ಲೋಕಸಭಾ ನಂತರ ರಾಜ್ಯದಲ್ಲಿ ಸಾಲು ಸಾಲು ಚುನಾವಣೆ

By Web DeskFirst Published Apr 25, 2019, 11:52 AM IST
Highlights

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸಾಲು ಸಾಲು ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಆಯ್ತು ಇನ್ನು ವಿಧಾನಸಭಾ ಉಪ ಚುನಾವಣೆಗಳ ಸುಗ್ಗಿ ಬರುವ ಸಾಧ್ಯತೆಯಿದೆ. ಹಾಲಿ ಕುಂದಗೋಳ, ಚಿಂಚೋಳಿ ಉಪ ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್ ನಾಯಕರ ನಿರೀಕ್ಷೆಯಂತೆಯೇ ಲೋಕಸಭಾ ಚುನಾವಣಾ ಫಲಿತಾಂಶ ಬಂದರೆ ಇನ್ನೂ ಎರಡು ಕ್ಷೇತ್ರಗಳಿಗೆ (ಬ್ಯಾಟರಾಯನ ಪುರ ಹಾಗೂ ಬಾಲ್ಕಿ) ಚುನಾವಣೆ ನಡೆಯಬಹುದು. 

ಕುತೂಹಲಕಾರಿ ಸಂಗತಿಯೆಂದರೆ, ಈ ಎಲ್ಲಾ ಕ್ಷೇತ್ರಗಳಿಗೂ ಪತ್ನಿಯರು ಹಾಗೂ ಸಂಬಂಧಿಕರೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿದ ಡಾ.ಉಮೇಶ್ ಜಾಧವ್ ಅವರು ರಾಜೀನಾಮೆ ನೀಡಿದ್ದರಿಂದ ಚಿಂಚೋಳಿ ಹಾಗೂ ಸಚಿವ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದಗೋಳಕ್ಕೆ ಈಗಾಗಲೇ ಚುನಾವಣೆ ನಿಗದಿಯಾಗಿದೆ. 

ಇನ್ನು ಬೆಂಗಳೂರು ಉತ್ತರದಿಂದ ಲೋಕಸಭೆಗೆ ಸ್ಪರ್ಧಿಸಿದ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಮತ್ತು ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರೇನಾದರೂ ಗೆದ್ದರೆ ಈ ಎರಡು ಕ್ಷೇತ್ರಗಳು ಉಪ ಚುನಾವಣೆ ಕಾಣುವ ಸಾಧ್ಯತೆಯಿದೆ. ಇನ್ನು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದು, ಶೀಘ್ರವೇ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹೀಗಾಗಿ ಸದ್ಯಕ್ಕೆ 5 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಈ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಐದು ಕ್ಷೇತ್ರಗಳಿಗೂ ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ ಮತ್ತು ಈ ಆಕಾಂಕ್ಷಿಗಳು ಹಾಲಿ ಶಾಸಕರ ಪತ್ನಿಯರು ಹಾಗೂ ಕುಟುಂಬಸ್ಥರೇ ಆಗಿದ್ದಾರೆ. ಸಿ.ಎಸ್.ಶಿವಳ್ಳಿ ಅವರು ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರದಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿ ಹಾಗೂ ಪುತ್ರ ಅಮರೇಶ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಪತ್ನಿ ಕುಸುಮಾ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ.

ಇನ್ನು ಚಿಂಚೋಳಿಯಲ್ಲಿ ಹಲವು ಮಂದಿಆಕಾಂಕ್ಷಿಗಳಿದ್ದರೂ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಹೋದ ಡಾ.ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಕಣಕ್ಕೆ ಇಳಿಸುವ ಪ್ರಯತ್ನ ನಡೆದಿವೆ. ಬಿಜೆಪಿ ಸೇರಿರುವ ಉಮೇಶ್ ಜಾಧವ್ ಅವರು ಚಿಂಚೋಳಿಯಿಂದ ತಮ್ಮ ಪತ್ನಿ ಗಾಯತ್ರಿ ಜಾಧವ್ ಅಥವಾ ಸಹೋದರ ರಾಮಚಂದ್ರ ಜಾಧವ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಗಾಯತ್ರಿ ಜಾಧವ್ ಅವರಿಗೆ ದೊರಕಿದರೆ ಆಗ ರಾಮಚಂದ್ರ ಜಾಧವ್ ಕಾಂಗ್ರೆಸ್‌ಗೆ ಆಗಮಿಸುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯಲ್ಲಿಕಾಂಗ್ರೆಸ್‌ನ ಸ್ಥಳೀಯ ಶಾಸಕರು ರಾಮಚಂದ್ರ ಜಾಧವ್ ಅವರಿಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. 

ಒಂದು ವೇಳೆ ರಾಮಚಂದ್ರ ಜಾಧವ್ ಅವರು ಕಾಂಗ್ರೆಸ್‌ಗೆ ಬರದಿದ್ದಲ್ಲಿ ಆಗ ಬಿಜೆಪಿಯಂದ ಕಾಂಗ್ರೆಸ್‌ಗೆ ಇತ್ತೀಚೆಗಷ್ಟೇ ಆಗಮಿಸಿದ ಬಾಬುರಾವ್ ಚವ್ಹಾಣ್ ಅಥವಾ ಸುಭಾಷ್ ರಾಥೋಡ್ ಅವರಿಬ್ಬರ ಪೈಕಿ ಒಬ್ಬರು ಪಕ್ಷದ ಆಯ್ಕೆಯಾಗಬಹುದು ಎಂದು ಮೂಲಗಳು ಹೇಳಿವೆ.

ಕೃಷ್ಣಬೈರೇಗೌಡ ಪತ್ನಿ ಆಕಾಂಕ್ಷಿ: ಕುತೂಹಲಕಾರಿ ಸಂಗತಿಯೆಂದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೃಷ್ಣ ಬೈರೇಗೌಡ ಅವರು ಈ ಚುನಾವಣೆಯಲ್ಲಿ ಗೆದ್ದರೆ ಅವರು ವಿಧಾನಸಭೆಗೆ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರದ ಟಿಕೆಟ್ ಅನ್ನು ಪತ್ನಿ ಮೀನಾಕ್ಷಿ ಅವರಿಗೆ ನೀಡುವ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ಈಗಾಗಲೇ ಚರ್ಚೆ ಆರಂಭಗೊಂಡಿದೆ.

ಈ ಬಾರಿಯ ಲೋಕಸಭಾ ಚುನಾವಣೆ ಸೇರಿದಂತೆ ಕೃಷ್ಣಬೈರೇಗೌಡ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಪತ್ನಿ ಮೀನಾಕ್ಷಿ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಕ್ಷೇತ್ರದಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ
ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷ್ಣ ಬೈರೇಗೌಡ ಅವರು ದೆಹಲಿಗೆ ಹೋದರೆ ವಿಧಾನಸಭೆಗೆ ಅವರ ಪತ್ನಿಗೆ ಟಿಕೆಟ್ ನೀಡಬಹುದು ಎಂಬ ಭಾವನೆ ಕಾಂಗ್ರೆಸ್ ರಾಜ್ಯ ನಾಯಕತ್ವದಲ್ಲಿದೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಬೀದರ್‌ನಿಂದ ಸ್ಪರ್ಧಿಸಿರುವ ಈಶ್ವರ್ ಖಂಡ್ರೆ ಅವರು ಸಂಸತ್ತಿಗೆ ಆಯ್ಕೆಯಾದರೆ ಅವರಿಂದ ತೆರವಾಗುವ ಬಾಲ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪತ್ನಿ ಗೀತಾ ಖಂಡ್ರೆ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಇನ್ನು ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಾದರೆ ಅಲ್ಲಿ ರಮೇಶ್ ಅವರ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.

click me!