ಕಿಸಾನ್ ಸಮ್ಮಾನ್ : 2000 ರೂಗೆ ಸುಗ್ರೀವಾಜ್ಞೆ

By Web DeskFirst Published Aug 6, 2019, 10:35 AM IST
Highlights

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 2 ಸಾವಿರ ರೂ ಬಿಡುಗಡೆ | ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ 43.75 ಲಕ್ಷ ಅರ್ಹ ಫಲಾನುಭವಿಗಳನ್ನು ಘೋಷಣೆ ಮಾಡುವಂತೆ ಕಳುಹಿಸಲಾಗಿದೆ.

ಬೆಂಗಳೂರು (ಆ. 06): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ವತಿಯಿಂದ ಪಾವತಿಸುವ 4000 ರು. ಗಳಲ್ಲಿ ಮೊದಲ ಕಂತಿನ 2000 ರು. ಬಿಡುಗಡೆಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಲು ತುರ್ತು ನಿರ್ವಹಣೆಗಾಗಿ ಬಳಸುವ ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1957 ಕ್ಕೆ ತಿದ್ದುಪಡಿ ತಂದು ಅಧ್ಯಾದೇಶ ಹೊರಡಿಸುವ ಮೂಲಕ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಪತ್ಕಾಲೀನ ನಿಧಿಯನ್ನು ಬಳಸಿಕೊಂಡು ತಾವು ನೀಡಿರುವ ಆಶ್ವಾಸನೆ ಪೂರೈಸಿದ ಹೊಸ ಸಂಪ್ರದಾಯಕ್ಕೆ ಯಡಿಯೂರಪ್ಪ ನಾಂದಿ ಹಾಡಿದ್ದಾರೆ.

ರಾಜ್ಯದ ತುರ್ತು ಕಾರ್ಯಕ್ರಮಗಳ ನಿರ್ವಹಣಾ ನಿಧಿಯ ಮೊತ್ತವನ್ನು 80 ಕೋಟಿ ರು.ನಿಂದ 2200 ಕೋಟಿ ರು.ಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ ಎರಡು ಸಾವಿರ ರು. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ತೀರ್ಮಾನ ಕೈಗೊಂಡಿದ್ದಾರೆ.

ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದ್ದು, ರಾಜ್ಯ ಪಾಲರ ಒಪ್ಪಿಗೆ ಸಿಕ್ಕ ಬಳಿಕ ಅನುಷ್ಠಾನಗೊಳ್ಳಲಿದೆ. ಕೇಂದ್ರ ಸರ್ಕಾರವು ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ವಾರ್ಷಿಕ 6 ಸಾವಿರ
ರು. ನೆರವು ನೀಡುವ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರವು ಘೋಷಿಸಿರುವ 4 ಸಾವಿರ ರು. ನೆರವಿನ ಯೋಜನೆ ಜಾರಿಗೆ ಯಡಿಯೂರಪ್ಪ ಮುಂದಾಗಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ 43.75 ಲಕ್ಷ ಅರ್ಹ ಫಲಾನುಭವಿಗಳನ್ನು ಘೋಷಣೆ ಮಾಡುವಂತೆ ಕಳುಹಿಸಲಾಗಿದೆ.

ಈ ಪೈಕಿ 31.72 ಲಕ್ಷ ಫಲಾನುಭವಿಗಳಿಗೆ ಪ್ರತಿ ರೈತನಿಗೆ 6 ಸಾವಿರ ರು.ನಂತೆ 634. 50 ಕೋಟಿ ರು. ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಈ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಮೊದಲನೇ ಕಂತಾಗಿ 2 ಸಾವಿರ ರು. ಖಾತೆಗೆ ಜಮೆ ಮಾಡಲಾಗುವುದು. ಕೇಂದ್ರ ಈಗಾಗಲೇ ಫಲಾನುಭವಿಗಳನ್ನು ಗುರುತಿಸಿದ್ದರಿಂದ ರಾಜ್ಯಕ್ಕೆ ಈ ಸಮಸ್ಯೆ ಇಲ್ಲ.

click me!