
ನವದೆಹಲಿ(ಡಿ.29): ಗಡಿಯಲ್ಲಿ ಉದ್ವಿಗ್ನತೆ, ಚೀನಿ ಸೈನಿಕರ ಉಪಟಳ, ಭಾರತೀಯ ಯೋಧರ ಉತ್ತರ, ಇನ್ನೇನು ಭಾರತ-ಚೀನಾ ನಡುವೆ ಘನಘೋರ ಯುದ್ಧ...ಬರೀ ಇಂತವೇ ಸುದ್ದಿಗಳನ್ನು ಓದ, ನೋಡಿರುವ ನಮಗೆಲ್ಲಾ ಇಲ್ಲೊಂದು ಅಪರೂಪದ ವಿಡಿಯೋ 'ಅಸಲಿ ಕಹಾನಿ'ಯನ್ನು ಬಿಚ್ಚಿಟ್ಟಿದೆ.
ಡೋಕ್ಲಾಮ್ ವಿವಾದದ ಬಳಿಕ ಇನ್ನೇನು ಭಾರತ ಮತ್ತು ಚೀನಿ ಸೈನಿಕರು ಯುದ್ಧಭೂಮಿಯಲ್ಲಿ ಎದುರುಗೊಳ್ಳಲಿದ್ದಾರೆ ಎಂದೇ ಬಹುತೇಕರ ಅಭಿಪ್ರಾಯವಾಗಿತ್ತು. ಎರಡೂ ಕಡೆಯ ಸಾಮಾಜಿಕ ಜಾಲತಾಣಗಳ ವೀರರಂತೂ ನುಗ್ಗಿಬಿಡಿ, ಹೊಡೆದುಬಿಡಿ ಅಂತೆಲ್ಲಾ ಅಬ್ಬರಿಸಿ ಹೊದ್ದು ಮಲಗಿದ್ದೂ ಆಯಿತು.
ಆದರೆ ತಮ್ಮ ತಮ್ಮ ಗಡಿ ಕಾಯುವ ಕಾಯಕದಲ್ಲಿ ನಿರತರಾಗಿರುವ ಸೈನಿಕರು ಮಾತ್ರ ತಮ್ಮ ದೋಸ್ತಿಯನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಗಡಿಯ ಸುರಕ್ಷತೆ ವಿಷಯ ಬಂದಾಗ ಪರಸ್ಪರ ಬಂದೂಕು ಗುರಿ ಇಡಲು ಎಂದೂ ಹಿಂಜರಿದವರಲ್ಲ ಈ ಸೈನಿಕರು. ಆದರೆ ಅವರಿಗೇನಿದ್ದರೂ ದೇಶ ಮೊದಲು, ದ್ವೇಷ ನಂತರ.
ಆದರೆ ಹಿಂದಿ-ಚೀನಿ ಭಾಯೀ ಭಾಯೀ ಘೋಷಣೆಯನ್ನು ಅಷ್ಟು ಸುಲಭವಾಗಿ ಎರಡೂ ದೇಶಗಳು ಮರೆತಿಲ್ಲ. ಅದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸಿದೆ. ಭಾರತ ಮತ್ತು ಚೀನಾ ಸೈನಿಕರ ಜಂಟಿ ಕವಾಯತು ವೇಳೆ ಚೀನಿ ಸೈನಿಕನೋರ್ವ ಭಾರತೀಯ ಸೇನಾ ಅಧಿಕಾರಿಗೆ ತನ್ನ ಸಾಂಪ್ರದಾಯಿಕ ತಾಯ್ ಚೀ ಸಮರ ಕಲೆ ಹೇಳಿ ಕೊಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಚೀನಿ ಸೈನಿಕನೋರ್ವ ಅತ್ಯಂತ ಆತ್ಮೀಯವಾಗಿ ಭಾರತೀಯ ಅಧಿಕಾರಿ ಜೊತೆ ಬೆರೆತಿದ್ದಲ್ಲದೇ, ಅವರಿಗೆ ತಾಯ್ ಚಿ ಸಮರಕಲೆಯನ್ನು ಹೇಳಿ ಕೊಟ್ಟಿದ್ದಾನೆ. ಭಾರತೀಯ ಅಧಿಕಾರಿ ಕೂಡ ಶ್ರದ್ಧೆಯಿಂದ ತಾಯ್ ಚಿ ಸಮರಕಲೆ ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.