
ಲಕ್ನೋ(ಅ. 23): ಉತ್ತರಪ್ರದೇಶದಲ್ಲಿ ಯಾದವೀ ಕಲಹ ತಾರಕಕ್ಕೇರುತ್ತಿದೆ. ಅಪ್ಪ ಮುಲಾಯಂ ಸಿಂಗ್ ಯಾದವ್ ಮತ್ತು ಮಗ ಅಖಿಲೇಶ್ ಯಾದವ್ ನಡುವಿನ ಸಮರ ಕೈಮೀರುವ ಹಂತ ತಲುಪುತ್ತಿದೆ. ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಅವರಿಗೆ ನಿಷ್ಠರಾಗಿರುವ ನಾಲ್ಕು ಸಚಿವರನ್ನು ಸಿಎಂ ಅಖಿಲೇಶ್ ಯಾದವ್ ತಮ್ಮ ಸಂಪುಟದಿಂದ ಕಿತ್ತುಬಿಸಾಡಿದ್ದಾರೆ. ಇನ್ನೊಂದೆಡೆ, ಅಖಿಲೇಶ್ ಯಾದವ್ ಅವರಿಗೆ ನಿಷ್ಠರಾಗಿದ್ದ ರಾಮಗೋಪಾಲ್ ಯಾದವ್ ಅವರನ್ನು ಮುಲಾಯಂ ಸಿಂಗ್ ಯಾದವ್ ನಿರ್ದೇಶನದ ಮೇರೆ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಅಖಿಲೇಶ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್, ನಾರದ್ ರಾಯ್, ಓಂ ಪ್ರಕಾಶ್ ಸಿಂಗ್ ಮತ್ತು ಸಯೆದಾ ಶದಾಬ್ ಫಾತೀಮಾ ಅವರು ಸಂಪುಟದಿಂದ ಕೈಬಿಡಲಾದ ಸಚಿವರಾಗಿದ್ದಾರೆ. ಮುಲಾಯಂಗೆ ಬಹಿರಂಗವಾಗಿಯೇ ನಿಷ್ಠೆ ತೋರುತ್ತಿದ್ದ ಈ ನಾಲ್ವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿ ಅಖಿಲೇಶ್ ಅವರು ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು. ರಾಜ್ಯಪಾಲರು ಕೂಡಲೇ ಮನವಿಯನ್ನು ಪುರಸ್ಕರಿಸಿದರು.
ಇದಾದ ಕೆಲ ಹೊತ್ತಿನಲ್ಲಿ ಶಿವಪಾಲ್ ಯಾದವ್ ತಮ್ಮ ಸೋದರ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾಗುತ್ತಾರೆ. ಅದಾದ ಬಳಿಕ ಮುಲಾಯಂ ಪಾಳಯಕ್ಕೆ ಟಾರ್ಗೆಟ್ ಆಗಿದ್ದ ರಾಮಗೋಪಾಲ್ ಯಾದವ್. ಸಿಎಂ ಅಖಿಲೇಶ್ ಅವರಿಗೆ ಆಪ್ತರೆನಿಸಿದ್ದ ರಾಮಗೋಪಾಲ್ ಯಾದವ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ 6 ವರ್ಷ ಕಿತ್ತುಹಾಕುವ ನಿರ್ಧಾರ ಕೈಗೊಳ್ಳಲಾಯಿತು.
ಅಖಿಲೇಶ್ ವಿರುದ್ಧ ಮುಲಾಯಂ ಅವರ ಎರಡನೇ ಪತ್ನಿ ಸಂಚು ನಡೆಸುತ್ತಿದ್ದಾರೆಂದು ಉದಯವೀರ್ ಸಿಂಗ್ ಆರೋಪಿಸಿ ಮುಲಾಯಂಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಅಖಿಲೇಶ್ ಯಾದವ್ ಅವರಿಗೆ ನಿಷ್ಠರೆನಿಸಿರುವ ಶಾಸಕ ಉದಯವೀರ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಹೊಂಚುಹಾಕುತ್ತಿರುವ ಬಿಜೆಪಿ:
ಇದೇ ವೇಳೆ, ಸಮಾಜವಾದಿ ಪಕ್ಷದಲ್ಲಿನ ದಾಯಾದಿ ಕಲಹವನ್ನು ಬಿಜೆಪಿ ಮತ್ತಿತರ ವಿರೋಧ ಪಕ್ಷಗಳು ಕುತೂಹಲದಿಂದ ವೀಕ್ಷಿಸುತ್ತಿವೆ. ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಸರಕಾರದಲ್ಲಿ ಬಹಿರಂಗವಾಗಿಯೇ ಭಿನ್ನಮತ ಇರುವುದರಿಂದ ಅಖಿಲೇಶ್ ಯಾದವ್ ಅವರ ಬಹುಮತ ಪರೀಕ್ಷೆ ನಡೆಯಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ರಾಜ್ಯಪಾಲರು ಇದಕ್ಕೆ ಅಂಗೀಕರಿಸಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಹೊಸ ಪಕ್ಷ ಸ್ಥಾಪನೆ?
ಅಖಿಲೇಶ್ ಅವರು ಮುಖ್ಯಮಂತ್ರಿಯಾದರೂ ಎಸ್'ಪಿ ಪಕ್ಷದ ಚುಕ್ಕಾಣಿ ಇರುವುದು ಮುಲಾಯಂ ಕೈನಲ್ಲೇ. ಅಖಿಲೇಶ್'ಗೆ ನಿಷ್ಠರಾಗಿರುವ ಕಾರ್ಯಕರ್ತರನ್ನೆಲ್ಲಾ ವ್ಯವಸ್ಥಿತವಾಗಿ ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ. ಅಖಿಲೇಶ್ ಮತ್ತವರ ಬೆಂಬಲಿಗರಿಗೆ ಇರಿಸುಮುರುಸು ಉಂಟಾಗುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ, ಅಖಿಲೇಶ್ ಅವರು ಅನಿವಾರ್ಯವಾಗಿ ಹೊಸ ಪಕ್ಷ ಸ್ಥಾಪಿಸಿ ಮುಂದಿನ ಚುನಾವಣೆಗೆ ಅಣಿಯಾಗಬಹುದೆಂದು ಹೇಳುತ್ತಿವೆ ಮೂಲಗಳು.
(ಪಿಟಿಐ ವರದಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.