
ನವದೆಹಲಿ[ಆ.06]: ಜಮ್ಮು ಮತ್ತು ಕಾಶ್ಮೀರದಲ್ಲಿ ಏನೋ ಆಗುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸದ್ಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬ ವದಂತಿಗಳು ಹಲವು ದಿನಗಳಿಂದ ಎಲ್ಲೆಡೆ ಹಬ್ಬುತ್ತಲೇ ಇದ್ದವು. ಆರಂಭದಲ್ಲಿ ಗಾಳಿ ಸುದ್ದಿ ಸ್ವರೂಪದಲ್ಲಿದ್ದ ಮಾಹಿತಿಗಳು ದಿನಕಳೆದಂತೆ ನಿರ್ದಿಷ್ಟುಸ್ವರೂಪ ಪಡೆದುಕೊಳ್ಳುತ್ತಾ ಹೋದವು. ಕೇಂದ್ರ ಸರ್ಕಾರ ಇಟ್ಟಹಲವು ಹೆಜ್ಜೆಗಳು, ಏನೋ ಆಗುತ್ತಿರುವುದು ನಿಜ ಎಂಬುದನ್ನು ಖಚಿತಪಡಿಸಿದ್ದವು. ಏನಾಗಲಿದೆ ಎಂಬ ಖಚಿತ ಮಾಹಿತಿ ಬಹಿರಂಗವಾಗಿರಲಿಲ್ಲವಾದರೂ, ಮಹತ್ವದ ಬೆಳವಣಿಗೆ ಸುಳಿವಂತೂ ಸಿಕ್ಕಿತ್ತು. ಇಂಥ ಸುಳಿವು ಸಿಗಲು ಕಾರಣವಾದ ಅಂಶಗಳು ಹೀಗಿವೆ...
*ಜುಲೈ 27, ಶನಿವಾರ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಎರಡು ದಿನಗಳ ಕಾಶ್ಮೀರ ಭೇಟಿ ಮುಗಿಸಿ ಬಂದ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 10000 ಯೋಧರನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಇದು ಮೊದಲ ಬಾರಿಗೆ ರಾಜ್ಯದಲ್ಲಿ ಏನೋ ಆಗುತ್ತಿರುವ ಸ್ಪಷ್ಟಸುಳಿವು ನೀಡಿತ್ತು.
*ಜುಲೈ 28, ಭಾನುವಾರ
ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಇತ್ತೀಚೆಗೆ ಹೊರಡಿಸಿದ ಎಲ್ಲಾ ಆದೇಶಗಳು, ಕೈಗೊಂಡ ನಿರ್ಧಾರಗಳು, ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಕೈಗೊಂಡ ಹೆಜ್ಜೆಗಳಂತಿವೆ. ಒಂದು ವೇಳೆ ಸರ್ಕಾರ ಅಂಥ ದುಸ್ಸಾಹಸ ಮಾಡಿದಲ್ಲಿ, ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಎಚ್ಚರಿಕೆ.
*ಜುಲೈ 29, ಸೋಮವಾರ
ಜಮ್ಮು ಕಾಶ್ಮೀರದ ಮಸೀದಿ ಹಾಗೂ ಅವುಗಳ ಆಡಳಿತ ಸಮಿತಿಯ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಪೊಲೀಸರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು 35ಎ ವಿಧಿಯನ್ನು ರದ್ದು ಪಡಿಸುವ ಮುನ್ಸೂಚನೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
*ಜುಲೈ 20, ಮಂಗಳವಾರ
ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಲಾಗುತ್ತದೆ ಎಂಬ ವದಂತಿ ಬಗ್ಗೆ ಕಿವಿಗೊಡಬೇಡಿ ಎಂದು ಜನಸಾಮಾನ್ಯರಿಗೆ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರಿಂದ ಸೂಚನೆ. ಆದರೆ ತುರ್ತು ಪರಿಸ್ಥಿತಿ ಸಜ್ಜಾಗಲು ಸಿದ್ಧರಾಗಿ ಎಂಬ ರೈಲ್ವೆ ಅಧಿಕಾರಿಯೊಬ್ಬರ ಬಗ್ಗೆ ರಾಜ್ಯಪಾಲರಿಂದ ಯಾವುದೇ ಪ್ರಸ್ತಾಪ ಇಲ್ಲ.
ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
*ಜುಲೈ 31, ಬುಧವಾರ
ಜಮ್ಮು ಕಾಶ್ಮೀರ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ಸೂಚನೆ ಅರಿತ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ದಕ್ಷಿಣ ಕಾಶ್ಮೀರದ ಕುಲ್‌ಗಾಂವ್, ಶೋಪಿಯಾನ್ ಹಾಗೂ ಪುಲ್ವಾಮ ಜಿಲ್ಲೆಯಲ್ಲಿ ಪಿಡಿಪಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ 35ಎ ವಿಧಿಯ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನ ಮಾಡಬೇಕು ಎಂದು ಸೂಚನೆ ನೀಡಿದ್ದರು. ಇದಕ್ಕೆ ಶ್ರೀನಗರದಲ್ಲಿ ಉತ್ತರಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್, ಮುಫ್ತಿ ಜನರಲ್ಲಿ ಭಯದ ವಾತಾವರಣ ಸೃಷ್ಠಿ ಮಾಡುತ್ತಿದ್ದಾರೆ. ಕಾಶ್ಮೀರ ಸಂಬಂಧ ಜನರ ಹಿತಾಸಕ್ತಿ ವಿರುದ್ಧವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದರು.
*ಆಗಸ್ಟ್ 1, ಗುರುವಾರ
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ನೇತೃತ್ವದ ನಿಯೋಗ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ 35ಎ ವಿಧಿಯನ್ನು ರದ್ದುಗೊಳಿಸುವ ಪ್ರಸ್ತಾವ ಕೈಗೊಳ್ಳಬಾರದು ಎಂದು ಮನವಿ ಮಾಡಿತ್ತು. ಅಲ್ಲದೇ ಅಂದೇ ಭದ್ರತಾ ಪಡೆಗಳು 280 ತಂಡ ಕಣಿವೆಯಲ್ಲಿ ನಿಯೋಜಿಸಲಾಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಅದನ್ನು ಕೇಂದ್ರ ಗೃಹ ಇಲಾಖೆ ತಳ್ಳಿ ಹಾಕಿತ್ತು.
*ಆಗಸ್ಟ್ 2, ಶುಕ್ರವಾರ
ಉಗ್ರರ ಬೆದರಿಕೆ ಇರುವುದರಿಂದ ಆಗಸ್ಟ್ 15 ರಂದು ಅಂತ್ಯವಾಗಬೇಕಾದ ಅಮರನಾಥ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸ್ವಂತ ಊರಿಗೆ ಮರಳುವಂತೆ ಜಮ್ಮು ಕಾಶ್ಮೀರ ಸರ್ಕಾರ ಆದೇಶ ಮಾಡಿತ್ತು. ಜತೆಗೆ ಪ್ರವಾಸಿಗಳು ಹಾಗೂ ಹೊರ ರಾಜ್ಯದ ನಿವಾಸಿಗಳು, ವಿದ್ಯಾರ್ಥಿಗಳು ರಾಜ್ಯ ಬಿಡುವಂತೆ ಸೂಚನೆ ನೀಡಿತ್ತು.
*ಆಗಸ್ಟ್ 3, ಶನಿವಾರ
ಗಡಿ ನಿಯಂತ್ರಣ ರೇಖೆ ಬಳಿ ಇರುವ ಸೇನಾ ನೆಲೆ ಮೇಲೆ ಪಾಕ್ ಸೈನ್ಯ ದಾಳಿ ನಡೆಸುತ್ತಿದ್ದು, ಭಾರೀ ಹಾನಿ ಸಂಭವಿಸಿದೆ. ಮಾತ್ರವಲ್ಲ ಪಾಕ್ ಬೆಂಬಲಿತ ಉಗ್ರರು ಒಳನುಸುಳುತ್ತಿದ್ದಾರೆ ಎಂದು ಸೇನಾ ಮೂಲಗಳು ಹೇಳಿತ್ತು. ಅಂದೇ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ರನ್ನು ಭೇಟಿ ಮಾಡಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಹರಡಲಾಗುತ್ತಿರುವ ಗಾಳಿ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದ್ದರು.
*ಆಗಸ್ಟ್ 4, ಭಾನುವಾರ
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸನ್ನಿವೇಶದ ಮಾಹಿತಿ ಪಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಭದ್ರತಾ ಅಧಿಕಾರಿಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ಧೋವಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗುಭಾ ಸಹಿತ ಹಲವು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಅಂದೇ ರಾತ್ರಿ ಫಾರೂಖ್ ಅಬ್ದುಲ್ಲಾ ನಿವಾಸದಲ್ಲಿ ಕಾಶ್ಮೀರದ ಎಲ್ಲಾ ಪಕ್ಷಗಳ ಸಭೆ ಕೂಡ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.