
ಬೆಂಗಳೂರು : ನಿಗಮ ಮಂಡಳಿ ನೇಮಕದ ಬಗ್ಗೆ ಜೆಡಿಎಸ್ ನಾಯಕತ್ವದ ‘ನಿಧಾನದ್ರೋಹ’ ದಿಂದ ಕ್ರುದ್ಧರಾಗಿರುವ ಕಾಂಗ್ರೆಸ್ ಶಾಸಕರು, ಈ ಕುರಿತ ಆದೇಶ ಹೊರಡಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಂಗಳವಾರ (ಜ.8)ವರೆಗೂ ಗಡುವು ವಿಧಿಸಿದ್ದು, ಆ ವೇಳೆಗೆ ಆದೇಶ ಪ್ರಕಟವಾಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಅದು ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಹಂತವನ್ನು ಮುಟ್ಟಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತನ್ಮೂಲಕ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮುಸುಕಿನ ಗುದ್ದಾಟ ಶನಿವಾರ ಮತ್ತೊಂದು ಮಜಲು ಮುಟ್ಟಿದಂತಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಅಂತಿಮಗೊಳಿದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಖುದ್ದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಿ ಜ.7ಕ್ಕೆ 15 ದಿನವಾಗಲಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕ್ರಮ ಕೈಗೊಂಡಿಲ್ಲ. ಉದ್ದೇಶಪೂರ್ವಕವಾಗಿಯೇ ಜೆಡಿಎಸ್ ನಾಯಕತ್ವ ಈ ಧೋರಣೆ ಪ್ರದರ್ಶಿಸುತ್ತಿದ್ದು, ತನ್ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ನ ಅತೃಪ್ತ ಶಾಸಕರಿಗೆ ಸಂದೇಶ ನೀಡಲು ಯತ್ನಿಸುತ್ತಿದ್ದಾರೆ.
ಅಲ್ಲದೆ, ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಜೆಡಿಎಸ್ ನಾಯಕತ್ವವು ಕಾಂಗ್ರೆಸ್ ಜತೆಗಿನ ತನ್ನ ವರ್ತನೆಯಲ್ಲಿ ಭಾರಿ ಬದಲಾವಣೆ ತೋರತೊಡಗಿದೆ. ಇದೇ ಧೋರಣೆ ಮುಂದುವರೆದರೇ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದೂ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ನ ಈ ನಿಧಾನದ್ರೋಹದ ಬಗ್ಗೆ ಶಾಸಕರಾದ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಪಡೆದಿರುವ ಎಸ್.ಟಿ. ಸೋಮಶೇಖರ್, ಡಾ. ಸುಧಾಕರ್, ಬೈರತಿ ಸುರೇಶ್, ಬೈರತಿ ಬಸವರಾಜು, ನಾರಾಯಣರಾವ್ ಸೇರಿದಂತೆ ಹನ್ನೊಂದು ಮಂದಿ ಕಾಂಗ್ರೆಸ್ ಶಾಸಕರು ನಗರದಲ್ಲಿ ಸುಮಾರು ಒಂದೂವರೆ ತಾಸು ಸಭೆ ನಡೆಸಿದರು. ಅನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ಮಾಡಿ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಈ ವೇಳೆ ಶಾಸಕರು, ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಅಂತಿಮಗೊಳಿಸಿರುವ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಹೊರ ಬಿದ್ದು 15 ದಿನ ಕಳೆಯುತ್ತಿದೆ. ಹೀಗಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೇಮಕಾತಿ ಆದೇಶ ಮಾಡದೆ ನೇರವಾಗಿ ರಾಹುಲ್‌ಗಾಂಧಿಯವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಟ್ಟಿಪ್ರಕಟಿಸಿ ಇಷ್ಟುದಿನವಾದರೂ ಸರ್ಕಾರ ನೇಮಕ ಮಾಡಲಿಲ್ಲ ಎಂದರೆ ಸಾರ್ವಜನಿಕವಾಗಿ ಶಾಸಕರಿಗೆ ಅವಮಾನ, ಮುಜುಗರ ಆಗುವುದಿಲ್ಲವೇ? ಇದೇ ಪರಿಸ್ಥಿತಿ ಕುಮಾರಸ್ವಾಮಿ ಅವರಿಗೆ ಬಂದಿದ್ದರೆ ಹೇಗಿರುತ್ತಿತ್ತು. ಕಾಂಗ್ರೆಸ್ ಪಕ್ಷವು ಬೇಷರತ್ ಬೆಂಬಲ ವ್ಯಕ್ತಪಡಿಸಿದ ಬಳಿಕ ಹದಿನೈದು ದಿನಗಳ ಕಾಲ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಲು ಬಿಡದಿದ್ದರೆ ಅವರು ಸಹಿಸಿಕೊಳ್ಳುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಜೆಡಿಎಸ್ ನಡವಳಿಕೆ ನೋಡಿದರೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎನಿಸುತ್ತಿದೆ. ಮಂಗಳವಾರದ ಒಳಗಾಗಿ ನೇಮಕ ಮಾಡದಿದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡುವುದಾಗಿ ಸಿದ್ದರಾಮಯ್ಯ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಎಚ್‌ಡಿಕೆ ಬದಲಾಗಿದ್ದಾರೆ:
ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತುಂಬಾ ಬದಲಾಗಿದ್ದಾರೆ. ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎನಿಸುತ್ತಿದೆ. ಮೋದಿ ಭೇಟಿ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬೆಲೆ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಂದಿಗೆ ಲೋಕಸಭೆ ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ಮಾಡದೆ 12 ಸೀಟುಗಳನ್ನು ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧವಾಗಿ ಜೆಡಿಎಸ್ ಪಕ್ಷದ ನಾಯಕರೆಲ್ಲರೂ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸಿನವರು ತಾವು ಹೇಳಿದಂತೆ ಕೇಳದಿದ್ದರೆ ಬಿಜೆಪಿ ಜತೆ ಸಖ್ಯ ಬೆಳೆಸುವುದಾಗಿ ಪರೋಕ್ಷ ಸಂದೇಶ ನೀಡುವ ಪ್ರಯತ್ನ ಜೆಡಿಎಸ್ ನಾಯಕತ್ವದಿಂದ ನಡೆದಿದೆ. ಇಂತಹ ನಡವಳಿಕೆ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಸ್ಪಂದಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಸರಿಪಡಿಸಲು ಸೋಮವಾರದವರೆಗೂ ತಮಗೆ ಸಮಯಾವಕಾಶವನ್ನು ನೀಡುವಂತೆ ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದವರೆಗೂ ಕಾದು ಅನಂತರ ಮುಂದಿನ ನಿರ್ಧಾರ ಪ್ರಕಟಿಸಲು ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.