
ಬೆಂಗಳೂರು (ಮಾ. 06): ರವಿವಾರ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಾಗಪುರದ ಆರ್‌ಎಸ್‌ಎಸ್ ಮುಖ್ಯಾಲಯದಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಜೊತೆಗೆ ಸುದೀರ್ಘ ಮಾತುಕತೆ ನಡೆಸಿರುವ ಅಮಿತ್ ಶಾ ಕರ್ನಾಟಕದಲ್ಲಿ ಗೆಲ್ಲುವುದು ಹೇಗೆ, ಸಂಘದ ಪ್ಲಾನ್ ಏನು ಎಂಬುದರ ಬಗ್ಗೆ ಬಹಳ ಹೊತ್ತು ಚರ್ಚೆ ನಡೆಸಿದ್ದಾರೆ.
ತ್ರಿಪುರಾದ ಗೆಲುವಿನ ವರದಿ ನೀಡಲು ಹೋಗಿದ್ದ ಶಾ ಕೊನೆಗೆ ಸುಮಾರು ಒಂದು ಗಂಟೆ ಕರ್ನಾಟಕದ ಪರಿಸ್ಥಿತಿ, ಅಲ್ಲಿನ ಸ್ಥಳೀಯ ಸಂಘ ನಾಯಕರ ಅಭಿಪ್ರಾಯ, ಗೆಲ್ಲುವುದಕ್ಕೆ ಏನೇನು ಮಾಡಬೇಕು ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದವರೇ ಆಗಿರುವ ಆರ್‌ಎಸ್‌ಎಸ್ ನಾಯಕರಾದ ದತ್ತಾತ್ರೇಯ ಹೊಸಬಾಳೆ, ಮಂಗೇಶ್ ಬೆಂಡೆ ಮತ್ತು ಮುಕುಂದ ಕೂಡ ಇದ್ದರು. ಸಂಘದ ಮೂಲಗಳು ಹೇಳುತ್ತಿರುವ ಪ್ರಕಾರ ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಬಿಜೆಪಿ 90 ರಿಂದ 95 ಸ್ಥಾನಗಳ ಆಸುಪಾಸು ಗೆಲ್ಲುವ ಸಾಧ್ಯತೆಯಿದ್ದು, ಇದನ್ನು ಜಾಸ್ತಿ ಮಾಡಬೇಕಾದರೆ ಏನೆಲ್ಲ ಮಾಡಬೇಕು, ಕೆಲ ವಿಷಯಗಳ ಬಗ್ಗೆ ಸ್ಥಳೀಯ ಸಂಘದ ನಾಯಕರಿಗಿರುವ ಅಸಮಾಧಾನದ ಕುರಿತು ಚರ್ಚೆ ನಡೆದಿದೆ. ಟಿಕೆಟ್ ಹಂಚಿಕೆ ಬಗ್ಗೆ ರಾಜ್ಯ ನಾಯಕರ ಗುದ್ದಾಟದ ಬಗ್ಗೆ ಕೂಡ ಚರ್ಚೆ ನಡೆದಿದೆ. ಸಂಘದ ಮೂಲಗಳು ಹೇಳುತ್ತಿರುವ ಪ್ರಕಾರ ಮೋಹನ್ ಭಾಗವತ್ ಎದುರು ಅಮಿತ್ ಶಾ ‘ಕರ್ನಾಟಕ ಗೆಲ್ಲಬೇಕಾದರೆ ನಾನೇ ಹೋಗಿ 2 ತಿಂಗಳು ಕುಳಿತುಕೊಳ್ಳುತ್ತೇನೆ.
ರಾಜ್ಯ ನಾಯಕರ ಮಧ್ಯೆ ಸಮಸ್ಯೆಗಳಿವೆ. ಆದರೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಸಾರ್ವತ್ರಿಕವಾಗಿದೆ ಎಂಬುದು ನಮಗಿರುವ ಲಾಭದಾಯಕ ಅಂಶ’ ಎಂದು ಹೇಳಿ ಬಂದಿದ್ದಾರೆ. ನಂತರ ಹೊರಗೆ ಬಂದ ಅಮಿತ್ ಶಾ ಪತ್ರಕರ್ತರಿಗೆ ‘ಕರ್ನಾಟಕದಲ್ಲಿ ಗೆಲ್ಲೋದು ನಾವೇ. 100 ಪರ್ಸೆಂಟ್ ಈಗಲೇ ಬರೆದುಕೊಂಡು ಇಡಿ’ ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದ ಬಗ್ಗೆ ಹೆಚ್ಚಿನ ಸುದ್ದಿಗೆ ಈ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.