊಂದು ಆಗ್ರಹಿಸುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವಾನಿ ಲೋಹಾನಿ, ದಸರಾ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಕುರಿತಂತೆ ನಮಗೆ ಯಾವುದೇ ರೀತಿಯ ಮಾಹಿತಿಗಳನ್ನೂ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಇದೇ ವೇಳೆ ಜಲಂಧರ್ ಎಕ್ಸಪ್ರೆಸ್ ನ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.