
ನವದೆಹಲಿ : ಭಾರತದಿಂದ ಪಾಕಿಸ್ತಾನವನ್ನು ವಿಭಜಿಸಿ ಪ್ರತ್ಯೇಕ ರಾಷ್ಟ್ರಕ್ಕೆ ಕಾರಣವಾದ ಮೊಹಮ್ಮದ್ ಅಲಿ ಜಿನ್ನಾ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ನಿಲುವು ಸ್ಪಷ್ಟಪಡಿಸಿದ ಹೊರತಾಗಿಯೂ, ಕಾಂಗ್ರೆಸ್‌ನ ಮಾಜಿ ಮುಖಂಡ ಮಣಿಶಂಕರ್ ಅಯ್ಯರ್ ಅವರು ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಅಯ್ಯರ್ ಅವರ ನಡವಳಿಕೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಂಡವಾಳ ಮಾಡಿಕೊಂಡಿದ್ದು, ಇದನ್ನು ಕರ್ನಾಟಕ ಚುನಾವಣೆಗೆ ಹೋಲಿಸಿ ಅಯ್ಯರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಗುಜರಾತ್ ಚುನಾವಣೆ ವೇಳೆ ಅಯ್ಯರ್ ಅವರು ಪಾಕಿಸ್ತಾನಿ ದೂತರ ಜತೆ ಸಭೆ ನಡೆಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಟೀಕಿಸಿ ವಿವಾದಕ್ಕೀಡಾಗಿದ್ದರು. ಬಳಿಕ ಕಾಂಗ್ರೆಸ್‌ನಿಂದ ವಜಾ ಆಗಿದ್ದರು. ಈಗ ಕರ್ನಾಟಕ ಚುನಾವಣೆ ವೇಳೆ ಅವರು ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದು, ‘ಭಾರತದ ಅಲಿಗಢ ಮುಸ್ಲಿಂ ವಿವಿಯಲ್ಲಿ ಜಿನ್ನಾ ಭಾವಚಿತ್ರ ಇರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಶನಿವಾರ ಹೇಳಿದ್ದಾರೆ. ಇದರ ನಡುವೆ, ಪಾಕ್‌ನಲ್ಲಿ ಶುಕ್ರವಾರ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್‌ರ 218 ನೇ ಪುಣ್ಯದಿನ ಆಚರಿಸಲಾಗಿರುವುದು ಕೂಡ ವಿವಾದಕ್ಕೆ ಇನ್ನಷ್ಟು ತುಪ್ಪ ಸುರಿದಿದೆ.
ಶಾ ಗರಂ: ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ‘ಕಾಂಗ್ರೆಸ್ ಮತ್ತು ಪಾಕಿಸ್ತಾನಕ್ಕೆ ಉತ್ತಮವಾದ ‘ದೂರಸಂಪರ್ಕ’ ಸಂಬಂಧವಿದೆ. ಪಾಕಿಸ್ತಾನ ಸರ್ಕಾರ ಟಿಪ್ಪು ಸುಲ್ತಾನ್ ಅವರ ಪುಣ್ಯತಿಥಿ ಆಚರಿಸುವ ಮೂಲಕ ಅವರನ್ನು ಸ್ಮರಣೆ ಮಾಡಿತ್ತು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಆದರೆ ಇಂದು(ಶನಿವಾರ) ಮಣಿಶಂಕರ್ ಅವರು ಜಿನ್ನಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಅಥವಾ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಾಕಿಸ್ತಾನದ ಜತೆ ಏಕೆ ಸಕ್ರಿಯವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ,’ ಎಂದು ಕಾಂಗ್ರೆಸ್ ಅನ್ನು ಛೇಡಿಸಿದ್ದಾರೆ. ಇದರ ಬಳಿಕ ಮತ್ತೊಂದು ಪ್ರತ್ಯೇಕ ಟ್ವೀಟ್ ಮಾಡಿರುವ ಶಾ, ‘ದೇಶದ ಆಂತರಿಕ ರಾಜಕೀಯದಲ್ಲಿ ಕಾಂಗ್ರೆಸ್ ವಿದೇಶಗಳ ಜತೆ ಶಾಮೀಲಾಗಿದೆ,’ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
‘ಕಳೆದ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳಿಗೆ ಕಾಂಗ್ರೆಸ್ (ಅಯ್ಯರ್) ಔತಣ ಸಭೆ ನಡೆಸಿದ್ದನ್ನು ನೋಡಿದ್ದೇವೆ. ಇದೀಗ ಟಿಪ್ಪು ಸುಲ್ತಾನ್ ಮತ್ತು ಜಿನ್ನಾ ಬಗ್ಗೆ ಪ್ರೀತಿ ಆಗಿದೆ’ ಎಂದು ಕಾಂಗ್ರೆಸ್ ವಿರುದ್ಧ ಶಾ ಕಿಡಿಕಾರಿದ್ದಾರೆ. ಅಲ್ಲದೆ, ‘ನಮ್ಮ ಆಂತರಿಕ ವಿಚಾರದಲ್ಲಿ ವಿದೇಶದ ರಾಷ್ಟ್ರಗಳ ಜತೆ ಕೈಜೋಡಿಸಬಾರದು ಎಂಬುದಾಗಿ ಕಾಂಗ್ರೆಸ್‌ಗೆ ಕಳಕಳಿಯಿಂದ ಪ್ರಾರ್ಥಿಸುತ್ತೇನೆ. ನಾಗರಿಕ ಮತ್ತು ಧನಾತ್ಮಕ ಸಂವಾದದಲ್ಲಿ ನಂಬಿಕೆಯಿಡೋಣ,’ ಎಂದು ಟಾಂಗ್ ನೀಡಿದ್ದಾರೆ.
ಸಂಬಂಧವಿಲ್ಲ- ಕಾಂಗ್ರೆಸ್: ಏತನ್ಮಧ್ಯೆ, ‘ಮಣಿಶಂಕರ್ ಅಯ್ಯರ್ ಅವರಿಗೂ ಮತ್ತು ಕಾಂಗ್ರೆಸ್‌ಗೆ ಯಾವುದೇ ರೀತಿಯ ಸಂಬಂಧವಿಲ್ಲ’ ಎಂಬುದಾಗಿ ಕಾಂಗ್ರೆಸ್ ಮುಖಂಡ ನದೀಂ ಜಾವೇದ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.