ಕರಾವಳಿಯಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್ ವಿವಾದ ಮಂಗಳೂರಿನಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಕಾರಣವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಹಿಜಾಬ್ ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ಹೆಚ್ಚಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜು.20): ಕರಾವಳಿಯಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್ ವಿವಾದ ಮಂಗಳೂರಿನಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಹುಟ್ಟಿಗೆ ಕಾರಣವಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಹಿಜಾಬ್ ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ ಹೆಚ್ಚಾಗಿದ್ದು, ದ.ಕ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಆಡಳಿತ ಮಂಡಳಿಗಳು ಹೊಸ ಕಾಲೇಜು ತೆರೆಯಲು ಗರಿಷ್ಠ ಸಂಖ್ಯೆಯಲ್ಲಿ ಅರ್ಜಿ ಹಾಕಿರುವುದು ಬೆಳಕಿಗೆ ಬಂದಿದೆ.
ದ.ಕ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷ 13 ಮುಸ್ಲಿಂ ಆಡಳಿತಗಳಿಂದ ಪಿಯು ಕಾಲೇಜು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಹೊಸ ಕಾಲೇಜು ತೆರೆಯಲು 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಪಿಯು ಬೋರ್ಡ್‌ಗೆ ಅರ್ಜಿ ಸಲ್ಲಿಸಿದೆ. ದ.ಕ ಜಿಲ್ಲೆಯಲ್ಲಿ ಈ ಬಾರಿ ಬಂದ 14 ಅರ್ಜಿಗಳ ಪೈಕಿ 13 ಮುಸ್ಲಿಂ ಶಿಕ್ಷಣ ಸಂಸ್ಥೆಗಳದ್ದು. 14 ಅರ್ಜಿಗಳ ಪೈಕಿ 2 ಕಾಲೇಜಿಗಷ್ಟೇ ಪಿಯು ಕಾಲೇಜು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಒಂದು ಮುಸ್ಲಿಂ ಮತ್ತು ಒಂದು ಇತರೆ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದೆ. ಗುರುಪುರದ ಮುಸ್ಲಿಂ ಮತ್ತು ಸುಬ್ರಹ್ಮಣ್ಯದ ಒಂದು ಮುಸ್ಲಿಮೇತರ ಆಡಳಿತದ ಕಾಲೇಜಿಗೆ ಅನುಮತಿ ನೀಡಲಾಗಿದೆ.
ಏರ್‌ಪೋರ್ಟ್‌ನಲ್ಲಿ ಮಂಕಿ ಪಾಕ್ಸ್ ಕಟ್ಟೆಚ್ಚರ: ಡಿಸಿ ಸೂಚನೆ
ಉಳಿದ 12 ಮುಸ್ಲಿಂ ಆಡಳಿತದ ಕಾಲೇಜಿನ ಅನುಮತಿ ಅರ್ಜಿಗಳು ಪೆಂಡಿಂಗ್ ಇದ್ದು, ಮೂಲಭೂತ ಸೌಕರ್ಯ ಸೇರಿ ನಾನಾ ಕಾರಣಗಳಿಗೆ ಅರ್ಜಿ ಪೆಂಡಿಂಗ್ ಇಡಲಾಗಿದೆ. ಸೂಕ್ತ ದಾಖಲೆ ಸಲ್ಲಿಸಿ ಮುಂದಿನ ವರ್ಷ ಅರ್ಜಿ ಸಲ್ಲಿಸಲು ಸೂಚಿಸಿರೋ ಪಿಯು ಬೋರ್ಡ್, ಅಗತ್ಯ ದಾಖಲೆ ಸಲ್ಲಿಸಿದರೆ ಈ ವರ್ಷವೇ ಅನುಮತಿ ನೀಡುವ ಸಾಧ್ಯತೆ ಇದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಹಲವೆಡೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಹಿಂದೇಟು ಹಾಕಿದ್ದು, ಹೀಗಾಗಿ ಖಾಸಗಿ ಮುಸ್ಲಿಂ ಕಾಲೇಜುಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಡಿಮ್ಯಾಂಡ್ ಬೆನ್ನಲ್ಲೇ ಮಂಗಳೂರಿನಲ್ಲಿ ಮುಸ್ಲಿಂ ಕಾಲೇಜು ಸ್ಥಾಪನೆಗೆ ಉದ್ಯಮಿಗಳು ಉತ್ಸಾಹ ತೋರಿದ್ದಾರೆ.
ಹಿಜಾಬ್ ವಿವಾದದ ಮಧ್ಯೆ ಶಿಕ್ಷಣದ ಉದ್ಯಮ!: ಶಿಕ್ಷಣ ಕಾಶಿ ಅಂತಾನೇ ಹೆಸರಾದ ಮಂಗಳೂರಿನಲ್ಲಿ ಸದ್ಯ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬರವಿಲ್ಲ. ದ.ಕ ಜಿಲ್ಲೆಯಲ್ಲಿ ನೂರಾರು ಕಾಲೇಜುಗಳಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿದೆ. ಈ ಪೈಕಿ ಕ್ರಿಶ್ಚಿಯನ್ ಆಡಳಿತ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದು, ಈ ಕಾಲೇಜುಗಳಿಗೆ ಭಾರೀ ಡಿಮ್ಯಾಂಡ್ ಇದೆ. ಬಹುತೇಕ ಯಾವುದೇ ಜಾತಿ-ಧರ್ಮಗಳ ಹಂಗಿಲ್ಲದೇ ಈ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳನ್ನೇ ಮಂಗಳೂರಿನ ಜನರು ಆಯ್ದುಕೊಳ್ತಾರೆ. ಆದರೆ ಹಿಜಾಬ್ ವಿವಾದದ ಬಳಿಕ ಪರಿಸ್ಥಿತಿ ಕೊಂಚ ಬದಲಾದಂತೆ ಕಾಣ್ತಿದೆ.
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್‌ಗೆ ಸ್ಪಷ್ಟ ನಿರ್ಬಂಧ ಇರೋ ಕಾರಣದಿಂದ ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಯರು ಇನ್ನು ಮುಂದೆ ಸರ್ಕಾರಿ ಕಾಲೇಜು ಆಯ್ಕೆ ಮಾಡೋದು ಅನುಮಾನ. ಹಾಗಂತ ಕೆಲ ಖಾಸಗಿ ಕಾಲೇಜುಗಳು ಹಿಜಾಬ್‌ಗೆ ಅವಕಾಶ ಕೊಟ್ಟರೂ ಮತ್ತೆ ಕೆಲವು ಕಾಲೇಜುಗಳು ಈಗಾಗಲೇ ಹಿಜಾಬ್ ನಿಷೇಧಿಸಿದೆ. ಹೀಗೆ ಹಿಜಾಬ್ ನಿರ್ಬಂಧಿಸಿದ ಕಾಲೇಜುಗಳಲ್ಲಿ ಕ್ರಿಶ್ಚಿಯನ್ ಆಡಳಿತದ ಕಾಲೇಜುಗಳೂ ಇವೆ. ಹೀಗಾಗಿ ಮುಸ್ಲಿಂ ಪೋಷಕರು ಈ ಬಾರಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡೋದು ಬೇಡ ಅಂತ ಮುಸ್ಲಿಂ ಶಿಕ್ಷಣ ಸಂಸ್ಥೆಗಳತ್ತ ದೃಷ್ಟಿ ನೆಟ್ಟಿದ್ದಾರೆ.
ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮಂಗಳೂರಿಗ! ಯಾರಿವರು? ಹಿನ್ನೆಲೆ ಏನು?
ಆದರೆ ಜಿಲ್ಲೆಯಲ್ಲಿ ಮುಸ್ಲಿಂ ಆಡಳಿತದ ಕಾಲೇಜುಗಳ ಸಂಖ್ಯೆ ಕಡಿಮೆ. ಇರೋ ಕಾಲೇಜುಗಳಿಗೂ ಈ ಹಿಂದೆ ಹೇಳಿಕೊಳ್ಳುವಂತೆ ಅಡ್ಮಿಷನ್ ಆಗಿರಲಿಲ್ಲ. ಆದರೆ ಹಿಜಾಬ್ ವಿವಾದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ದೆಸೆ ಬದಲಿಸಿದಂತೆ ಕಾಣ್ತಿದೆ. ಕಲ್ಲಡ್ಕ ಭಾಗದ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದು ತನ್ನ ಜಾಹೀರಾತಿನಲ್ಲೇ ಹಿಜಾಬ್‌ಗೆ ಅವಕಾಶ ಅಂತ ಹೇಳುವ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರನ್ನ ಸೆಳೆದಿದೆ. ಈ ಮೂಲಕ ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಹಿಜಾಬ್ ವಿವಾದ ಎಜ್ಯುಕೇಶನ್ ಅನ್ನೋ ಸೇವೆಯ ಹೆಸರಿನ ಉದ್ಯಮದಲ್ಲಿ ಮತ್ತೊಂದು ಇಬ್ಬಾಗದತ್ತ ಹೆಜ್ಜೆ ಹಾಕಿದಂತೆ ಕಾಣ್ತಿದೆ.