ಸೊಳ್ಳೆಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು| ಅರಣ್ಯಾಧಿಕಾರಿಗಳ ಸಕಾಲಿಕ ಕ್ರಮದಿಂದ ತಪ್ಪಿದ ಅನಾಹುತ
ನಾಪೋಕ್ಲು[ಮಾ.14]: ಮೈಸೂರು ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಸೊಳ್ಳೆಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳ ಸಕಾಲಿಕ ಕ್ರಮದಿಂದಾಗಿ ಎರಡನೇ ಬಾರಿಗೆ ಭಾರಿ ಅನಾಹುತ ತಪ್ಪಿದೆ.
ಪಕ್ಕದಲ್ಲೇ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯವಿದ್ದು, ವನ್ಯಜೀವಿ ವಿಭಾಗದ ಸಿಬ್ಬಂದಿ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಇತರೆಡೆ ಬೆಂಕಿ ಹರಡುವುದು ತಪ್ಪಿದೆ.ಸುಮಾರು 35ರಿಂದ 40 ಎಕರೆಯಷ್ಟುಮೀಸಲು ಅರಣ್ಯ ಬೆಂಕಿಗಾಹುತಿಯಾಗಿದೆ.
ಫೆ.23ರಂದು ಇದೇ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು, ಪಕ್ಕದ ವೀರನಹೊಸಹಳ್ಳಿವಲಯಕ್ಕೂ ಹರಡಿ ಸುಮಾರು 50 ಎಕರೆಯಷ್ಟುಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಇದಾದ 20 ದಿನದಲ್ಲೇ ಮತ್ತೆ ಬೆಂಕಿ ಬಿದ್ದಿದೆ.
ನಾಪೋಕ್ಲುವಿನಲ್ಲಿ ಕಾಡ್ಗಿಚ್ಚು:
ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟ, ಪ್ರವಾಸಿ ತಾಣವಾದ ಕಕ್ಕಬೆ ನಾಲಡಿ ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟದಲ್ಲಿ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಟ್ಟದಲ್ಲಿ ಹುಲ್ಲು ಹೆಚ್ಚಾಗಿದ್ದು, ಬೇಸಿಗೆಯಾದ ಹುಲ್ಲು ಒಣಗಿದ್ದು ಬೆಂಕಿ ಸುಲಭವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.