ಕಚೇರಿಗೆ ಪುರುಷ ಸಿಬ್ಬಂದಿ ಮಾತ್ರ ನೇಮಿಸಿ: ಸಿಜೆಐಗೆ ಜಡ್ಜ್‌ ಮನವಿ!

By Web DeskFirst Published Apr 24, 2019, 9:15 AM IST
Highlights

ಕಚೇರಿಗೆ ಪುರುಷ ಸಿಬ್ಬಂದಿ ಮಾತ್ರ ನೇಮಿಸಿ: ಸಿಜೆಐಗೆ ಜಡ್ಜ್‌ ಮನವಿ!|  ನ್ಯಾ.ರಂಜನ್‌ ಗೊಗೋಯ್‌ಗೆ ಸುಪ್ರೀಂ ಜಡ್ಜ್‌ಗಳ ಕೋರಿಕೆ| ನಿಮಗೆ ಆದ ರೀತಿಯ ಅವಮಾನ ತಪ್ಪಿಸಲು ಇದು ಅನಿವಾರ‍್ಯ| 

ನವದೆಹಲಿ[ಏ.24]: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ವಿರುದ್ಧ ಅವರ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೋರ್ವರು ಲೈಂಗಿಕ ಕಿರುಕುಳ ಆರೋಪ ಮಾಡಿದ ಪ್ರಕರಣವು, ಸುಪ್ರೀಂಕೋರ್ಟ್‌, ಇತರೆ ನ್ಯಾಯಾಧೀಶರಲ್ಲೂ ಆತಂಕ ಮೂಡಿಸಿದೆ. ಹೀಗಾಗಿ ತಾವು ಇಂಥ ಆರೋಪಗಳಿಗೆ ತುತ್ತಾಗುವುದನ್ನು ತಡೆಯುವ ನಿಟ್ಟಿನಲ್ಲಿ, ತಮ್ಮ ತಮ್ಮ ಗೃಹ ಕಚೇರಿಗಳಿಗೆ ಪುರುಷ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳಲು ಒಲವು ವ್ಯಕ್ತಪಡಿಸಿದ್ದಾರೆ.

ತಮ್ಮ ವಿರುದ್ಧ ಮಾಜಿ ಸಿಬ್ಬಂದಿಯೋರ್ವರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಗೊಗೋಯ್‌ ಅವರು ಶನಿವಾರ 30 ನಿಮಿಷಗಳ ವಿಶೇಷ ಕಲಾಪ ನಡೆಸಿದ್ದರು. ಜೊತೆಗೆ ಸೋಮವಾರ ಸಂಪ್ರದಾಯದಂತೆ ಪ್ರತಿ ದಿನದ ಕಲಾಪಕ್ಕೂ ಮುನ್ನ ಚಹಾಕೂಟದಲ್ಲಿ ಒಂದಾಗುವ ಸುಪ್ರೀಂಕೋರ್ಟ್‌ನ ಎಲ್ಲಾ ಜಡ್ಜ್‌ಗಳು, ಇದೇ ವೇಳೆ ಲೈಂಗಿಕ ಕಿರುಕುಳ ಆರೋಪದ ಕುರಿತು ಅನೌಪಚಾರಿಕ ಸಭೆ ನಡೆಸಿದರು. ಈ ವೇಳೆ, ಸ್ವತಃ ಸಿಜೆಐ ಗೊಗೋಯ್‌ ಅವರು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಉಳಿದ ಜಡ್ಜ್‌ಗಳಿಗೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಹಲವು ಜಡ್ಜ್‌ಗಳು ಗೊಗೋಯ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಜೊತೆಗೆ ಮುಂದಿನ ದಿನಗಳಲ್ಲಿ ತಾವು ಇಂಥ ಕಳಂಕಕ್ಕೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ, ನಮ್ಮ ಗೃಹ ಕಚೇರಿಗಳಿಗೂ ಪುರುಷ ಸಿಬ್ಬಂದಿಯನ್ನೇ ನೇಮಿಸಿ ಎಂದು ಸಿಜೆಐಗೆ ಮನವಿ ಕೂಡಾ ಮಾಡಿದರು. ಆದರೆ ಸುಪ್ರೀಂಕೋರ್ಟ್‌ನ ಒಟ್ಟು ಸಿಬ್ಬಂದಿ ಪೈಕಿ ಶೇ.60ರಷ್ಟುಮಹಿಳೆಯರೇ ಆಗಿರುವ ಕಾರಣ, ಎಲ್ಲಾ ಜಡ್ಜ್‌ಗಳಿಗೂ ಪುರುಷ ಸಿಬ್ಬಂದಿ ನೇಮಿಸುವುದು ಸಾಧ್ಯವಾಗದೇ ಹೋಗಬಹುದು ಎಂದು ನ್ಯಾ.ಗೊಗೋಯ್‌ ತಮ್ಮ ಅಸಹಾಯಕತೆ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.

click me!