ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಬಿರುಕು; ಅತ್ತೆ ಸೊಸೆ ಜಗಳ ಬೀದಿಗೆ

By Web DeskFirst Published Apr 24, 2019, 9:14 AM IST
Highlights

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಇದೀಗ ಬೀದಿಗೆ ಬಿದ್ದಿದೆ. 

ಭಾರತೀನಗರ : ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಕುಟುಂಬದಲ್ಲಿ ಹೊಗೆಯಾಡುತ್ತಿದ್ದ ಅತ್ತೆ-ಸೊಸೆಯರ ಜಗಳ ಮಂಗಳವಾರ ಹಾದಿ-ಬೀದಿ ರಂಪಾಟವಾಗಿ ಗುಡಿಗೆರೆ ಗ್ರಾಮಸ್ಥರು ತಲೆತಗ್ಗಿಸುವಂತಾಯಿತು. ಗುರು ತಾಯಿ ಚಿಕ್ಕೋಳಮ್ಮ ಹಾಗೂ ಗುರು ಪತ್ನಿ ಕಲಾವತಿ ನಡುವೆ ಇದ್ದ ಮನಸ್ತಾಪ ಮಂಗಳವಾರ ಬೀದಿಗೆ ಬಂದು ಇಬ್ಬರೂ ಪರಸ್ಪರ ಬೈದಾಡಿ ನಿಂದಿಸಿದ ಪ್ರಸಂಗ ನಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದರು.

ಯೋಧ ಗುರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ರಾಜ್ಯಕ್ಕೆ ರಾಜ್ಯವೇ ಸಾಂತ್ವನ ಹೇಳಿತ್ತು. ಅನೇಕ ಸಂಘಸಂಸ್ಥೆಗಳು ಕುಟುಂಬಕ್ಕೆ ಪರಿಹಾರ ಧನ ನೀಡಿದ್ದರು. ಕೆಲವರು ವೈಯಕ್ತಿಕವಾಗಿಯೂ ಧನಸಹಾಯ ಮಾಡಿದ್ದರು. ಕೆಲವರು ಗುರು ಪತ್ನಿ ಕಲಾವತಿ ಬ್ಯಾಂಕ್‌ ಖಾತೆಗೆ ಹಣ ಕಳಿಸಿದ್ದರೆ, ಕೆಲವರು ಗುರು ತಾಯಿ ಚಿಕ್ಕೋಳಮ್ಮನ ಕೈಯಲ್ಲಿ ನಗದು ಕೊಟ್ಟಿದ್ದರು. ಇದರ ಮೊತ್ತವೇ ಸುಮಾರು 15 ಕೋಟಿ ರು. ಆಗಿದ್ದು ಇದೇ ಜಗಳಕ್ಕೆ ಮೂಲ ಕಾರಣ ಎನ್ನಲಾಗಿದೆ.

ಇಷ್ಟೇ ಅಲ್ಲದೆ ಇತ್ತೀಚೆಗೆ ಕಲಾವತಿಯನ್ನು ಗುರು ತಮ್ಮ ಮಧುವಿಗೆ ಮದುವೆ ಮಾಡಿಕೊಳ್ಳುವ ಇರಾದೆ ವ್ಯಕ್ತವಾಗಿದ್ದು ಇದಕ್ಕೆ ಕಲಾವತಿ ಕುಟುಂಬಕ್ಕೆ ಸಾಕಷ್ಟುವಿರೋಧವಿತ್ತು. ಇಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಜಗಳ ನಡೆಯುತ್ತಿತ್ತು. ಜಗಳದ ವೇಳೆ ಕಲಾವತಿ ಪೋಷಕರು ಸಾಸಲಪುರದಿಂದ ಕಾರಿನಲ್ಲಿ ಬಂದು ಮಗಳನ್ನು ಕರೆದೊಯ್ದರು ಎನ್ನಲಾಗಿದೆ.

ಇತ್ತೀಚೆಗೆ ಇದೇ ವಿಚಾರವಾಗಿ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದಾಗ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿ ಇದು ಹುತಾತ್ಮ ಯೋಧನ ಕುಟುಂಬಕ್ಕೆ ಗೌರವ ತರುವಂಥ ಬೆಳವಣಿಗೆಯಲ್ಲ ಎಂದು ಬುದ್ದಿಮಾತು ಹೇಳಿದ್ದರು. ಆದರೆ, ಗುರುವಿನ ಕುಟುಂಬ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಗಳ ಮುಂದುವರಿಸಿದೆ ಎನ್ನಲಾಗಿದೆ.

click me!