
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಎನ್‌ಜಿಓಗಳ ಮೂಲಕ ಕಳೆದ ಕೆಲ ವರ್ಷಗಳಿಂದ ನಡೆಸಲಾಗಿದ್ದ ವಿವಿಧ ಪ್ರಾಯೋಗಿಕ ಕಾರ್ಯಕ್ರಮಗಳನ್ನು (ಪೈಲಟ್ ಪ್ರಾಜೆಕ್ಟ್) ಇದೀಗ ರಾಜ್ಯದ ಎಲ್ಲಾ ಶಾಲೆಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಪ್ರಮುಖ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಅಜೀಂ ಪ್ರೇಮ್ ಜೀ ಫೌಂಡೇಷನ್, ಶಿಕ್ಷಣ ಫೌಂಡೇಷನ್, ಪ್ರಥಮ್ ಫೌಂಡೇಷನ್ ಮತ್ತು ಖಾನ್ ಅಕಾಡೆಮಿ ಆಫ್ ಇಂಡಿಯಾ ಈ ನಾಲ್ಕೂ ಎನ್‌ಜಿಓಗಳು ಕಳೆದ ಕೆಲ ವರ್ಷಗಳಿಂದ ನಿರ್ದಿಷ್ಟ ಜಿಲ್ಲೆ ಅಥವಾ ಸೀಮಿತ ಸಂಖ್ಯೆಯ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ನಡೆಸಿದ ಶಿಕ್ಷಕರ ಬೋಧನಾ ಸಾಮರ್ಥ್ಯ ವೃದ್ಧಿ, ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಳ, ತಂತ್ರಜ್ಞಾನ ಆಧಾರಿತ ಕಲಿಕೆ ಹಾಗೂ ಬೋಧನೆ ಸೇರಿದಂತೆ ವಿವಿಧ ಪ್ರಾಯೋಗಿಕ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹೆಚ್ಚಿಸಲು ಪೂರಕವಾಗಿ ಕಂಡು ಬಂದಿರುವುದರಿಂದ ಸರ್ಕಾರ ಈ ಪ್ರಾಯೋಗಿಕ ಕಾರ್ಯಕ್ರಮಗಳನ್ನು ರಾಜ್ಯವ್ಯಾಪ್ತಿ ವಿಸ್ತರಿಸಲು ನಾಲ್ಕು ಎನ್‌ಜಿಓಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಎನ್‌ಜಿಓಗಳ ಮುಖ್ಯಸ್ಥರು’ ಒಡಂಬಡಿಕೆಗಳಿಗೆ ಪರಸ್ಪರ ಸಹಿ ಹಾಕಿದರು.
ಬಳಿಕ ಒಡಂಬಡಿಕೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಜಯ್‌ಸೇಠ್ ಅವರು, ಅಜೀಂ ಪ್ರೇಂ ಜಿ ಪೌಂಡೇಷನ್‌ನವರು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಹಾಗೂ ಸಮಾನತೆ ಸುಧಾರಣೆಗಾಗಿ 2012ರ ಡಿಸೆಂಬರ್‌ನಲ್ಲಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರಾಯೋಗಿಕವಾಗಿ ಈಶಾನ್ಯ ಕರ್ನಾಟಕದ ಕೆಲ ಜಿಲ್ಲೆಗಳು ಹಾಗೂ ಮಂಡ್ಯ, ಬೆಂಗಳೂರು ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲಿ ಶಿಕ್ಷಕರ ಕಲಿಕಾ ಕೇಂದ್ರಗಳ ಮೂಲಕ ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ತರಬೇತಿ, ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಈ ಒಡಂಬಡಿಕೆ 2017ರ ಡಿಸೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಈ ಕಾರ್ಯಕ್ರಮವನ್ನು ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿ ಹೊಸ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
13 ಜಿಲ್ಲೆಗಳಿಗೆ ‘ಓದು ಕರ್ನಾಟಕ’: ಅದೇ ರೀತಿ ಪ್ರಥಮ್ ಫೌಂಡೇಷನ್‌ನವರು ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಕಲಿಕಾ ಚಟುವಟಿಕೆ ವೃದ್ಧಿಗೆ 2016-17ನೇ ಸಾಲಿನಲ್ಲಿ ಕೈಗೊಂಡ ‘ಓದು ಕರ್ನಾಟಕ’ ಎಂಬ ಪ್ರಾಯೋಗಿಕ ಕಾರ್ಯಕ್ರಮ ಯಶಸ್ವಿಯಾಗಿದೆ. ಆ ಜಿಲ್ಲೆಗಳ ಮಕ್ಕಳ ಕಲಿಕಾ ಆಸಕ್ತಿ ಮತ್ತು ಸಾಮರ್ಥ್ಯ ವೃದ್ಧಿಯಾಗಿರುವುದು ಸಾಫಲ್ಯ ಪರೀಕ್ಷೆಯಲ್ಲಿ ಕಂಡುಬಂದಿದೆ. ಹಾಗಾಗಿ 2017-18ನೇ ಸಾಲಿನಲ್ಲಿ ಈ ಕಾರ್ಯಕ್ರ ಮವನ್ನು 13 ಜಿಲ್ಲೆಗಳಿಗೆ ವಿಸ್ತರಿಸಲು ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ ಪ್ರಥಮ್ ಸಂಸ್ಥೆಯವರು ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕಾ ಕಿಟ್‌ಗಳನ್ನು ನೀಡಲಿದ್ದಾರೆ ಎಂದು ಹೇಳಿದರು.
ಅದೇ ರೀತಿ ಖಾನ್ ಅಕಾಡೆಮಿಯೊಂದಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಸಂಪನ್ಮೂಲ ಪುನರ್ರಚನೆ ಸಂಬಂಧ ಎರಡು ವರ್ಷಗಳ ಅವಧಿಗೆ ಹಾಗೂ ಶಿಕ್ಷಣ ಫೌಂಡೇಷನ್‌ನೊಂದಿಗೆ ಮಕ್ಕಳ ಕಲಿಕಾ ಪ್ರೇರಣೆ ಕಾಯಕ್ರಮ ಸಂಬಂಧ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಜಯ್ ಸೇಠ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಿಇಓ ಉಮಾಶಂಕರ್, ಖಾನ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಬಾಪ್ನಾ, ಶಿಕ್ಷಣ ಫೌಂಡೇಷನ್‌ನ ಪ್ರಸನ್ನ ಒಡೆಯರ್, ಪ್ರಥಮ್ ಫೌಂಡೇಷನ್‌ನ ದೇವಯಾನಿ, ಇಲಾಖೆ ಅಧಿಕಾರಿಗಳಾದ ಜಾಫರ್, ಸೌಜನ್ಯ ಮತ್ತಿತರರು ಉಪಸ್ಥಿತರಿದ್ದರು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.