ಬಿಜೆಪಿಗೆ ಮತ್ತೊಂದು ಶಾಕ್ : ದೂರಾಗಲಿದೆಯಾ ಮೈತ್ರಿ ಪಕ್ಷ ..?

By Web DeskFirst Published Dec 29, 2018, 2:55 PM IST
Highlights

ಲೋಕಸಭಾ ಚುನಾವಣೆ  ಸಮೀಪಿಸುತ್ತಿರುವ ಹೊತ್ತಲ್ಲೇ ಪಂಚರಾಜ್ಯಗಳನ್ನು ಕಳೆದುಕೊಂಡ ಬಿಜೆಪಿಯಿಂದ ಕೆಲ ಮೈತ್ರಿ ಪಕ್ಷಗಳೂ ದೂರಾಗಿವೆ. ಇದೀಗ ಮತ್ತೊಂದು ಮೈತ್ರಿ ಪಕ್ಷ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ. 

ಲಕ್ನೋ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಒಂದರ ಮೇಲೊಂದು ಹಿನ್ನಡೆ ಎದುರಾಗುತ್ತಿದೆ. 

NDA ಮತ್ತೊಂದು ಮೈತ್ರಿಪಕ್ಷವಾದ ಅಪ್ನಾ ದಳ್ ಮುಖಂಡರು ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಬಿಜೆಪಿ ಮುಖಂಡರ ವರ್ತನೆಯಿಂದ ಬೇಸತ್ತು ಮೋದಿ ಅವರ ವಾರಣಾಸಿ ಹಾಗೂ ಘಾಜಿಪುರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ತೀರ್ಮಾನ ಮಾಡಿದ್ದಾರೆ. 

ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಪಕ್ಷವಾದ ಅಪ್ನಾ ದಳ್ ಮುಖಂಡರು ಈ ಮೂಲಕ  ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 

ಬಿಜೆಪಿ ಮುಖಂಡರ ವರ್ತನೆ ಅತ್ಯಂತ ಅಸಮಾಧಾನಕರವಾಗಿದೆ. ಕೆಳವರ್ಗದ ಜನರ ಬಳಿ ನಡೆದುಕೊಳ್ಳುವ ರೀತಿ ಸರಿ ಇಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದು, ಈ ಸಮಸ್ಯೆ ಬಗೆಹರಿಯುವರೆಗೂ ಉತ್ತರ ಪ್ರದೇಶ ಸರ್ಕಾರದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಪ್ನಾ ದಳ್ ಮುಖಂಡ ಆಶಿಶ್ ಪಟೇಲ್ ಹೇಳಿದ್ದಾರೆ. 

ಅಲ್ಲದೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಾರೆ ಎನ್ನುವ ನಂಬಿಕೆ ಇದೆ, ಪಕ್ಷಗಳ ನಡುವೆ ಇರುವ ಅಸಮಾಧಾನ ಶೀಘ್ರ ಶಮನವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

ಲೋಕಸಭಾ ಚುನಾವಣೆ :  ಈಗಾಗಲೇ ಪಕ್ಷ  ಮುಂದಿನ ಲೋಕಸಭಾ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಈ ವೇಳೆ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.

ಈಗಾಗಲೇ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಉಪೇಂದ್ರ ಕುಶ್ವಾ ನೇತೃತ್ವದ RLSP ಕೂಡ NDA ಮೈತ್ರಿಕೂಟದಿಂದ ದೂರ ಸರಿದಿವೆ. 

click me!