ಐಶ್‌ ನಿಜವಾದ ಸುಂದರಿ, ಡಯಾನಾ ಅಲ್ಲ : ತ್ರಿಪುರಾ ಸಿಎಂ ಎಡವಟ್ಟು

First Published Apr 28, 2018, 8:19 AM IST
Highlights

ಡಯಾನಾ ಹೇಡನ್‌ ಮಿಸ್‌ ವಲ್ಡ್‌ರ್‍ ಆಗಲು ಅನರ್ಹರು. ನಿಜವಾದ ಭಾರತೀಯ ಸುಂದರಿ ಎಂದರೆ ಅದು ಐಶ್ವರ್ಯ ರೈ ಎನ್ನುವ ಮೂಲಕ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.
 

ಅಗರ್ತಲಾ :  ಡಯಾನಾ ಹೇಡನ್‌ ಮಿಸ್‌ ವಲ್ಡ್‌ರ್‍ ಆಗಲು ಅನರ್ಹರು. ನಿಜವಾದ ಭಾರತೀಯ ಸುಂದರಿ ಎಂದರೆ ಅದು ಐಶ್ವರ್ಯ ರೈ ಎನ್ನುವ ಮೂಲಕ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ದೇಬ್‌ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಇತ್ತೀಚೆಗೆ ದೇಬ್‌ ಅವರು ಮಹಾಭಾರತ ಕಾಲದಲ್ಲೇ ಇಂಟರ್ನೆಟ್‌ ಇತ್ತು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಇದರ ಬೆನ್ನಲ್ಲೇ ಅವರ ಈ ಹೇಳಿಕೆ ಬಂದಿದೆ.

ದೇಬ್‌ ಹೇಳಿಕೆಯನ್ನು ಡಯಾನಾ ತೀವ್ರವಾಗಿ ಖಂಡಿಸಿದ್ದಾರೆ. ‘ನನಗೆ ದೇಬ್‌ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ. ಅವರು ನನ್ನ ಕಪ್ಪುವರ್ಣವನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ. ನನಗೆ ಕಪ್ಪುಚರ್ಮದ ಬಗ್ಗೆ ಹೆಮ್ಮೆಯಿದೆ. ಸಿಎಂ ಆದಂಥವರು ಜವಾಬ್ದಾರಿಯುತ ಹೇಳಿಕೆ ನೀಡಬೇಕು’ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಬ್‌ ಹೇಳಿದ್ದೇನು?:  ‘ಭಾರತದ ಸುಂದರಿಯರು ಲಕ್ಷ್ಮಿ ಹಾಗೂ ಸರಸ್ವತಿಯ ಥರ ಇರಬೇಕು. ಡಯಾನಾ ಹೇಡನ್‌ ಅವರು ಮಿಸ್‌ ವಲ್ಡ್‌ರ್‍ ಆಗಲು ಅನರ್ಹರು. ಆಕೆಯನ್ನು ವಿಶ್ವಸುಂದರಿ ಮಾಡಬೇಕೆಂದು ಮೊದಲೇ ಫಿಕ್ಸ್‌ ಮಾಡಲಾಗಿತ್ತು. ಇದರ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಹಿತಾಸಕ್ತಿ ಅಡಗಿತ್ತು. ಆದರೆ ಐಶ್ವರ್ಯ ರೈ ಅವರು ವಿಜೇತರಾಗಿದ್ದು ಅತ್ಯಂತ ಯೋಗ್ಯವಾದುದು. ಅವರು ಸರ್ವೋತ್ಕೃಷ್ಟಭಾರತೀಯ ಮಹಿಳೆಯರ ಪ್ರತಿನಿಧಿ’ ಎಂದು ಬಿಪ್ಲಬ್‌ ದೇಬ್‌ ಅವರು ಅಗರ್ತಲಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.

‘ಭಾರತೀಯ ಮಹಿಳೆಯರು ಶಾಂಪೂ ಅಥವಾ ಸೌಂದರ್ಯವರ್ಧಕಗಳನ್ನು ಬಳಸಲ್ಲ. ಸೀಗಾಕಾಯಿ ಪುಡಿ ಬಳಸಿ ಕೂದಲು ತೊಳೆದುಕೊಳ್ತಾರೆ. ಇದರಿಂದ ಕೂದಲು ಉದರುವುದಿಲ್ಲ. ಸೌಂದರ್ಯ ಸ್ಪರ್ಧೆಯ ಆಯೋಜಕರು ಭಾರತೀಯ ಮಾರುಕಟ್ಟೆಯನ್ನು ಕಬಳಿಸಲು ಇಂಥ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದಾರೆ. ಅದೊಂದು ಮಾರ್ಕೆಟಿಂಗ್‌ ಮಾಫಿಯಾ’ ಎಂದು ದೇಬ್‌ ಕಿಡಿಕಾರಿದರು.

‘ಇನ್ನು ಭಾರತೀಯ ಮಹಿಳೆಯರು ಇಂಥ ಸ್ಪರ್ಧೆಗಳಲ್ಲಿ ಗೆಲ್ಲಲಾಗದು. ಏಕೆಂದರೆ ಸಂಘಟಕರು ಮಾರುಕಟ್ಟೆಕಬಳಿಸಿದ್ದಾರೆ’ ಎಂದೂ ಅವರು ಹೇಳಿದರು.

ಈ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಸಂಜಯ ಮಿಶ್ರಾ ಸ್ಪಷ್ಟನೆ ನೀಡಿದ್ದು, ‘ಡಯಾನಾ ಹೇಡನ್‌ ಅವರನ್ನು ಹೇಗೆ ಕಾಸ್ಮೆಟಿಕ್‌ ಕಂಪನಿಗಳು ಬಳಸಿಕೊಂಡವು ಎಂಬ ಬಗ್ಗೆ ಮಾತ್ರ ದೇಬ್‌ ಹೇಳಿದ್ದಾರೆ. ಜತೆಗೆ ಭಾರತೀಯ ಸಂಪ್ರದಾಯ ಉತ್ತೇಜಿಸುವ ಮಾತು ಆಡಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

click me!