
ಸಿಕಾರ್(ಅ.12): ಹಿಂದು ವಿವಾಹದ ವೇಳೆ ನೂತನ ವಧು-ವರರು ಅಗ್ನಿ ಕುಂಡದ ಸುತ್ತಲೂ 7 ಸುತ್ತು ಸುತ್ತಿ ಸಪ್ತಪದಿ ತುಳಿದು ಜೀವನವನ್ನು ಒಟ್ಟಾಗಿ ಸಂಭ್ರಮದಿಂದ, ಜೊತೆಜೊತೆಯಾಗಿ, ಒಬ್ಬರಿಗೊಬ್ಬರು ಹೊಂದಿಕೊಂಡು ನಡೆಯುವ ಘೋಷಣೆ ಮಾಡುತ್ತಾರೆ. ಇದು ತಲೆತಲಾಂತರಗಳಿಂದಲೂ ನಡೆದು ಬಂದ ಸಂಪ್ರದಾಯ. ಆದರೆ ರಾಜಸ್ಥಾನದಲ್ಲಿ ಇನ್ನು ಮುಂದೆ ನಡೆಯುವ ವಿವಾಹದಲ್ಲಿ ನೂತನ ವಧು-ವರರು ಅಗ್ನಿಕುಂಡದ ಸುತ್ತಲೂ 7ರ ಬದಲು 8 ಸುತ್ತು ಹಾಕಿ ಸಪ್ತಪದಿ ಬದಲು ಅಷ್ಟಪದಿ ತುಳಿಯುವುದು ಕಂಡುಬಂದರೆ ಅಚ್ಚರಿ ಇಲ್ಲ!
ಹೌದು. ರಾಜಸ್ಥಾನದ ಸಿಕಾರ್ ಜಿಲ್ಲಾಡಳಿತ, ಜಿಲ್ಲೆಯ ಅರ್ಚಕರಿಗೆ ಇನ್ನು ಮುಂದೆ ಸಪ್ತಪದಿ ಬದಲು ಅಷ್ಟಪದಿ ಸೂತ್ರ ಜಾರಿಗೆ ತನ್ನಿ ಎಂದು ಮನವಿ ಮಾಡಿಕೊಂಡಿದೆ. ಇದೇನಿದು ಹೊಸ ಅವತಾರ ಎಂದಿರಾ? ಇಂಥದ್ದೊಂದು ಯೋಜನೆ ಹಿಂದೆ ಅಪರೂಪದ ಕಾಳಜಿ ಇದೆ. ರಾಜಸ್ಥಾನದಲ್ಲಿ ಹೆಣ್ಣು ‘ಭ್ರೂಣ ಹತ್ಯೆ ಅತ್ಯಂತ ಗಂಭೀರ ಪ್ರಮಾಣದಲ್ಲಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಪ್ರತಿ 100 ಗಂಡು ಮಕ್ಕಳಿಗೆ 90 ಹೆಣ್ಣು ಮಕ್ಕಳು ಮಾತ್ರ ಜನಿಸುತ್ತಾರೆ. ಅದರಲ್ಲೂ ಸಿಕಾರ್ ಜಿಲ್ಲೆಯಲ್ಲಿ ಪ್ರತಿ 100 ಗಂಡುಮಕ್ಕಳಿಗೆ 85ಕ್ಕಿಂತ ಹೆಣ್ಣುಮಕ್ಕಳು ಮಾತ್ರವೇ ಇದ್ದಾರೆ. ಕಾರಣ, ಹೆಣ್ಣು ‘ಭ್ರೂಣ ಹತ್ಯೆ.
ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾಡಳಿತ, ಇನ್ನು ಮುಂದೆ ವಿವಾಹ ಸಂದರ್ಭದಲ್ಲೇ ‘ನಾವು ಹೆಣ್ಣು ಭ್ರೂಣ ಹತ್ಯೆ ಮಾಡುವುದಿಲ್ಲ. ನಮಗೆ ಹುಟ್ಟುವುದು ಹೆಣ್ಣು ಮಗುವಾದರೂ ಅದನ್ನು ನಾವು ಮನಃಪೂರ್ವಕವಾಗಿ ಸ್ವೀಕರಿಸಲಿದ್ದೇವೆ’ ಎಂದು ವಧು-ವರರಿಂದ ವಿವಾಹ ಮಂಟಪದಲ್ಲೇ ವಚನ ಪಡೆಯುವ ಹೊಸ ಯೋಜನೆ ಜಾರಿಗೆ ಮುಂದಾಗಿದೆ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲೆಯ ಅರ್ಚಕರ ಜೊತೆ ಮಾತುಕತೆ ನಡೆಸಿರುವ ಜಿಲ್ಲಾಡಳಿತ, ಸಂಪ್ರದಾಯದಂತೆ ಸಪ್ತಪದಿ ತುಳಿದ ಬಳಿಕ, ಮತ್ತೊಂದು ಮಂತ್ರವನ್ನು ಜಪಿಸಿ ಅಲ್ಲಿಸಿ ಹೆಣ್ಣು ಭದರೂಣ ಹತ್ಯೆ ತಡೆಯುವ ಬಗ್ಗೆ ನೂತನ ವಧು-ವರರಿಂದ ವಚನ ಪಡೆಯಿರಿ. ಸಪ್ತಪದಿ ಬದಲು ಅಷ್ಟಪದಿ ಹಾಕಿಸಿ. ಈ ಮೂಲಕ ಹೆಣ್ಣು ಭ್ರೂಣ ಹತ್ಯೆಯ ನಮ್ಮ ಆಂದೋಲನಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.