ಬೆಂಗಳೂರು ನಗರದಲ್ಲಿ ಸಾವಿರಾರು ಎಕರೆ ಒತ್ತುವರಿ ತೆರವು

By Suvarna Web DeskFirst Published Jan 2, 2018, 8:28 AM IST
Highlights

ಬೆಂಗಳೂರು ನಗರದಲ್ಲಿ ಒಟ್ಟಾರೆ ಒತ್ತುವರಿಯಾಗಿದ್ದ ಭೂಮಿಯ ಪೈಕಿ ಎ.ಟಿ. ರಾಮಸ್ವಾಮಿ ಅವರು ತೆರವುಗೊಳಿಸುವಂತೆ ಸೂಚಿಸಿದ್ದ 11,980 ಎಕರೆಯಲ್ಲಿ 11,680 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲದೆ, ಜಿಲ್ಲಾಡಳಿತವೇ ಒತ್ತುವರಿ ಪತ್ತೆ ಹಚ್ಚಿ ಹೆಚ್ಚುವರಿಯಾಗಿ ಸಾವಿರ ಎಕರೆ ಒತ್ತುವರಿ ತೆರವುಗೊಳಿಸಿದೆ ಎಂದು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಹೇಳಿದರು.

ಬೆಂಗಳೂರು (ಜ.2): ಬೆಂಗಳೂರು ನಗರದಲ್ಲಿ ಒಟ್ಟಾರೆ ಒತ್ತುವರಿಯಾಗಿದ್ದ ಭೂಮಿಯ ಪೈಕಿ ಎ.ಟಿ. ರಾಮಸ್ವಾಮಿ ಅವರು ತೆರವುಗೊಳಿಸುವಂತೆ ಸೂಚಿಸಿದ್ದ 11,980 ಎಕರೆಯಲ್ಲಿ 11,680 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲದೆ, ಜಿಲ್ಲಾಡಳಿತವೇ ಒತ್ತುವರಿ ಪತ್ತೆ ಹಚ್ಚಿ ಹೆಚ್ಚುವರಿಯಾಗಿ ಸಾವಿರ ಎಕರೆ ಒತ್ತುವರಿ ತೆರವುಗೊಳಿಸಿದೆ ಎಂದು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಗೋಮಾಳ, ಕೆರೆ, ಕಟ್ಟೆ-ಕುಂಟೆ, ಸರ್ಕಾರಿ ಖರಾಬು, ಗ್ರಾಮಠಾಣ, ಗುಂಡು ತೋಪು, ರಸ್ತೆ, ಸ್ಮಶಾನ ಸೇರಿದಂತೆ 1.22,918 ಎಕರೆ ಸರ್ಕಾರಿ ಜಮೀನು ಇದೆ. ಒಟ್ಟು ಒತ್ತುವರಿಯಾಗಿರುವ ಜಮೀನಿನಲ್ಲಿ 2013ರ ಮೇ ತಿಂಗಳಿಂದ ಈವರೆಗೆ 18,860 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ.

ಇದರ ಮೌಲ್ಯ 4ಲಕ್ಷ ಕೋಟಿಯಷ್ಟು ಎಂದು ಹೇಳಿದರು. ಎ.ಟಿ. ರಾಮಸ್ವಾಮಿ ವರದಿಯಲ್ಲಿ 11,980 ಎಕರೆ ತೆರವುಗೊಳಿಸಲು ಸೂಚಿಸಲಾಗಿತ್ತು. ಇದರಲ್ಲಿ 300 ಎಕರೆ ಮಾತ್ರ ತೆರವುಗೊಳಿಸುವುದು ಬಾಕಿ ಇದೆ. ಉಳಿದಂತೆ ಎಲ್ಲಾ ಒತ್ತುವರಿ ತೆರವುಗೊಳಿಸಲಾಗಿದೆ. ಜತೆಗೆ ಸರ್ಕಾರದ ಮಂಜೂರಾತಿ ನಿಯಮ ಉಲ್ಲಂಘಿಸಿರುವ ಹಲವು ಸಂಸ್ಥೆಗಳಿಂದಲೂ ಜಮೀನು ಹಿಂಪಡೆದಿದ್ದೇವೆ. 5 ಎಕರೆ ವಿಸ್ತೀರ್ಣದ ಅಪೋಲೊ ಆಸ್ಪತ್ರೆ, ರಾಷ್ಟ್ರೋತ್ಥಾನ ಪರಿಷತ್ ಗೆ ನೀಡಿದ್ದ 10 ಎಕರೆ, ಮಿಥಿಕ್ ಸೊಸೈಟಿಗೆ ನೀಡಿದ್ದ 6 ಸಂಸ್ಥೆ ಸೇರಿದಂತೆ ಒಪ್ಪಂದದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹಲವು ಸಂಘಸಂಸ್ಥೆಗಳಿಂದ ಜಮೀನು ವಾಪಸು ಪಡೆಯಲಾಗಿದೆ ಎಂದರು. ಇದೇ ವೇಳೆ ಅಪೋಲೊ ಆಸ್ಪತ್ರೆಯನ್ನು ನಗರ ಜಿಲ್ಲಾಡಳಿತದ ವಶಕ್ಕೆ ಪಡೆದು ಸರ್ಕಾರಕ್ಕೆ ವರದಿ ನೀಡಿದ್ದೇವೆ.

ಸರ್ಕಾರವು ಆದಷ್ಟು ಶೀಘ್ರವಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಯಾಗಿ ನೇಮಿಸಿ ಆಸ್ಪತ್ರೆ ತೆರವುಗೊಳಿಸಬೇಕು. ಈ ಬಗ್ಗೆ ಕಂದಾಯ ಸಚಿವರು ಸರ್ಕಾರದ ಗಮನ ಸೆಳೆಯಬೇಕು ಎಂದು ವಿ.ಶಂಕರ್ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು. ಜಮೀನು ಸದುಪಯೋಗ: ಒತ್ತುವರಿ ತೆರವುಗೊಳಿಸಿದ ಜಮೀನು ಬಡವರು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಸದುಪಯೋಗ ಮಾಡಿಕೊಂಡಿದ್ದೇವೆ. ನಗರದಲ್ಲಿ ಬಡವ ರಿಗೆ 1 ಲಕ್ಷ ಮನೆ ನಿರ್ಮಿಸುವ ಯೋಜನೆಗೆ 1500 ಎಕರೆ ನೀಡಲಾಗಿದೆ.

ಸರ್ಕಾರದಿಂದ 10 ಲಕ್ಷ ಸಸಿ ನೆಡುವ ಸಲುವಾಗಿ ಬಿಬಿಎಂಪಿ ಹಾಗೂ ಬಿಡಿಎಗೆ 1618 ಎಕರೆ ಜಮೀನು ನೀಡಲಾಗಿದೆ. ಉಳಿದಂತೆ ವಿವಿಧ ಸಂಘಸಂಸ್ಥೆ, ಹಿಂದುಳಿದ ವರ್ಗದವರಿಗೆ, ಎಚ್‌ಐವಿ ಪೀಡಿತರಿಗೆ ವಸತಿ ಕಲ್ಪಿಸಲು 300 ಎಕರೆ, ಹಾಗೂ ಸರ್ಕಾರಿ ಆಸ್ಪತ್ರೆ, ಶಾಲೆ- ಕಾಲೇಜು, ಪೊಲೀಸ್ ಠಾಣೆಯಂತಹ ಸಾರ್ವಜನಿಕ ಉದ್ದೇಶಗಳಿಗಾಗಿ 3604 ಎಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

click me!