ಟ್ವೀಟ್‌ ಮಾಡಲು ಹಣ ಪಡೆದಿದ್ದಾಗಿ ಒಪ್ಪಿಕೊಂಡ ಜುಬೇರ್‌: ಸುಪ್ರೀಂಗೆ ಉ.ಪ್ರ. ಪೊಲೀಸ್‌ ಮಾಹಿತಿ

Published : Jul 20, 2022, 01:50 PM IST
ಟ್ವೀಟ್‌ ಮಾಡಲು ಹಣ ಪಡೆದಿದ್ದಾಗಿ ಒಪ್ಪಿಕೊಂಡ ಜುಬೇರ್‌: ಸುಪ್ರೀಂಗೆ ಉ.ಪ್ರ. ಪೊಲೀಸ್‌ ಮಾಹಿತಿ

ಸಾರಾಂಶ

Mohammed Zubair Case: Alt News ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ವಿವಾದಾತ್ಮಕ ಟ್ವೀಟ್‌ ಮಾಡಲು ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರ ಪರ ವಕೀಲೆ ಗರೀಮಾ ಪ್ರಸಾದ್‌ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜುಬೇರ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದವರು ತಿಳಿಸಿದ್ದಾರೆ. 

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಮೇಲೆ ಹಲವಾರು ಎಫ್‌ಐಆರ್‌ಗಳು ದಾಖಲಾಗಿದ್ದು, ಅವರಿನ್ನೂ ನ್ಯಾಯಾಂಗದ ವಶದಲ್ಲಿದ್ದಾರೆ. ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಮೊಹಮ್ಮದ್‌ ಜುಬೇರ್‌ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಲು ಹಣ ಸ್ವೀಕರಿಸುತ್ತಿದ್ದರು ಎಂಬುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಸಲಿಗೆ ಮೊಹಮ್ಮದ್‌ ಜುಬೇರ್‌ ಪತ್ರಕರ್ತನೇ ಅಲ್ಲ, ಕೇವಲ ಭಾವನಾತ್ಮ ಮತ್ತು ಧಾರ್ಮಿಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಲು ಹಣ ಪಡೆಯುತ್ತಿದ್ದ ಎಂದು ಸರ್ಕಾರಿ ವಕೀಲರು ಗಂಭೀರ ಆರೋಪ ಮಾಡಿದ್ದಾರೆ. ಜುಬೇರ್‌ ಟ್ವಿಟ್ಟರ್‌ ಖಾತೆಯಲ್ಲಿ ಮಾಡಿರುವ ಬಹುತೇಕ ಟ್ವೀಟ್‌ಗಳಿಗೆ ಹಣ ಸ್ವೀಕರಿಸಿದ್ದರು ಎಂದು ಆರೋಪಿಸಲಾಗಿದೆ. ವಿಚಾರಣೆ ವೇಳೆ ಖುದ್ದಿ ಜುಬೇರ್ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. 

ನ್ಯಾಯಮೂರ್ತಿ ಚಂದ್ರಚೂಡ್‌ ಅವರ ನ್ಯಾಯಪೀಠದ ಮುಂದೆ ಹಾಜರಾದ ಸರ್ಕಾರಿ ವಕೀಲೆ ಗರೀಮಾ ಪ್ರಸಾದ್‌ ಗುರುತರ ಆರೋಪವನ್ನು ಜುಬೇರ್ ಮೇಲೆ ಮಾಡಿದ್ದಾರೆ. ಒಂದು ಟ್ವೀಟ್‌ಗೆ 12 ಲಕ್ಷ ರೂ ಮತ್ತೊಂದು ಟ್ವೀಟ್‌ಗೆ 2 ಕೋಟಿ ರೂಪಾಯಿಗಳನ್ನು ಜುಬೇರ್‌ ಪಡೆದಿದ್ದಾರೆ. ಮತ್ತು ಅದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಗರೀಮಾ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಹೆಚ್ಚು ವಿವಾದಾತ್ಮಕ ಟ್ವೀಟ್‌ ಮಾಡಿದರೆ ಹೆಚ್ಚು ಹಣವನ್ನು ಪಡೆಯುತ್ತಿದ್ದರು ಎಂದು ಹೇಳಿದ್ದಾರೆ. 

ಉತ್ತರ ಪ್ರದೇಶ ಪೊಲೀಸರು ಹಾಕಿರುವ ವಿವಿಧ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಜುಬೇರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ವಿಚಾರಣೆ ವೇಳೆ ಗರೀಮಾ ಪ್ರಸಾದ್ ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಜುಬೇರ್‌ ವಿರುದ್ಧ ಹಲವು ಆರೋಪಗಳನ್ನು ಪಟ್ಟಿ ಮಾಡಿದ್ದಾರೆ. ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡುವುದೇ ಜುಬೇರ್‌ ನಿಜವಾದ ಕೆಲಸ, ಅವರು ಪತ್ರಕರ್ತರೇ ಅಲ್ಲ ಎಂದು ಆರೋಪಿಸಲಾಗಿದೆ. 

"ಜುಬೇರ್‌ ಸಮಾಜದಲ್ಲಿ ದ್ವೇಷ ಹುಟ್ಟಿಸುವ ಟ್ವೀಟ್‌ಗಳನ್ನು ಮಾತ್ರ ಮಾಡುತ್ತಾರೆ. ಅವರ ಟ್ವೀಟ್‌ಗಳು ದ್ವೇಷವನ್ನು ಬಿತ್ತುತ್ತವೆ. ಟ್ವೀಟ್‌ ಮಾಡಲು ಹಣ ಪಡೆಯುವುದಾಗಿ ವಿಚಾರಣೆ ವೇಳೆ ಅವರೇ ಒಪ್ಪಿಕೊಂಡಿದ್ದಾರೆ. ಆತ ನಿಜವಾಗಲೂ ಪತ್ರಕರ್ತ ಹೌದಾ ಅಲ್ಲವಾ ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ. ಸೋಷಿಯಲ್‌ ಮೀಡಿಯಾದ ಅಡ್ವಾಂಟೇಜ್‌ ಪಡೆದು ಫೋಟೊ, ವಿಡಿಯೋಗಳ ಮೂಲಕ ವಿಷಬೀಜ ಬಿತ್ತುತ್ತಿದ್ದಾರೆ. ಅವರ ಟ್ವೀಟ್‌ ಬೆನ್ನಲ್ಲೇ ಹಲವು ಬಾರಿ ಅಹಿತಕರ ಘಟನೆಗಳು ನಡೆದಿವೆ, ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ," ಎಂದು ವಕೀಲೆ ಗರೀಮಾ ತಿಳಿಸಿದ್ದಾರೆ. 

ಇದಕ್ಕೆ ಪ್ರತ್ಯುತ್ತರವಾದ ವಾದ ಮಂಡಿಸಿದ ಜುಬೇರ್‌ ಪರ ವಕೀಲೆ ವೃಂದಾ ಗ್ರೋವರ್‌, "ಜುಬೇರ್‌ ಟ್ವೀಟ್‌ಗಳನ್ನು ನೀವೇ ಗಮನಿಸಿ ನೋಡಿ. ಅದರಲ್ಲಿ ದ್ವೇಷ ಬಿತ್ತುವ ಯಾವುದೇ ಅಂಶಗಳಿಲ್ಲ. ವಾಹಿನಿಗಳಲ್ಲಿ ವರದಿಯಾದ ಅಂಶಗಳನ್ನು ಹಾಕಿ, ಅದು ತಪ್ಪು ಮಾಹಿತಿಯಾದ್ದರಿಂದ ಪೊಲೀಸ್‌ ಇಲಾಖೆಯನ್ನು ಟ್ಯಾಗ್‌ ಮಾಡಿ ಸತ್ಯಾನ್ವೇಷಣೆ ಮಾಡುವಂತೆ ಅವರು ಕರೆ ಕೊಟ್ಟಿದ್ದಾರಷ್ಟೆ. ಅದು ಹೇಗೆ ದ್ವೇಷ ಬಿತ್ತಿದಂತಾಗುತ್ತದೆ," ಎಂದರು. 

ಇದನ್ನೂ ಓದಿ: Mohammed Zubair ಬಂಧನಕ್ಕೆ ಕ್ಯಾತೆ ಎತ್ತಿದ ಜರ್ಮನಿಗೆ ಚಾಟಿ ಬೀಸಿದ ಭಾರತ

ಮುಂದುವರೆದ ಅವರು, ಜುಬೇರ್‌ ವಿರುದ್ಧ ದೊಡ್ಡ ನೆಟ್‌ವರ್ಕ್‌ ಷಡ್ಯಂತ್ರ ಮಾಡುತ್ತಿದೆ. ಜುಬೇರ್‌ರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಮತ್ತು ಅವರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯ ಅವರಿಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು, ಎಂದು ಮನವಿ ಮಾಡಿದರು. 

"ಹಲವಾರು ಎಫ್‌ಐಆರ್‌ಗಳ ಅಗತ್ಯವಿದೆಯೇ? ದೆಹಲಿ ಪೊಲೀಸರು ಅದಾಗಲೇ ಅವರ ವಿರುದ್ಧ ಎಫ್‌ಐಆರ್ ಮಾಡಿದೆ. ಈಗಾಗಲೇ ಪ್ರಕರಣ ಇದ್ದ ಮೇಲೆ, ಮತ್ತೆ ಎಫ್‌ಐಆರ್‌ಗಳನ್ನು ಹಾಕುವ ಅಗತ್ಯವಿದೆಯೇ," ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಶ್ನಿಸಿದರು. 

ಇದನ್ನೂ ಓದಿ: Sitapur Case ಮೊಹಮ್ಮದ್ ಜುಬೇರ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಇದಕ್ಕೆ ಉತ್ತರಿಸಿದ ವಕೀಲೆ ಗರೀಮಾ ಪ್ರಸಾದ್‌,"ಜುಬೇರ್‌ ಹತ್ತು ವರ್ಷದ ಹೆಣ್ಣು ಮಗುವನ್ನೂ ಬಿಟ್ಟಿಲ್ಲ. ಚಿಕ್ಕ ಹುಡುಗಿಯ ಮುಖವನ್ನೂ ಕಾಣುವಂತೆ ಟ್ವೀಟ್‌ ಮಾಡಿದ್ದಾರೆ. ಅವರ ಟ್ವೀಟ್‌ಗಳು ಗಂಭೀರವಾದವು. ಅವರ ವಿರುದ್ಧ ಪೋಕ್ಸೊ ಪ್ರಕರಣ ಕೂಡ ದಾಖಲಾಗಿವೆ," ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!