ಕಾಂಗ್ರೆಸ್ ಭೋಪಾಲ್ ಕ್ರಿಮಿನಲ್ ಹಿಡಿಲಿಲ್ಲ: ಮೋದಿ ಅಗಸ್ಟಾ ದಲಾಲ್‌ನನ್ನು ಬಿಡಲಿಲ್ಲ!

By Web DeskFirst Published Dec 6, 2018, 11:41 AM IST
Highlights

ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಶಸ್ತ್ರಾಸ್ತ್ರ ಮಾರಾಟದ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್‌ನನ್ನು ದುಬೈನಿಂದ ಯಶಸ್ವಿಯಾಗಿ ಗಡೀಪಾರು ಮಾಡಿಸಿಕೊಳ್ಳುವುದರೊಂದಿಗೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಬ್ರಿಟನ್ ಹಾಗೂಯುಎಇ ಜೊತೆಗಿನ ರಾಜತಾಂತ್ರಿಕ ಮತ್ತು ಕಾನೂನು ಸಮರದಲ್ಲಿ ಮಹತ್ವದ ಜಯ ಗಳಿಸಿದೆ.

ಬೆಂಗಳೂರು (ಡಿ. 06): ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಶಸ್ತ್ರಾಸ್ತ್ರ ಮಾರಾಟದ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್‌ನನ್ನು ದುಬೈನಿಂದ ಯಶಸ್ವಿಯಾಗಿ ಗಡೀಪಾರು ಮಾಡಿಸಿಕೊಳ್ಳುವುದರೊಂದಿಗೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಬ್ರಿಟನ್ ಹಾಗೂ ಯುಎಇ ಜೊತೆಗಿನ ರಾಜತಾಂತ್ರಿಕ ಮತ್ತು ಕಾನೂನು ಸಮರದಲ್ಲಿ ಮಹತ್ವದ ಜಯ ಗಳಿಸಿದೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇಟಲಿಯ ಅಗಸ್ಟಾವೆಸ್ಟ್‌ಲ್ಯಾಂಡ್ ಎಂಬ ಕಂಪನಿಯಿಂದ ಭಾರತದ ಅತಿಗಣ್ಯರ ಓಡಾಟಕ್ಕೆಂದು 3600 ಕೋಟಿ ರು. ಮೌಲ್ಯದ 12 ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದದಲ್ಲಿ ದೊಡ್ಡ ಹಗರಣ ನಡೆದಿದೆ ಎನ್ನಲಾಗಿದ್ದು, ಆ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.

ಆ ಒಪ್ಪಂದದಲ್ಲಿ ಬ್ರಿಟನ್ ಮೂಲದ ಕ್ರಿಸ್ಟಿಯನ್ ಮಿಶೆಲ್ ಹೆಲಿಕಾಪ್ಟರ್ ತಯಾರಕ ಕಂಪನಿಯಿಂದ ೨೨೫ ಕೋಟಿ ರು. ಲಂಚ ಪಡೆದು ಭಾರತೀಯ ಸೇನಾಪಡೆಯ ಹಲವಾರು ಉನ್ನತ ಅಧಿಕಾರಿಗಳು ಹಾಗೂ ಕಾಂಗ್ರೆಸ್‌ನ ಕೆಲ ಪ್ರಮುಖ ರಾಜಕಾರಣಿಗಳಿಗೆ ನೀಡಿದ್ದಾನೆ ಎಂಬ ಆರೋಪಗಳಿವೆ.

ಇದಕ್ಕೆ ಪುಷ್ಟಿ ನೀಡುವಂತೆ 2008 ರಲ್ಲಿ ಈತ ಬರೆದಿಟ್ಟಿದ್ದ ಎನ್ನಲಾದ ಡೈರಿಯಲ್ಲಿ ಈ ಎಲ್ಲ ಪ್ರಮುಖರ ಹೆಸರುಗಳು ದೊರೆತಿವೆ. ಹೀಗಾಗಿ ಕ್ರಿಸ್ಟಿಯನ್ ಮಿಶೆಲ್‌ನನ್ನು ಭಾರತಕ್ಕೆ ಕರೆತಂದರೆ ಈಗಾಗಲೇ ರದ್ದಾಗಿರುವ ಒಪ್ಪಂದಕ್ಕೆ ಸಂಬಂಧಪಟ್ಟ ಈ ಹಗರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲು ಸಾಧ್ಯವೆಂದು ಸಿಬಿಐ ಯೋಚಿಸಿತ್ತು. ಅಲ್ಲದೆ ಈತ ಭಾರತಕ್ಕೆ ಬಂದು ವಿಚಾರಣೆ ಎದುರಿಸಿದರೆ ಕೆಲ ದೊಡ್ಡ ದೊಡ್ಡ ರಾಜಕಾರಣಿಗಳ ಬಂಡವಾಳವೂ ಬಯಲಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಆದರೆ, ಪ್ರಭಾವಿಯಾಗಿರುವ ಕ್ರಿಸ್ಟಿಯನ್ ಮಿಶೆಲ್ ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಿಕೊಂಡು ಓಡಾಡುತ್ತಿದ್ದ. ದುಬೈನಲ್ಲಿದ್ದ ಆತನನ್ನು ಕೊನೆಗೂ ಭಾರತ ಸರ್ಕಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಹಗರಣಕ್ಕೆ ಸಂಬಂಧಪಟ್ಟಂತೆ ಇಟಲಿಯಲ್ಲಿ ಅಲ್ಲಿನ ತನಿಖಾ ಸಂಸ್ಥೆಗಳು ಹಾಗೂ ಕೋರ್ಟುಗಳು ಇಬ್ಬರಿಗೆ ಈಗಾಗಲೇ ಜೈಲು ಶಿಕ್ಷೆ ವಿಧಿಸಿವೆ.

ಅವರಿಬ್ಬರೂ ಅಲ್ಲಿನ ನಾಗರಿಕರೇ ಆಗಿದ್ದಾರೆ. ಅವರೂ ಕ್ರಿಸ್ಟಿಯನ್ ಮಿಶೆಲ್‌ನಂತೆ ಮಧ್ಯವರ್ತಿಗಳು. ಆದರೆ, ಭಾರತದ ಜೊತೆ ವ್ಯವಹರಿಸಿದ ಮಿಶೆಲ್‌ನನ್ನು ಈಗಷ್ಟೇ ನಮಗೆ ವಶಕ್ಕೆ ಪಡೆಯುವುದು ಸಾಧ್ಯವಾಗಿದೆ.

ಆತನ ತನಿಖೆ ಹಾಗೂ ಕೋರ್ಟ್ ವಿಚಾರಣೆಗಳು ಮುಗಿದು ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಇನ್ನೆಷ್ಟು ವರ್ಷಗಳು ಬೇಕು ಎಂದು ಊಹಿಸಲು ಸಾಧ್ಯವಿಲ್ಲ. ಗಡೀಪಾರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಬಿಐ, ಇನ್ನುಮುಂದಿನ ಪ್ರಕ್ರಿಯೆಗಳನ್ನೂ ತ್ವರಿತವಾಗಿ ಮುಗಿಸುವ ಅಗತ್ಯವಿದೆ. ಭಾರತಕ್ಕೆ ವಂಚಿಸಿದ ಇಂತಹ ವಿದೇಶಿ ಅಪರಾಧಿಗಳನ್ನು ಗಡೀಪಾರು ಮಾಡಿಸಿಕೊಳ್ಳುವಲ್ಲಿ ಹಾಗೂ ಶಿಕ್ಷೆಗೆ ಒಳಪಡಿಸುವಲ್ಲಿ ನಮ್ಮ ದೇಶದ ಸಾಧನೆಯ ಪಟ್ಟಿ ತೀರಾ ಕಳಪೆಯಾಗಿದೆ. ಭೋಪಾಲ್ ಅನಿಲ ದುರಂತಕ್ಕೆ ಕಾರಣನಾದ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಒ ವಾರನ್ ಆ್ಯಂಡರ್ಸನ್ ಕೊನೆಗೂ ಭಾರತದ ಕೈಗೆ ಸಿಗಲಿಲ್ಲ.

ಅಮೆರಿಕದ ಪ್ರಜೆಯಾದ ಅವನನ್ನು ಇಲ್ಲಿಗೆ ಕರೆತಂದು ವಿಚಾರಣೆಗೊಳಪಡಿಸಲು ನಮ್ಮ ದೇಶಕ್ಕೆ ಸಾಧ್ಯವಾಗಲಿಲ್ಲ. ಹಾಗೆಯೇ ಬೋಫೋರ್ಸ್ ಯುದ್ಧಫಿರಂಗಿ ಹಗರಣದ ಮಧ್ಯವರ್ತಿ ಒಟ್ಟಾವಿಯೋ ಕ್ವಟ್ರೋಚಿಯನ್ನು ಇಟಲಿಯಿಂದ ಗಡೀಪಾರು ಮಾಡಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. ಅವರಿಬ್ಬರೂ ಈಗ ಸತ್ತೇಹೋಗಿದ್ದಾರೆ.

ಇತ್ತೀಚಿನ ದಶಕದಲ್ಲಿ ಗಡೀಪಾರು ಮಾಡಿಸಿಕೊಳ್ಳಲು ಸಾಧ್ಯವಾಗಿದ್ದೆಂದರೆ ಅಬು ಸಲೇಂ ಎಂಬ ಭಯೋತ್ಪಾದಕ, ಛೋಟಾ ರಾಜನ್ ಎಂಬ ಮಾಫಿಯಾ ಡಾನ್ ಮುಂತಾದ ಕೆಲವೇ ವ್ಯಕ್ತಿಗಳನ್ನು. ಭಾರತದ ಪ್ರಜೆಗಳೇ ಆಗಿದ್ದ ಇವರಿಬ್ಬರೂ ವಿದೇಶಕ್ಕೆ ಪರಾರಿಯಾಗಿದ್ದರು.

ಇನ್ನೂ ದಾವೂದ್ ಇಬ್ರಾಹಿಂ ಭಾರತಕ್ಕೆ ಸಿಕ್ಕಿಲ್ಲ. ಹಫೀಜ್  ಸಯೀದ್ ಸಿಕ್ಕಿಲ್ಲ. ಅವರೆಲ್ಲರಿಗಿಂತ ಮುಖ್ಯವಾಗಿ ಸಾವಿರಾರು ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದ ಉದ್ಯಮಿಗಳು, ಐಪಿಎಲ್ ಹಗರಣದಲ್ಲಿ ಬೇಕಾದ ಲಲಿತ್ ಮೋದಿ ಮುಂತಾದವರು ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ.

ಕ್ರಿಸ್ಟಿಯನ್ ಮಿಶೆಲ್‌ನಂತೆ ಇವರನ್ನೂ ಗಡೀಪಾರು ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವಿದೆ.

-ಸಂಪಾದಕೀಯ 

click me!