
ಬೆಂಗಳೂರು : ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವವರ ಸಂಖ್ಯೆ 15 ದಾಟದೇ ಅಂತಹ ಯಾವುದೇ ಗುಂಪನ್ನು ತಾವು ಭೇಟಿಯಾಗುವುದಿಲ್ಲ ಮತ್ತು ಈ ಅತೃಪ್ತರಿಗೆ ಭರವಸೆ ಅಥವಾ ಆಶ್ವಾಸನೆ ಬೇಕಿದ್ದರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿಯಾಗಲಿ.
ಹೀಗಂತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇರ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಅತೃಪ್ತ ಪಡೆಯ ನೇತಾರ ರಮೇಶ್ ಜಾರಕಿಹೊಳಿ ನೇತೃತ್ವದ ನಾಲ್ಕು ಮಂದಿ ಶಾಸಕರ ಗುಂಪಿನ ಕಾಂಗ್ರೆಸ್ನಿಂದ ಹೊರ ಬೀಳುವ ಯೋಜನೆ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಹಾಗಂತ ಈ ಪ್ರಯತ್ನ ಸಂಪೂರ್ಣ ನಿಂತಿಲ್ಲ. ಒಳಗೊಳಗೆ ಅತೃಪ್ತ ಶಾಸಕರ ಗುಂಪು 15ರ ಗಡಿ ದಾಟಿಸುವ ಪ್ರಯತ್ನ ನಡೆದೇ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ, ನಾಗೇಂದ್ರ, ಶಂಕರ್ ಸೇರಿದಂತೆ ನಾಲ್ಕು ಮಂದಿ ಶಾಸಕರ ಗುಂಪು ಅಮಿತ್ ಶಾ ಭೇಟಿಗೆ ಪಟ್ಟು ಹಿಡಿದು ದೆಹಲಿಯಲ್ಲಿ ಬೀಡು ಬಿಟ್ಟಿತ್ತು. ರಾಜ್ಯ ನಾಯಕರ ಆಶ್ವಾಸನೆ ಸಾಕಾಗುವುದಿಲ್ಲ. ನೇರವಾಗಿ ಅಮಿತ್ ಶಾ ಅವರೇ ರಂಗ ಪ್ರವೇಶ ಮಾಡಿದರೆ ಮತ್ತಷ್ಟುಅತೃಪ್ತರು ನಮ್ಮ ಜತೆ ಸೇರುತ್ತಾರೆ. ಈ ಸಂದೇಶ ರವಾನಿಸಲು ಅಮಿತ್ ಶಾ ಭೇಟಿ ಮಾಡಿಸುವಂತೆ ಕಾಂಗ್ರೆಸ್ ಅತೃಪ್ತರ ಗುಂಪು ರಾಜ್ಯ ಬಿಜೆಪಿಯ ಉನ್ನತ ನಾಯಕರೊಬ್ಬರನ್ನು ಒತ್ತಾಯಿಸಿದ್ದರು.
ಈ ನಾಯಕರು ವಿತ್ತಸಚಿವ ಅರುಣ್ ಜೇಟ್ಲಿ ಮೂಲಕ ಸದರಿ ವಿಚಾರವನ್ನು ಅಮಿತ್ ಶಾ ಅವರಿಗೆ ಮುಟ್ಟಿಸಿದಾಗ ಅಮಿತ್ ಶಾ ಇಂತಹದೊಂದು ತಾಕೀತು ಮಾಡಿದರು ಎಂದು ಕಾಂಗ್ರೆಸ್ನ ಅತೃಪ್ತ ಶಾಸಕರೊಬ್ಬರ ಆಪ್ತ ಮೂಲಗಳು ಹೇಳುತ್ತವೆ.
‘ಕಾಂಗ್ರೆಸ್ನ ಅತೃಪ್ತ ಶಾಸಕರು ಪಕ್ಷ ತೊರೆದು ಬಿಜೆಪಿಯತ್ತ ಧಾವಿಸುತ್ತಾರೆ. ಇಂತಹವರ ಸಂಖ್ಯೆ 15ಕ್ಕೂ ಹೆಚ್ಚಿದೆ ಎಂದು ಹಲವು ತಿಂಗಳುಗಳಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಲಾಗುತ್ತಿದೆ. ಆದರೆ, ಇಂತಹ ಸಂಖ್ಯೆ ಮುಟ್ಟಲು ಇನ್ನು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇವಲ ನಾಲ್ಕು ಮಂದಿಯನ್ನು ನನ್ನ ಮುಂದೆ ನಿಲ್ಲಿಸಿದರೆ ರಾಷ್ಟ್ರ ಮಟ್ಟದಲ್ಲಿ ತಪ್ಪು ಸಂದೇಶ ರವಾನೆ ಮಾಡಿದಂತೆ ಆಗುತ್ತದೆ. ಹೀಗಾಗಿ ಇಂತಹ ಯಾವುದೇ ಭೇಟಿಯೂ ಸಾಧ್ಯವಿಲ್ಲ. ಆದರೆ, ಉನ್ನತ ನಾಯಕರೊಬ್ಬರ ಭೇಟಿ ಹಾಗೂ ಆಶ್ವಾಸನೆ ಪಡೆಯುವ ಮೂಲಕ ಬೇಲಿ ಮೇಲೆ ಕುಳಿತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ನ ಶಾಸಕರಿಗೆ ಸಂದೇಶ ರವಾನೆ ಮಾಡುವ ಉದ್ದೇಶವಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಇಂತಹ ಶಾಸಕರ ಗುಂಪು (ಅದು ಕೂಡ ಈ ಗುಂಪಿನ ಸಂಖ್ಯೆ ಸಾಕಷ್ಟುಉತ್ತಮಗೊಂಡಾಗ) ಭೇಟಿ ಮಾಡಲಿ. ಇದಾಗದ ಹೊರತು ನೇರ ಭೇಟಿ ಈ ಹಂತದಲ್ಲಿ ಸಾಧ್ಯವೇ ಇಲ್ಲ’ ಎಂದು ಶಾ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ಮಾಡಿ ಅವರಿಂದ ಖಚಿತ ಆಶ್ವಾಸನೆ ಪಡೆದು ರಾಜೀನಾಮೆಗೆ ಮುಂದಾಗಿದ್ದ ಕಾಂಗ್ರೆಸ್ ಅತೃಪ್ತರ ಸಣ್ಣ ಗುಂಪು ತಮ್ಮ ಉದ್ದೇಶ ಈಡೇರದೇ ರಾಜ್ಯಕ್ಕೆ ಹಿಂತಿರುಗಿದೆ. ಆದರೆ, ಅತೃಪ್ತರ ಈ ತಂಡ ಸುಮ್ಮನಾಗಿಲ್ಲ. ಬದಲಾಗಿ ತಮ್ಮ ಗುಂಪಿನ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನ ನಡೆಸಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.