
ಬೆಂಗಳೂರು(ಫೆ. 20): ರಾಜಧಾನಿಯಲ್ಲಿ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಬೈಕ್'ನಲ್ಲಿ ಬಂದ ದುಷ್ಕರ್ಮಿಯೊಬ್ಬ ಹೋಟೆಲ್'ನಲ್ಲಿ ಊಟ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ಗಗನಸಖಿಯ ಬಟ್ಟೆ ಎಳೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಣಸವಾಡಿಯ ಎಚ್'ಆರ್'ಬಿಆರ್ ಲೇಔಟ್'ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಭಾನುವಾರ ರಾತ್ರಿ ಹೋಟೆಲ್'ನಲ್ಲಿ ಊಟ ಮುಗಿಸಿ ಸ್ನೇಹಿತೆಯೊಂದಿಗೆ ನಡೆದು ಹೋಗುವಾಗ ವೇಗವಾಗಿ ಬೈಕ್'ನಲ್ಲಿ ಬಂದ ದುಷ್ಕರ್ಮಿಯೊಬ್ಬ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಗನಸಖಿಯಾಗಿರುವ ಯುವತಿ ಫೆ. 12ರಂದು ವಿಮಾನ ನಿಲ್ದಾಣದಿಂದ ಬಾಣಸವಾಡಿಯ ಎಚ್'ಆರ್'ಬಿಆರ್ ಲೇಔಟ್'ನಲ್ಲಿರುವ "99 ದೋಸೆ" ಹೋಟೆಲ್'ನಲ್ಲಿ ಊಟಕ್ಕೆ ಬಂದಿದ್ದಾರೆ. ಊಟ ಮುಗಿಸಿ ರಾತ್ರಿ 10 ಗಂಟೆ ಸುಮಾರಿಗೆ ಸ್ನೇಹಿತೆ ಜತೆ ರಸ್ತೆಯಲ್ಲಿ ನಡೆದು ಹೋಗುವಾಗ ವೇಗವಾಗಿ ಬೈಕ್'ನಲ್ಲಿ ಬಂದ ದುಷ್ಕರ್ಮಿಯು ಸಂತ್ರಸ್ತೆಯ ಎದೆಯ ಭಾಗದ ಬಟ್ಟಗೆ ಕೈಹಾಕಿ ಎಳೆದಾಡಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸಂತ್ರಸ್ತೆ ಹಾಗೂ ಈಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದರಿಂದ ಆಕೆಯನ್ನು ತಳ್ಳಿ ಪರಾರಿಯಾಗಿದ್ದಾನೆ ಎಂದು ಆಕೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
"ಘಟನೆ ನಡೆದ ಸ್ಥಳದಲ್ಲಿ ವಿದ್ಯುತ್ ದೀಪ ಇರಲಿಲ್ಲ. ಅಲ್ಲದೇ ಆತ ಹೆಲ್ಮೆಟ್ ಧರಿಸಿದ್ದರಿಂದ ಯಾರೆಂಬುದು ತಿಳಿಯಲಿಲ್ಲ. ಮದ್ಯ ಸೇವಿಸಿರುವ ಬಗ್ಗೆ ಅನುಮಾನವಿದೆ" ಎಂದು ಸಂತ್ರಸ್ತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತ್ಯ ನಡೆದ ಸ್ಥಳ ಹಾಗೂ ಹೋಟೆಲ್ ಬಳಿಯಿದ್ದ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಇಂತಹದ್ದೇ ಎರಡು ಪ್ರಕರಣಗಳು ಇದೇ ಠಾಣೆ ವ್ಯಾಪ್ತಿಯಲ್ಲಿ ಹಿಂದೆ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿತ್ತು.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.