ರಾಜ್ಯಕ್ಕೆ ಕಾಲಿಟ್ಟಿದೆ ಮಹಾಮಾರಿ : 44 ಸಾವು

By Web DeskFirst Published Dec 26, 2018, 8:30 AM IST
Highlights

ರಾಜ್ಯಕ್ಕೆ ಮತ್ತೆ ಮಹಾಮಾರಿ ಅಪ್ಪಳಿಸಿದೆ. ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 12 ಮಂದಿ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.  

ಬೆಂಗಳೂರು :  ರಾಜ್ಯದಲ್ಲಿ ಹಂದಿಜ್ವರ (ಎಚ್‌1ಎನ್‌1) ಮಹಾಮಾರಿ ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು, ಮಾರಣಾಂತಿಕ ಕಾಯಿಲೆಗೆ ಕಳೆದ ಐದು ದಿನದಲ್ಲಿ 12 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ. ಈ ಮೂಲಕ ಪ್ರಸಕ್ತ ವರ್ಷ ಹಂದಿ ಜ್ವರ ಸೋಂಕಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

ಆರೋಗ್ಯ ಇಲಾಖೆಯ ಹಂದಿ ಜ್ವರ ಸಾವಿನ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ ಡಿ.20ರಿಂದ ಈಚೆಗೆ 12 ಸಾವು ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 3, ಬಿಬಿಎಂಪಿ 1, ಬೆಂಗಳೂರು ನಗರ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಹಾಸನ 1, ಮೈಸೂರಲ್ಲಿ 2 ಸೇರಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಎಚ್‌1ಎನ್‌1 ಸೋಂಕು ಹೊಂದಿದ್ದು, ಬೇರೆ ಬೇರೆ ಕಾಯಿಲೆಗಳ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಆರೋಗ್ಯ ಇಲಾಖೆಯ ದಾಖಲೆಗಳಲ್ಲಿ ಡಿ.19ರಂದು ಪ್ರಸಕ್ತ ಸಾಲಿನ ಎಚ್‌1ಎನ್‌1 ಸಾವಿನ ಪ್ರಕರಣಗಳ ಸಂಖ್ಯೆ 32 ಮಾತ್ರ ಇದ್ದದ್ದು ಸತ್ಯ. ಆ ಸಂಖ್ಯೆ ಡಿ.20ಕ್ಕೆ 44ರಷ್ಟಾಗಿದೆ. ಕಳೆದ ಐದು ದಿನದಲ್ಲಿ 12 ಸಾವು ಉಂಟಾದಂತೆ ಭಾಸವಾಗುತ್ತಿದೆ. ಆದರೆ ಆ ಒಂದೇ ದಿನದಲ್ಲಿ ಅಷ್ಟೂಸಾವುಗಳು ಸಂಭವಿಸಿಲ್ಲ. ಬದಲಿಗೆ ಎಚ್‌1ಎನ್‌1 ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅಧ್ಯಯನ ನಡೆಸಿ ಮರಣದ ಕಾರಣ ತಿಳಿಸಿ ಅಂತಿಮಗೊಳಿಸಲು ‘ಡೆತ್‌ ಆಡಿಟ್‌ ಸಮಿತಿ’ ರಚನೆ ಮಾಡಲಾಗಿತ್ತು. ಸಮಿತಿಯು ಡಿ.19ರಿಂದ 25ರವರೆಗೆ ಸಂಗ್ರಹಿಸಿದ್ದ 456 ರಕ್ತ ಮಾದರಿಯಲ್ಲಿ 102 ಮಂದಿಗೆ ಎಚ್‌1ಎನ್‌1 ಸೋಂಕು ಇರುವುದನ್ನು ದೃಢಪಡಿಸಿದೆ. ಜತೆಗೆ ಇದರಲ್ಲಿ 7 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದೆ. ಅಲ್ಲದೆ, ನ.29ರಿಂದ ಡಿ.2ರವರೆಗೆ 580 ಮಾದರಿಗಳಲ್ಲಿ 94 ಮಂದಿಗೆ ಸೋಂಕಿರುವುದು ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ ಎಂದು ಹೇಳುತ್ತಾರೆ.

ಕಟ್ಟೆಚ್ಚರಕ್ಕೆ ಸೂಚನೆ:  ಪ್ರತಿ ಬಾರಿ ಡೆತ್‌ ಆಡಿಟ್‌ ಸಮಿತಿ ಸಭೆಯಲ್ಲೂ ಎಚ್‌1ಎನ್‌1 ಮರಣ ಸಂಖ್ಯೆಯ ಹೆಚ್ಚಾಗುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಇಲಾಖೆಯು ಕೂಡಲೇ ಕಟ್ಟೆಚ್ಚರ ವಹಿಸುವಂತೆ ಆದೇಶ ಮಾಡಿದೆ. ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಪೀಡಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಿದೆ. ಕಾಯಿಲೆ ತೀವ್ರವಾಗಿ ಹರಡುತ್ತಿರುವ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.

ಜಾಗೃತಿಗೆ ಸೂಚನೆ:  ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು, ಮೆಟ್ರೋ ನಿಲ್ದಾಣಗಳು, ಪ್ರಾಥಮಿಕ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಚ್‌1ಎನ್‌1 ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಗುತ್ತಿದೆ. ಪ್ರತಿಯೊಬ್ಬ ಶಂಕಿತರಿಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾರ್ಯಕ್ರಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

click me!