ಕೆಲಸ ಬಿಟ್ಟು ಸಮಾಜ ಸೇವೆಗೆ ಮುಂದಾದ ವಿಶ್ವದ ಟಾಪ್ ಶ್ರೀಮಂತ

By Web DeskFirst Published Sep 9, 2018, 12:43 PM IST
Highlights

ವಿಶ್ವದ ಟಾಪ್‌ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಅವರು ಸೋಮವಾರ 54ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಂದೇ ನಿವೃತ್ತರಾಗಲು ನಿರ್ಧರಿಸಿದ್ದಾರೆ. ನಿವೃತ್ತಿ ಬಳಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಪ್ರಕಟಿಸಿದ್ದಾರೆ.

ಬೀಜಿಂಗ್‌: ವಿಶ್ವದ ಟಾಪ್‌ ಶ್ರೀಮಂತರಲ್ಲಿ ಒಬ್ಬರಾಗಿರುವ ಚೀನಾದ ಇ-ಕಾಮರ್ಸ್‌ ಕಂಪನಿ ‘ಅಲಿಬಾಬಾ’ದ ಮುಖ್ಯಸ್ಥ ಜಾಕ್‌ ಮಾ ಅವರು ಸೋಮವಾರ 54ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಂದೇ ನಿವೃತ್ತರಾಗಲು ನಿರ್ಧರಿಸಿದ್ದಾರೆ. ನಿವೃತ್ತಿ ಬಳಿಕ ಶಿಕ್ಷಣಕ್ಕೆ ಸಂಬಂಧಿಸಿದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಪ್ರಕಟಿಸಿದ್ದಾರೆ.

1999ರಲ್ಲಿ ಅಲಿಬಾಬಾ ಕಂಪನಿ ಹುಟ್ಟುಹಾಕುವ ಮುನ್ನ ಜಾಕ್‌ ಮಾ ಅವರು ಇಂಗ್ಲಿಷ್‌ ಶಿಕ್ಷಕರಾಗಿದ್ದರು. ಅಲಿಬಾಬಾ ಕಂಪನಿಯ ಸಹಸಂಸ್ಥಾಪಕರಾಗಿರುವ ಅವರು ಸದ್ಯ 2.7 ಲಕ್ಷ ಕೋಟಿ ರು.ನಷ್ಟುಆಸ್ತಿ ಹೊಂದಿದ್ದಾರೆ.

ಸೋಮವಾರ 54ನೇ ಜನ್ಮದಿನದಂದು ನಿವೃತ್ತಿಯಾಗುತ್ತಿದ್ದೇನೆ. ಆದರೆ ಇದು ಯುಗಾಂತ್ಯವಲ್ಲ. ಯುಗಾರಂಭ ಎಂದು 2013ರಲ್ಲೇ ಅಲಿಬಾಬಾ ಕಂಪನಿಯ ಸಿಇಒ ಸ್ಥಾನ ತ್ಯಜಿಸಿದ್ದ ಜಾಕ್‌ ಮಾ ತಿಳಿಸಿದ್ದಾರೆ.

ವಿಶೇಷ ಎಂದರೆ, ಚೀನಾದ ಕಮ್ಯುನಿಸ್ಟ್‌ ಪಕ್ಷ ಅಮೆರಿಕದ ದ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗೆ ನಿಷೇಧ ಹೇರಿದೆ. ಅದೇ ಪತ್ರಿಕೆಯಲ್ಲಿ ಜಾಕ್‌ ಮಾ ನಿವೃತ್ತಿ ನಿರ್ಧಾರ ಘೋಷಣೆ ಮಾಡಿದ್ದಾರೆ.

ಚೀನಾದ ಪೂರ್ವ ಝೆಜಿಯಾಂಗ್‌ ಪ್ರಾಂತ್ಯದ ಹಾಂಗ್‌ಝೌನ ಬಡ ಕುಟುಂಬದಲ್ಲಿ ಜನಿಸಿದ ಜಾಕ್‌ ಮಾ ಅವರು, ವಿಶ್ವವಿದ್ಯಾಲಯವೊಂದರಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿದ್ದರು. ಇಂಟರ್ನೆಟ್‌ ಅಬ್ಬರ ಆರಂಭವಾದಾಗ ಉದ್ಯೋಗ ತ್ಯಜಿಸಿ, ಕಂಪನಿ ಹುಟ್ಟು ಹಾಕಿದ್ದರು. ಸ್ನೇಹಿತರಿಂದ 40 ಲಕ್ಷ ರು. ಸಾಲ ಪಡೆದು, ಹ್ಯಾಂಗ್‌ಝೌನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅವರು ಆರಂಭಿಸಿದ ಅಲಿಬಾಬಾ ಕಂಪನಿಯ ಮೌಲ್ಯ ಇಂದು 30 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ರೀತಿಯ ಕಂಪನಿ ಇದಾಗಿದ್ದು, ಚೀನಾದಲ್ಲಿ ಅತ್ಯಂತ ಜನಪ್ರಿಯ. ಭಾರಿ ಮೊತ್ತದ ವಹಿವಾಟು ನಡೆಸುತ್ತದೆ.

click me!