
ನವದೆಹಲಿ(ಅ. 12): ಮಗಳನ್ನು ಕೊಂದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ಹೈಕೋರ್ಟ್ ಬಿಡುಗಡೆಯ ಭಾಗ್ಯ ಕಲ್ಪಿಸಿದೆ. 9 ವರ್ಷಗಳ ಹಿಂದಿನ ಆರುಷಿ ತಲ್ವಾರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆ ಇರುವುದರಿಂದ ಅಲಹಾಬಾದ್ ಹೈಕೋರ್ಟ್ ತಲ್ವಾರ್ ದಂಪತಿಯನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ. 2013ರಲ್ಲಿ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಬಿಐ ಕೋರ್ಟ್ ನೀಡಿದ್ದ ತೀರ್ಪನ್ನು ಉಚ್ಚ ನ್ಯಾಯಾಲಯ ತಲೆಕೆಳಗು ಮಾಡಿದೆ.
ತಲ್ವಾರ್ ದಂಪತಿ ವಿರುದ್ಧ ಸಿಬಿಐ ಸಮರ್ಪಕ ಸಾಕ್ಷ್ಯಾಧಾರ ಕಲೆಹಾಕಲು ವಿಫಲವಾಗಿದೆ. ಕೇವಲ ಅನುಮಾನದ ಮೇಲೆ ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ತಲ್ವಾರ್ ದಂಪತಿಯು ತಮ್ಮ ಪುತ್ರಿ ಆರುಷಿಯನ್ನು ಕೊಂದಿರಲಿಲ್ಲ ಎಂದು ಹೈಕೋರ್ಟ್'ನ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ತೀರ್ಪನ್ನು ತಲ್ವಾರ್ ದಂಪತಿ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಜೈಲಿನಲ್ಲೇ ನ್ಯಾಯಾಲಯದ ಕಲಾಪವನ್ನು ವೀಕ್ಷಿಸುತ್ತಿದ್ದ ನೂಪುರ್ ಮತ್ತು ರಾಜೇಶ್ ದಂಪತಿಯ ಮೊಗದಲ್ಲಿ ಕೋರ್ಟ್ ತೀರ್ಪು ಬರುತ್ತಿದ್ದಂತೆಯೇ ಮಂದಹಾಸ ಮೂಡಿತು. ಮಗಳನ್ನು ಕಳೆದುಕೊಂಡ ದುಃಖದ ಜೊತೆಗೆ ಆರೋಪ, ಜೈಲುಶಿಕ್ಷೆಯ ವಿಚಾರಗಳು ಮಾನಸಿಕವಾಗಿ ತಮ್ಮನ್ನು ಚಿತ್ರಹಿಂಸೆಗೀಡು ಮಾಡಿದ್ದರು. ಇದೀಗ ಸಮಾಧಾನವಾಗಿದೆ ಎಂದು ಈ ದಂಪತಿ ಹೇಳಿದ್ದಾರೆ.
ಆದರೆ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲು ಸಿಬಿಐ ನಿರ್ಧರಿಸಿದೆ. ಅದಕ್ಕೂ ಮೊದಲು ಹೈಕೋರ್ಟ್ ತೀರ್ಪನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಆ ಬಳಿಕ ಮುಂದಿನ ನಡೆ ನಿರ್ಧರಿಸಲು ಸದ್ಯಕ್ಕೆ ಸಿಬಿಐ ನಿಶ್ಚಯಿಸಿದೆ.
ಏನಿದು ಪ್ರಕರಣ?:
2008ರ ಮೇ ತಿಂಗಳಲ್ಲಿ ನೋಯಿಡಾದ ತನ್ನ ಮನೆಯಲ್ಲಿ 14 ವರ್ಷದ ಹುಡುಗಿ ಆರುಷಿ ತಲ್ವಾರ್ ಮೃತಪಟ್ಟಿರುತ್ತಾಳೆ. ಆ ಮನೆಯ ಕೆಲಸದಾಳು 45 ವರ್ಷದ ಹೇಮರಾಜ್ ಜೊತೆ ಆರುಷಿಗೆ ಅನೈತಿಕ ಸಂಬಂಧವಿತ್ತು. ಆರುಷಿಯನ್ನು ಹೇಮರಾಜ್'ನೇ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತದೆ. ಆದರೆ, ಎರಡು ದಿನಗಳ ಬಳಿಕ ಹೇಮರಾಜ್'ನ ಶವ ಕೂಡ ಮನೆಯ ಟೆರೇಸ್'ನಲ್ಲಿ ಪತ್ತೆಯಾಗುತ್ತದೆ. ಅಲ್ಲಿಗೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿರುತ್ತದೆ. ಆರುಷಿ ಮತ್ತು ಹೇಮರಾಜ್ ಮಧ್ಯೆಯ ಲೈಂಗಿಕ ಸಂಬಂಧವನ್ನು ಸಹಿಸದ ಆರುಷಿ ತಂದೆ ರಾಜೇಶ್ ತಲ್ವಾರ್ ಅವರೇ ಈ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತದೆ. ಪ್ರಕರಣದ ತನಿಖೆ ನಡೆಸುವ ಸಿಬಿಐ ಕೂಡ ಇದೇ ಶಂಕೆಯ ಆಧಾರದ ಮೇಲೆ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ರಾಜೇಶ್ ತಲ್ವಾರ್ ಮತ್ತವರ ಪತ್ನಿ ವಿರುದ್ಧ ಆರೋಪಪಟ್ಟಿ ದಾಖಲು ಮಾಡುತ್ತದೆ. ಸಿಬಿಐ ಕೋರ್ಟ್ ಕೂಡ ತಲ್ವಾರ್ ದಂಪತಿಯನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.