
ಹೂಸ್ಟನ್(ಫೆ.26): ‘ನನ್ನ ಗಂಡನಿಗೆ ಇಂತಹ ಸಾವು ಬೇಕಾಗಿರಲಿಲ್ಲ. ನಮ್ಮಂತಹ ಅಲ್ಪಸಂಖ್ಯಾತರ ಮೇಲಿನ ದ್ವೇಷದ ಅಪರಾಧ ತಡೆಯಲು ಅಮೆರಿಕ ಸರ್ಕಾರ ಮುಂದೆ ಏನು ಮಾಡುತ್ತದೆ?' ಎಂದು ಕನ್ಸಾಸ್‌ನಲ್ಲಿ ಜನಾಂಗೀಯ ದ್ವೇಷದ ಕಾರಣಕ್ಕೆ ಹತ್ಯೆಯಾದ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಕುಚಿಭೋಟ್ಲಾ ಪತ್ನಿ ಸುನಯನಾ ದುಮಲಾ ಪ್ರಶ್ನಿಸಿದ್ದಾರೆ.
ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಗಂಡನ ಮೇಲೆ ನಡೆದ ಅಪರಾಧ ಇತರ ಅಲ್ಪಸಂಖ್ಯಾತರ ಮೇಲೆ ಆಗದಂತೆ ನೋಡಿಕೊಳ್ಳಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಏನು ಮಾಡುತ್ತದೆ? ಪ್ರತಿಯೊಬ್ಬರೂ ಈ ದೇಶಕ್ಕೆ ತೊಂದರೆ ನೀಡುವವರು ಏನಲ್ಲ. ನಾವು ಇಲ್ಲಿಗೆ ಸೇರಿದವರಾ? ಎಂದು ಪ್ರಶ್ನೆ ಮಾಡಿದರು.
ಅಮೆರಿಕದ ಯಾವುದೋ ಭಾಗದಲ್ಲಿ ಶೂಟೌಟ್ ನಡೆದಿದೆ ಎಂದು ಪತ್ರಿಕೆಯಲ್ಲಿ ಹಲವು ಬಾರಿ ಓದಿದ್ದೇನೆ. ಕಳವಳಗೊಂಡಿದ್ದೇನೆ. ಅಮೆರಿಕದಲ್ಲೇ ನೆಲೆಯೂರುವ ನಮ್ಮ ನಿರ್ಧಾರ ಸರಿ ಇದೆಯಾ ಎಂದು ಪ್ರಶ್ನೆ ಮಾಡಿಕೊಂಡಿದ್ದಿದೆ. ಆದರೆ, ಒಳ್ಳೆಯ ಸಂಗತಿಗಳು ಅಮೆರಿಕದಲ್ಲೇ ಆಗುತ್ತವೆ ಎಂದು ನನ್ನ ಪತಿ ವಿಶ್ವಾಸ ತುಂಬುತ್ತಿದ್ದರು ಎಂದು ತಿಳಿಸಿದರು.
ಶ್ರೀನಿವಾಸ್ ಅವರು 2005ರಲ್ಲೇ ಅಮೆರಿಕಕ್ಕೆ ಬಂದವರು. ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಯೋವಾದಲ್ಲಿ ಆರು ವರ್ಷ ಕೆಲಸ ಮಾಡಿದ್ದರು. ನಂತರವಷ್ಟೇ ಕನ್ಸಾಸ್‌ಗೆ ಬಂದಿದ್ದರು ಎಂದು ಹೇಳಿದರು.
ಅವರು ಫೆ.7ರಂದು ತಾಯಿ ಖಾಲಿಯಾ ಕೆಮಾಚೊ ಜತೆ ತೆರಳುತ್ತಿದ್ದಾಗ ಇಬ್ಬರನ್ನೂ ವಿಚಾರಿಸಿದ ಅಧಿಕಾರಿಗಳು ‘ನಿಮಗೆ ಈ ಹೆಸರು ಹೇಗೆ ಬಂತು? ನೀವು ಮುಸ್ಲಿಂ ವ್ಯಕ್ತಿಯೇ' ಎಂದು ಪ್ರಶ್ನಿಸಿದ್ದಾರೆ. ಬಳಿಕ ಬಿಡುಗಡೆ ಮಾಡಿದ್ದಾರೆ.
‘ಉಗ್ರಗಾಮಿ, ದೇಶ ಬಿಟ್ಟು ತೊಲಗು' ಎನ್ನುತ್ತಾ ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಕುಚಿಭೋಟ್ಲ ಅವರನ್ನು ಅಮೆರಿಕದ ಕನ್ಸಾಸ್‌ನಲ್ಲಿ ಹತ್ಯೆಗೈದ ಘಟನೆ ಕುರಿತು ಸ್ವತಃ ಹೈದರಾಬಾದ್ ಮೂಲದವರೇ ಆಗಿರುವ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ ಸತ್ಯ ನಾದೆಳ್ಲ ಖಂಡನೆ ವ್ಯಕ್ತಪಡಿಸಿದ್ದಾರೆ. ಬುದ್ಧಿಹೀನ ಹಿಂಸೆ ಹಾಗೂ ಧರ್ಮಾಂಧತೆಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ. ಈ ಘಟನೆಯನ್ನು ಖಂಡಿಸುತ್ತೇನೆ. ಹತ್ಯೆಯಾದ ಎಂಜಿನಿಯರ್ ಹಾಗೂ ಅವರ ಕುಟುಂಬಕ್ಕೆ ನನ್ನ ಹೃದಯ ಮಿಡಿಯುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ 'ವಲಸಿಗರಿಗೆ ಸಂಬಂಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಿವಾದಿತ ಹೇಳಿಕೆ ಮತ್ತು ಭಾರತೀಯ ಎಂಜಿನಿಯರ್ ಸಾವಿಗೆ ಕಾರಣವಾದ ಕನ್ಸಾಸ್ ಶೂಟೌಟ್ ಘಟನೆಗೂ ಸಂಬಂಧ ಕಲ್ಪಿಸುವುದು ಅಸಂಬದ್ಧವಾದುದು' ಎಂದು ವೈಟ್‌ಹೌಸ್ ಹೇಳಿದೆ. ‘‘ಖಂಡಿತವಾಗಿಯೂ, ಒಂದು ಜೀವ ಕಳೆದುಹೋಗುವುದು ದುರಂತವೇ ಸರಿ. ಆದರೆ ಘಟನೆಗೆ ಯಾವುದೇ ಸಂಬಂಧ ಕಲ್ಪಿಸುವುದು ಅಸಂಬದ್ಧವಾದುದು ಎಂಬುದು ನನ್ನ ಅಭಿಪ್ರಾಯ. ಅದಕ್ಕಿಂತ ಹೆಚ್ಚು ಏನನ್ನೂ ಹೇಳಲಾರೆ'' ಎಂದು ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಹೇಳಿದ್ದಾರೆ. ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಹತ್ಯೆ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಟ್ರಂಪ್ ಅವರ ವಲಸೆ ನೀತಿಯೇ ಇಂಥ ದ್ವೇಷ ಘಟನೆಗೆ ಕಾರಣ ಎಂದು ಅಮೆರಿಕದ ಭಾರತೀಯರಲ್ಲಿ ಭೀತಿ ನೆಲೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.