ಪಾಕ್‌ನಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳಿಗೆ ಭಾರತೀಯರಿಗೆ ಪ್ರವೇಶ?

Published : Nov 30, 2018, 07:59 AM IST
ಪಾಕ್‌ನಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳಿಗೆ ಭಾರತೀಯರಿಗೆ ಪ್ರವೇಶ?

ಸಾರಾಂಶ

ಆಕ್ರಮಿತ ಕಾಶ್ಮೀರದ ಶಾರದಾ ಪೀಠಕ್ಕೆ ಹಿಂದೂಗಳಿಗೆ ಪ್ರವೇಶ? | ಭಾರತದ ಪ್ರಸ್ತಾವ ಪರಿಶೀಲಿಸಲು ಸಿದ್ಧ: ಇಮ್ರಾನ್‌ ಖಾನ್‌  | ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದ ಶೃಂಗೇರಿ ಮಠ |  ಮೋದಿ ಜತೆ ಚರ್ಚೆಗೆ ಇಮ್ರಾನ್‌ ಉತ್ಸಾಹ

ಇಸ್ಲಾಮಾಬಾದ್‌/ಶ್ರೀನಗರ (ನ. 30):  ‘ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಶಾರದಾ ಪೀಠ ಸೇರಿದಂತೆ, ಪಾಕಿಸ್ತಾನದಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲು ಸಿದ್ಧನಿದ್ದೇನೆ’ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಭರವಸೆ ನೀಡಿದ್ದಾರೆ.

‘ಕರ್ತಾರ್‌ಪುರ ಕಾರಿಡಾರ್‌ ಮೂಲಕ ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರಕ್ಕೆ ಸಿಖ್‌ ಭಕ್ತರಿಗೆ ಅವಕಾಶ ನೀಡಲಾಗಿದೆ. ಇದೇ ಮಾದರಿಯಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳಾದ ಕಾಶ್ಮೀರದ ಶಾರದಾ ಪೀಠ (ಸರ್ವಜ್ಞ ಪೀಠ), ಕತಾಸ್‌ರಾಜ್‌ ಶಿವ ದೇವಾಲಯ ಹಾಗೂ ಇತರ ಹಿಂದೂ ದೇವಾಲಯಗಳನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶ ನೀಡುವ ಪ್ರಸ್ತಾವಗಳನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ’ ಎಂದು ಇಮ್ರಾನ್‌ ಹೇಳಿದ್ದಾರೆ.

ಕರ್ತಾರ್‌ಪುರ ಕಾರಿಡಾರ್‌ ಅಡಿಗಲ್ಲು ಸಮಾರಂಭದ ವರದಿಗಾರಿಕೆಗೆ ಆಗಮಿಸಿದ್ದ ಭಾರತೀಯ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಇಮ್ರಾನ್‌ ಈ ಮಾತುಗಳನ್ನಾಡಿದರು ಎಂದು ವರದಿಗಳು ಹೇಳಿವೆ.

ಇಮ್ರಾನ್‌ರ ಈ ಕ್ರಮವನ್ನು ಸ್ವಾಗತಿಸಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ‘ಇದೊಂದು ಸ್ವಾಗತಾರ್ಹ ಪ್ರಸ್ತಾವ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಮ್ರಾನ್‌ರ ಸ್ನೇಹಹಸ್ತ ಪರಿಗಣಿಸಗೇಕು. ಇದರಿಂದ ಎರಡೂ ದೇಶಗಳ ನಡುವೆ ಶಾಂತಿಯ ಸೇತುವೆ ನಿರ್ಮಾಣವಾಗುತ್ತದೆ’ ಎಂದಿದ್ದಾರೆ.

ಶೃಂಗೇರಿ ಮಠ ಆಗ್ರಹಿಸಿತ್ತು

ಶಾರದಾ ಸರ್ವಜ್ಞ ಪೀಠಕ್ಕೆ ಪ್ರತಿವರ್ಷ ಭಕ್ತರು ಹೋಗಿಬರಲು ಅವಕಾಶ ಮಾಡಿಕೊಡುವಂತೆ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್‌.ಗೌರಿಶಂಕರ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕಳೆದ ತಿಂಗಳು ಮನವಿ ಮಾಡಿದ್ದರು. ಅಲ್ಲದೆ, ಪೀಠದ ಪುನರುತ್ಥಾನಕ್ಕಾಗಿ ಮಠ ಸಿದ್ಧವಿದೆ ಎಂದಿದ್ದರು.

(ಅಕ್ಟೋಬರ್‌ 26ರಂದು ಈ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು)

ಸ್ಥಳ ಐತಿಹ್ಯ

ಅದ್ವೈತ ಸಿದ್ಧಾಂತ ಪ್ರತಿಪಾದಕ ಆದಿಗುರು ಶ್ರೀ ಶಂಕರ ಭಗವತ್ಪಾದರು ಸನಾತನ ಧರ್ಮದ ಪ್ರಚಾರಕ್ಕಾಗಿ ಭರತ ಖಂಡದ ಎಲ್ಲೆಡೆ ಸಂಚರಿಸಿದ್ದರು. ಶಂಕರರು ಸಂಚರಿಸಿ ಕಾಶ್ಮೀರದಲ್ಲಿನ ಶ್ರೀ ಶಾರದಾ ಮಂದಿರಕ್ಕೆ ಹೋದಾಗ ಮಂದಿರದಲ್ಲಿ ಸರ್ವಜ್ಞ ಪೀಠವಿತ್ತು. ಶಂಕರರು ವಿದ್ವಾಂಸರ ಜತೆಗೆ ವಾದದಲ್ಲಿ ಗೆದ್ದು ಅಲ್ಲಿದ್ದ ಸರ್ವಜ್ಞ ಪೀಠವನ್ನು ಏರಿದ್ದರು ಎಂಬ ಇತಿಹಾಸವಿದೆ. ಭಾರತ-ಪಾಕ್‌ ವಿಭಜನಾನಂತರ ಆ ಪೀಠ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದೆ. ಶ್ರೀ ಶಾರದಾ ಗ್ರಾಮವೆಂದು ಪ್ರಸಿದ್ಧಿ ಪಡೆದಿರುವ ಆ ಸ್ಥಳ ಹಿಂದುಗಳ ಪವಿತ್ರ ಕ್ಷೇತ್ರ. ಕಾಶ್ಮೀರದ ಬಾರಾಮುಲ್ಲಾದಿಂದ 42 ಮೈಲು ದೂರವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!