ಚುನಾವಣೆ ಕಣಕ್ಕೆ ಆಪ್‌ನ 18 ಅಭ್ಯರ್ಥಿಗಳು

By Suvarna Web DeskFirst Published Mar 21, 2018, 8:25 AM IST
Highlights

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್‌ ಆದಿ ಪಕ್ಷ (ಎಎಪಿ) 18 ಅಭ್ಯರ್ಥಿಗಳ ಪ್ರಥಮ ಪಟ್ಟಿಬಿಡುಗಡೆಗೊಳಿಸಿದೆ.

ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್‌ ಆದಿ ಪಕ್ಷ (ಎಎಪಿ) 18 ಅಭ್ಯರ್ಥಿಗಳ ಪ್ರಥಮ ಪಟ್ಟಿಬಿಡುಗಡೆಗೊಳಿಸಿದೆ.

ಮಂಗಳವಾರ ನಗರದಲ್ಲಿ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ವೀಕ್ಷಕರಾದ ಪಂಕಜ್‌ ಗುಪ್ತಾ ಅವರು ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್‌ ಒನ್‌ ಆಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 2ನೇ ಸ್ಥಾನದಲ್ಲಿದೆ. ಕೆಟ್ಟಆಡಳಿತಕ್ಕೆ ಒಳಗಾದ ದೇಶದ ನಂಬರ್‌ ಒನ್‌ ನಗರ ಬೆಂಗಳೂರು. ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ. ಮೂಲಭೂತ ಸೌಕರ್ಯ ಹಾಗೂ ಪರ್ಯಾಯ ರಾಜಕಾರಣಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಮಾತನಾಡಿ, ಚುನಾವಣೆಯಲ್ಲಿ ನಮ ಪಕ್ಷ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಲಿದೆ. ನಾವು ಜಾತಿ, ಧರ್ಮದ ವಿಷಯ ಮಾತನಾಡುವುದಿಲ್ಲ. ಜನರನ್ನು ಒಡೆಯುವ ವಿಷಯ ಚರ್ಚೆ ಮಾಡುವುದಿಲ್ಲ. ದೆಹಲಿಯಲ್ಲಿ ಪಕ್ಷದ ಮಾದರಿ ಆಡಳಿತ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಗೆ ಹೇಗೆ ವಿಶ್ವ ಮನ್ನಣೆ ಬಂದಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದರು.

ಕೆಲಸದ ಮಾಡದ ಸಂಸದನಿಗೆ ವೇತನ-ಭತ್ಯೆಬೇಡ:

ಈ ಬಾರಿಯ ಕೇಂದ್ರ ಬಜೆಟ್‌ಗೆ ಸಂಸತ್‌ನಲ್ಲಿ ಚರ್ಚೆಯೇ ಆಗದೆ ಒಪ್ಪಿಗೆ ಪಡೆಯಲಾಗಿದೆ. ಜನರ ಸಮಸ್ಯೆಗಳು, ರೈತರ ಸಮಸ್ಯೆಗಳು ಚರ್ಚೆಗೆ ಬರುವುದಿಲ್ಲ. ಕೆಲಸ ಮಾಡದಿದ್ದರೆ ಕಾರ್ಮಿಕನಿಗೆ ಹೇಗೆ ಸಂಬಳ ಸಿಗುವುದಿಲ್ಲವೋ ಅದೇ ಮಾದರಿಯಲ್ಲಿ ಕೆಲಸದ ಮಾಡದ ಸಂಸದರಿಗೂ ವೇತನ-ಭತ್ಯೆ ಕೊಡಬೇಡಿ ಎಂದು ಸಂಸತ್‌ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ಇದು ನಮ್ಮ ಪಕ್ಷದ ಜನಪರ ಧೋರಣೆಯಾಗಿದೆ ಎಂದು ಹೇಳಿದರು.

ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಗುರಿಯಿದೆ. ಈ ಸಂಬಂಧ ಸರ್ಚಿಂಗ್‌ ಕಮಿಟಿ ಸೂಕ್ತ ಅಭ್ಯರ್ಥಿಗಳ ಪೂರ್ವಾಪರ ವಿಚಾರಿಸುತ್ತಿವೆ. ಪಕ್ಷದ ಮಾನದಂಡಕ್ಕೆ ಸರಿ ಹೊಂದುವ ವ್ಯಕ್ತಿಗಳನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತೇವೆ. ಪಂಜಾಬ್‌ನ ಇತ್ತೀಚಿನ ಬೆಳವಣಿಗೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅರವಿಂದ್‌ ಕೇಜ್ರಿವಾಲ್‌ ಹಿಂದೆ ನಾವೆಲ್ಲ ಬಲವಾಗಿ ನಿಂತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಪೃಥ್ವಿ ರೆಡ್ಡಿ (ಸರ್ವಜ್ಞನಗರ), ಡಾ.ರೇಣುಕಾ ವಿಶ್ವನಾಥನ್‌ ( ಶಾಂತಿನಗರ), ಲಿಂಗರಾಜ್‌ ಅರಸ್‌ (ಕೆ.ಆರ್‌.ಪುರ), ಸಯ್ಯದ್‌ ಅಸದ್‌ ಅಬ್ಬಾಸ್‌ (ಬಿಟಿಎಂ ಬಡಾವಣೆ), ಎಸ್‌.ಜಿ.ಸೀತಾರಾಮ… (ಬಸವನಗುಡಿ), ಅಯೂಬ್‌ ಖಾನ್‌ (ಶಿವಾಜಿನಗರ), ರಾಘವೇಂದ್ರ ಥಾಣೆ (ಹೆಬ್ಬಾಳ), ಎಸ್‌.ಜಿ.ಸಿದ್ದಗಂಗಯ್ಯ (ಪುಲಕೇಶಿನಗರ), ಮೋಹನ್‌ ದಾಸ (ಸಿ.ವಿ.ರಾಮನ್‌ ನಗರ), ಮಾಳವಿಕ ಗುಬ್ಬಿವಾಣಿ (ಚಾಮರಾಜ), ಸಂತೋಷ್‌ ನರಗುಂದ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ…) ಕೆ.ಎಲ….ರಾಘವೆಂದ್ರ (ದಾವಣಗೆರೆ ದಕ್ಷಿಣ) ದೀಪಕ್‌ ಮಾಲಗಾರ (ಬಸವ ಕಲ್ಯಾಣ), ಶರಣಪ್ಪ ಸಜ್ಜಿಹೋಳ (ಗಂಗಾವತಿ), ಬಾಳಾಸಾಹೇಬ ರಾವ್‌ ಸಾಹೇಬ (ಕಾಗವಾಡ) ರವಿಕುಮಾರ್‌ (ಭದ್ರಾವತಿ), ಚಂದ್ರಕಾಂತ ರೇವಣಕರ್‌ (ಶಿಕಾರಿಪುರ), ಆನಂದ ಹಂಪಣ್ಣನವರ್‌ (ಕಿತ್ತೂರು)

click me!