(ವಿಡಿಯೋ) ಮೋದಿ ಅಂದ್ರೆ ಹೊಟ್ಟೆ ತುಂಬುತ್ತಾ? ಘೋಷಣೆ ಕೂಗಿದ ಜನರಿಗೆ ಕೇಜ್ರಿವಾಲ್ ತರಾಟೆ

By Suvarna Web DeskFirst Published Apr 3, 2017, 9:34 AM IST
Highlights

"ಮೋದಿ ಎಂದು ಕೂಗೋದ್ರಿಂದ ವಿದ್ಯುತ್ ಬೆಲೆ ಇಳಿಯೋದಾದ್ರೆ ನಾನೂ ಕೂಡ ಮೋದಿ.. ಮೋದಿ.. ಎಂದು ಕೂಗುತ್ತೇನೆ"

ನವದೆಹಲಿ(ಏ. 03): ಅರವಿಂದ್ ಕೇಜ್ರಿವಾಲ್ ಭಾಷಣ ಕಾರ್ಯಕ್ರಮದ ವೇಳೆ ಸಭಿಕರಿಂದ "ಮೋದಿ ಮೋದಿ" ಎಂಬ ಘೋಷಣೆಗಳು ಮೊಳಗಿದ ಘಟನೆ ನಿನ್ನೆ ನಡೆದಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಪೂರ್ವ ದೆಹಲಿಯ ಘೋಂಡಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದಾಗ ಈ ಘಟನೆ ನಡೆದಿರುವುದು ವರದಿಯಾಗಿದೆ. ಸಭಿಕರ ಪೈಕಿ ಒಂದು ಗುಂಪಿನ ಜನರು "ಮೋದಿ ಮೋದಿ" ಎಂದು ಕೂಗಿದ್ದು ಕೇಜ್ರಿವಾಲ್'ಗೆ ಇರಿಸುಮುರುಸು ತಂದಿತು. ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕೇಜ್ರಿವಾಲ್ "ಮೋದಿ ಮೋದಿ ಎಂದು ಕೂಗಿದರೆ ನಿಮ್ಮ ಹಸಿವು ನೀಗುವುದಿಲ್ಲ" ಎಂದು ಕುಟುಕಿದರು. ಆದರೂ ಜನರು ಘೋಷಣೆ ಕೂಗೋದನ್ನು ನಿಲ್ಲಿಸದೇ ಇದ್ದಾಗ "ನಿಮಗೆ ಹುಚ್ಚು ಹಿಡಿದಿದೆ" ಎಂದು ಹಂಗಿಸಿದರು.

"ನೀವು ಹೀಗೆ ಘೋಷಣೆ ಕೂಗೋದ್ರಿಂದ ಹೊಟ್ಟೆ ತುಂಬೋದಿಲ್ಲ. ಕೆಲ ಜನರಿಗೆ ಹುಚ್ಚು ಹಿಡಿದಿದೆ" ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ಭಾಷಣದ ವೇಳೆ ಟೀಕಿಸಿದರು. "ಮೋದಿ ಎಂದು ಕೂಗೋದ್ರಿಂದ ವಿದ್ಯುತ್ ಬೆಲೆ ಇಳಿಯೋದಾದ್ರೆ ನಾನೂ ಕೂಡ ಮೋದಿ.. ಮೋದಿ.. ಎಂದು ಕೂಗುತ್ತೇನೆ" ಎಂದವರು ಹೇಳುವಾಗ ಬಹುತೇಕ ಸಭಿಕರಿಂದ ಕರತಾಡನ ಬಂತು

ಘೋಂಡಾ ಕ್ಷೇತ್ರದ ಪಕ್ಕದ ಅಂಬೇಡ್ಕರ್ ನಗರ್'ನಲ್ಲಿ ನಡೆದ ಕೇಜ್ರಿವಾಲ್ ಪ್ರಚಾರ ಸಭೆಯಲ್ಲೂ ಜನರ ಗುಂಪೊಂದು ಮೋದಿ ಪರ ಘೋಷಣೆ ಕೂಗಿದರು.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳು ಏಪ್ರಿಲ್ 23ರಂದು ನಡೆಯಲಿವೆ. ಇತ್ತೀಚಿನ ಚುನಾವಣೆಗಳಲ್ಲಿ ಮೋದಿ ದೆಸೆಯಿಂದ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯ ಸ್ಥಳೀಯ ಚುನಾವಣೆ ಇಡೀ ದೇಶದ ಗಮನ ಸೆಳೆಯುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಹಣಾಹಣಿ ಇದೆ. ದೆಹಲಿಯ ಆಡಳಿತ ಚುಕ್ಕಾಣಿ ಆಮ್ ಆದ್ಮಿ ಕೈಲಿದ್ದರೆ, ಬಿಜೆಪಿಯು ದೆಹಲಿ ಪಾಲಿಕೆಯ ಹಾಲಿ ಚಾಂಪಿಯನ್ ಎನಿಸಿದೆ. ಹೀಗಾಗಿ, ಬಿಜೆಪಿ ಮತ್ತು ಎಎಪಿ ಪಕ್ಷಗಳಿಗೆ ಇದು ತೀರಾ ಪ್ರತಿಷ್ಠೆಯ ವಿಷಯವಾಗಿದೆ.

click me!