
ಬೆಂಗಳೂರು(ಮೇ 31): ನಿರೀಕ್ಷೆಯಂತೆ ಜಿ.ಪರಮೇಶ್ವರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸುತ್ತಿರುವುದಾಗಿ ತಿಳಿಸಿದೆ. ಅಷ್ಟೇ ಅಲ್ಲ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಎಐಸಿಸಿ ಪ್ರಕಟಣೆ ಸ್ಪಷ್ಟಪಡಿಸಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಲು ಪ್ರಬಲ ಪೈಪೋಟಿ ನಡೆಸಿದ್ದ ಡಿಕೆ ಶಿವಕುಮಾರ್ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ವೇಳೆ, ಕೆಪಿಸಿಸಿಗೆ ಒಂದರ ಬದಲು ಎರಡು ಕಾರ್ಯಾಧ್ಯಕ್ಷ ಸ್ಥಾನಗಳನ್ನು ಸೃಷ್ಟಿಸಲಾಗಿದೆ. ದಿನೇಶ್ ಗುಂಡೂರಾವ್ ಜೊತೆ ಎಸ್.ಆರ್.ಪಾಟೀಲ್ ಅವರು ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ದಿನೇಶ್ ಗುಂಡೂರಾವ್'ಗೆ ದಕ್ಷಿಣ ಕರ್ನಾಟಕದ ಉಸ್ತುವಾರಿ ವಹಿಸಿಕೊಡಲಾಗಿದೆ. ಎಸ್ಸಾರ್ ಪಾಟೀಲ್ ಅವರಿಗೆ ಉತ್ತರ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳಲು ಸೂಚಿಸಲಾಗಿದೆ.
ಇನ್ನು, ಸತೀಶ್ ಜಾರಕಿಹೊಳಿ ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ವರ್ಕಿಂಗ್ ಕಮಿಟಿ ವಿಶೇಷ ಆಹ್ವಾನಿತರಾಗಿ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪರನ್ನು ನೇಮಿಸಲಾಗಿದೆ.
ಇದೇ ವೇಳೆ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ನಿರ್ವಹಿಸಬಾರದು ಎಂಬ ನಿಯಮದಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಐಸಿಸಿ ಸೂಚಿಸಿದೆ. ಪರಮೇಶ್ವರ್'ರಿಂದ ತೆರವಾದ ಗೃಹ ಖಾತೆ ಯಾರ ಪಾಲಾಗುತ್ತೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಈ ಖಾತೆ ಹೆಚ್ಚುವಾಗಿ ನೀಡಲಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.