- ಅಮೆರಿಕಾ ಮೂಲದ ವ್ಯಕ್ತಿಯೊಬ್ಬ ಇದುವರೆಗೂ ಒಂದು ತೊಟ್ಟು ನೀರನ್ನೂ ಕುಡಿದಿಲ್ಲ
- ಗಾಳಿ, ಬೆಳಕೇ ಈತನ ಆಹಾರ
- ಕುಮಟಾಕ್ಕೆ ಬಂದಿದ್ದಾನೆ ಈ ಅಚ್ಚರಿ ವ್ಯಕ್ತಿ
ಬೆಂಗಳೂರು (ಆ. 08): ಊಟ, ತಿಂಡಿ ಅಷ್ಟೆ ಅಲ್ಲ, ಯಾವ ಆಹಾರವೂ ಇಲ್ಲ. ತೊಟ್ಟು ನೀರೂ ಕುಡಿಯದೆ 8 ವರ್ಷಗಳಿಂದ ಕೇವಲ ಗಾಳಿ, ಬೆಳಕನ್ನೆ ಆಹಾರವನ್ನಾಗಿಸಿಕೊಂಡು ಬದುಕಲು ಸಾಧ್ಯವೇ? ನಿರಂತರ
ಸಾಧನೆಯ ಮೂಲಕ ಅದನ್ನು ಸಾಧ್ಯವಾಗಿಸಿದ ಅಮೆರಿಕದ ವ್ಯಕ್ತಿ ಅಚ್ಚರಿ ಹುಟ್ಟಿಸಿದ್ದಾರೆ.
ಹೌದು, ಇವರೇ 58 ರ ಹರೆಯದ ಎಲಿಟೋಮ್ ಎಲ್ ಅಮೀನ್. 8 ವರ್ಷಗಳಿಂದ ನಿರಾಹಾರಿಯಾಗಿದ್ದಾರೆ. ಅನ್ನಾಹಾರ ಇಲ್ಲದೆ ಹೇಗೆ ಬದುಕಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಲು ಹೊರಟಿದ್ದಾರೆ. ಸಾಧನೆಯ ಜತೆಗೆ ಸಂಶೋಧನೆಯನ್ನೂ ನಡೆಸುತ್ತಿದ್ದು, ಗಟ್ಟಿಮುಟ್ಟಾಗಿದ್ದಾರೆ. ಆಧ್ಯಾತ್ಮಿಕ ಸಾಧನೆಯಿಂದ ತಾವು ಹೀಗಾಗಿದ್ದು ಎಂದು ಅವರು ಹೇಳುತ್ತಾರೆ. ಸಿಸಿ ಕ್ಯಾಮೆರಾ ಅಳವಡಿಸಿ ನನ್ನ ದಿನಚರಿಯನ್ನು ನೋಡಿ ಎಂಬ ಸವಾಲನ್ನೂ ಎಸೆಯುತ್ತಾರೆ. ಯಾವುದೇ ಚಾಲೆಂಜ್ ಸ್ವೀಕರಿಸಲು ಸಿದ್ಧ ಎನ್ನುತ್ತಾರೆ.
undefined
ಕುಮಟಾದ ಹೊಲನಗದ್ದೆ ಬಳಿ ಡಾ.ರವಿರಾಜ್ ಕಡ್ಲೆ ಅವರ ಅಶ್ವಿನಿ ಆಯುರ್ವೇದಿಕ್ ಕೇಂದ್ರ ಇದೆ. ಇಲ್ಲಿ ಕತ್ತಲೆ ಕೋಣೆಯಲ್ಲಿ 30 ಅಥವಾ 40 ಇಲ್ಲವೇ 60 ದಿನಗಳ ಕಾಲ ಇರುವ ಕಾಯಕಲ್ಪ ಚಿಕಿತ್ಸಾ ಪದ್ಧತಿ ಇದೆ. ಇದರಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಡಾ.ರವಿರಾಜ ಕಡ್ಲೆ ಎಲಿಟೋಮ್ ಅವರ ಇತಿಹಾಸವನ್ನೇ ಕೆದಕಿದಾಗ ಇಂತಹ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಇದು ಹೇಗೆ ಸಾಧ್ಯ?:
ಮೊದಲು ಇವರು ವಾರದಲ್ಲಿ ಒಂದು ದಿನ ಮಾತ್ರ ಉಪವಾಸ ಮಾಡಿದರು. ತಿಂಗಳ ತರುವಾಯ ವಾರಕ್ಕೆ ಎರಡು ದಿನ ಉಪವಾಸ ಮಾಡುತ್ತಿದ್ದರು. ಕ್ರಮೇಣ ಅದನ್ನು ಮೂರು ದಿನಕ್ಕೆ ಹೆಚ್ಚಿಸಿದರು. ನಂತರ ವಾರದಲ್ಲಿ 4 ದಿನ ಹೀಗೆ 4-5 ವರ್ಷಗಳಲ್ಲಿ ವಾರಕ್ಕೆ 6 ದಿನ ಉಪವಾಸ ಇರುತ್ತಿದ್ದರು. ನಂತರ ವಾರಕ್ಕೆ ವಾರವೇ ಉಪವಾಸ ಶುರುವಾಯಿತು. ಆದರೆ ದೇಹ ಒಗ್ಗಿಕೊಂಡಿದ್ದರಿಂದ ದೈಹಿಕವಾಗಿ
ಯಾವುದೇ ಸಮಸ್ಯೆಯಾಗಿಲ್ಲ ಎನ್ನುತ್ತಾರೆ. ಮೊದಲು ಮಾಂಸಾಹಾರ, ನಂತರ ಸಸ್ಯಾಹಾರ ಆಮೇಲೆ ದ್ರವ ರೂಪದ ಆಹಾರ ನೀರನ್ನೂ ತ್ಯಜಿಸಿದರು. ಆಹಾರ ಸ್ವೀಕರಿಸುವಾಗ ಇದ್ದ ಜೀರ್ಣಾಂಗ ವ್ಯವಸ್ಥೆ ಆಹಾರ ಸ್ವೀಕರಿಸದೆ ಇದ್ದಾಗ ಬದಲಾಗುತ್ತದೆ.
ದೇಹವು ಮಿದುಳಿನ ಸಂದೇಶವನ್ನು ಅನುಸರಿಸುತ್ತದೆ. ಹೀಗಾಗಿ ಉಪವಾಸಕ್ಕೆ ಮಿದುಳು ಸಿದ್ಧವಾಗುವಂತೆ ಮಾಡಬೇಕು. ಮಿದುಳನ್ನು ಸಿದ್ಧಪಡಿಸಲು ಪ್ರಾಣಾಯಾಮ, ಧ್ಯಾನದಿಂದ ಸಾಧ್ಯ ಎಂದು ವಿವರಿಸುತ್ತಾರೆ.
2 ಗಂಟೆ ನಿದ್ದೆ ಮಾಡಿದರೆ ಸಾಕು:
ದಿನದ 24 ಗಂಟೆಯಲ್ಲಿ ಕೇವಲ 2 ಗಂಟೆ ನಿದ್ದೆ ಮಾಡಿದರೆ ಸಾಕು. ಕಾಯಿಲೆ ಬರಲಾರದು. 18 ವರ್ಷದಿಂದ ತಮಗೆ ಯಾವುದೇ ಕಾಯಿಲೆ ಇಲ್ಲ. ಗಾಳಿ ಬೆಳಕನ್ನು ಆಹಾರವಾಗಿ ಸೇವಿಸಿದರೂ ಗಾಳಿಯ
ಮೂಲಕ ಕಲ್ಮಷ ಹೊಟ್ಟೆಯೊಳಕ್ಕೆ ಸೇರಿಕೊಳ್ಳುತ್ತದೆ. ಹೀಗಾಗಿ ತಿಂಗಳಿಗೊಮ್ಮೆ ಮಲ ವಿಸರ್ಜನೆ ಮಾಡುತ್ತೇನೆ ಎನ್ನುತ್ತಾರೆ. ಅಮೆರಿಕದಲ್ಲಿ ಸ್ವಉದ್ಯೋಗ ಮಾಡಿಕೊಂಡಿರುವ ಇವರು ನಂತರ ಆಧ್ಯಾತ್ಮಿಕತೆಯತ್ತ ವಾಲಿದರು. ಉಪವಾಸ, ಸೂರ್ಯನ ಶಕ್ತಿ, ಪ್ರಾಣಾಯಾಮ, ಧ್ಯಾನದ ಮೂಲಕ ನಿರಂತರ ಸಾಧನೆ ಮಾಡಿದರು. ವೆಬ್‌ಸೈಟ್ ಹಾಗೂ ಫೇಸ್ ಬುಕ್‌ಗಳಲ್ಲಿ ಇವರ ಅನುಯಾಯಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲಿಟೋಮ್ ಆಧ್ಯಾತ್ಮಿಕತೆಯ ನೆಲೆಯಾದ ಭಾರತದಲ್ಲಿ ಎರಡು ತಿಂಗಳು ಕಳೆಯಲಿದ್ದಾರೆ. ಅವರ ವೆಬ್‌ಸೈಟ್ ವಿಳಾಸ www.elitomelamin.com