
ಬೆಂಗಳೂರು : ಕೇಂದ್ರ ಸರ್ಕಾರದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಹೊಸ ನೀತಿಯಿಂದ ಕರ್ನಾಟಕವೊಂದರಲ್ಲೇ ಸುಮಾರು 85 ಸಾವಿರ ಸ್ವಯಂ ಉದ್ಯೋಗಿಗಳ ನೌಕರಿಗೆ ಕುತ್ತು ಬರುವ ಸಾಧ್ಯತೆ ಇದೆ.
ಕಳೆದ ಮೂವತ್ತು ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನ ಮತ್ತು ಸಹಕಾರವಿಲ್ಲದೇ ಬೆಳೆದ ಬಂದ ಕೇಬಲ್ ಟೀವಿ ಅಪರೇಟರ್ ಉದ್ಯಮ, ಇಂದು ಅತ್ಯಂತ ದೊಡ್ಡ ಉದ್ಯಮವಾಗಿ ನಿಂತಿದೆ. ಕರ್ನಾಟಕವೊಂದರಲ್ಲೇ ಸುಮಾರು 85 ಸಾವಿರ ಮಂದಿ ಕೇಬಲ್ ಟಿವಿ ಉದ್ಯಮವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಡಿ.29ರಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಗ್ರಾಹಕರಿಗೆ ಚಾನಲ್‌ಗಳ ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡುವುದಕ್ಕೆ ಮುಂದಾಗಿದ್ದು, ಇದರಿಂದ ಗ್ರಾಹಕರು ತಮ್ಮಗೆ ಬೇಕಾದ ಚಾನಲ್‌ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಆದರೆ, ಪ್ರಸ್ತುತ ಕೇಬಲ್ ಟಿವಿ ಆಪರೇಟರ್‌ಗಳು ನೀಡುವ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗಲಿದೆ. ಆಪರೇಟರ್‌ಗಳಿಗೆ ಹಂಚಿಕೆಯಾಗುತ್ತಿದ್ದ ಲಾಭಾಂಶದ ಪ್ರಮಾಣ ಇಳಿಕೆಯಾಗಲಿದೆ. ಇದರಿಂದ ಕೇಬಲ್ ಟೀವಿ ಉದ್ಯಮವನ್ನೇ ನೆಚ್ಚಿಕೊಂಡು ಜೀವನ ಸಾಗಿರುತ್ತಿರುವ ದೇಶದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಗ್ರಾಮೀಣ ಉದ್ಯೋಗಕ್ಕೆ ಗಂಡಾಂತರ: ಕೇಬಲ್ ಟಿವಿ ಆಪರೇಟರ್‌ಗಳಿಗೆ ಯಾವುದೇ ವಿದ್ಯಾರ್ಹತೆ ಇಲ್ಲ. ಗ್ರಾಮೀಣ ಪ್ರದೇಶ ಸೇರಿದಂತೆ ಇಡೀ ಉದ್ಯಮದಲ್ಲಿ ಹೆಚ್ಚಾಗಿ ಅವಿದ್ಯಾವಂತರು, ಕಡಿಮೆ ಶೈಕ್ಷಣಿಕ ಅರ್ಹತೆ ಹೊಂದಿರುವವರು ಕೆಲಸ ಮಾಡುತ್ತಿದ್ದಾರೆ. ಶೇ.60ರಷ್ಟುಗ್ರಾಮೀಣ ಪ್ರದೇಶ ಯುವಕರಿಗೆ ಸ್ವಯಂ ಉದ್ಯೋಗ ನೀಡಿ ಹತ್ತಾರು ವರ್ಷಗಳಿಂದ ಸಲಹುತ್ತಿದ್ದು, ಲಕ್ಷಾಂತರ ಕುಟುಂಬಗಳಿಗೆ ಆಧಾರ ಸ್ತಂಬವಾಗಿದೆ. ಆದರೆ ಈಗ ಜಾರಿಯಾಗುತ್ತಿರುವ ಹೊಸ ನೀತಿಯಿಂದ ತಮ್ಮ ಉದ್ಯೋಗಕ್ಕೆ ಮಾರಕವಾಗಲಿದೆ ಎಂಬ ಆಂತಕ ಕೇಬಲ್ ಟೀವಿ ಆಪರೇಟರ್‌ಗಳಲ್ಲಿ ಮನೆ ಮಾಡಿದೆ.
ಎಂಎಸ್‌ಓಗಳೇ ಸ್ಪರ್ಧಿಗಳು: ಈವರೆಗೆ ಕೇಬಲ್ ಟೀವಿ ಆಪರೇಟರ್‌ಗಳಿಗೆ ಸ್ಯಾಟ್‌ಲೈಟ್‌ನಿಂದ ಸಿಗ್ನಲ್‌ಗಳನ್ನು ಡೌನ್‌ಲೋಡ್ ಮಾಡಿ ನೀಡುತ್ತಿದ್ದ ಎಂಎಸ್‌ಒ (ಮಲ್ಟಿಸವೀರ್‍ಸ್ ಆಪರೇಟರ್)ಗಳು ನೇರವಾಗಿ ಡಿಟಿಎಚ್ ಮೂಲಕ ಗ್ರಾಹಕರಿಗೆ ಸಂಪರ್ಕ ನೀಡುವುದಕ್ಕೆ ಮುಂದಾಗಿದ್ದಾರೆ. ಅಲ್ಲದೇ ನೂತನ ನೀತಿಯಂತೆ ಕೇಬಲ್ ಟೀವಿ ಆಪರೇಟರ್‌ಗಳಿಗೆ ಗ್ರಾಹಕರು ಆಯ್ಕೆಗೆ ತಕ್ಕಂತೆ ಚಾನಲ್‌ಗಳನ್ನು ಒದಗಿಸುವುದಕ್ಕೆ ಬೇಕಾದ ಸೌಲಭ್ಯಮತ್ತು ವ್ಯವಸ್ಥೆ ಇಲ್ಲ. ಈಗಾಗಲೇ ಡಿಟಿಎಚ್‌ಗಳು ಹೊಸ ನೀತಿಗೆ ಬೇಕಾದ ಕೆಲ ತಂತ್ರಜ್ಞಾನವನ್ನು ರೂಪಿಸಿಕೊಂಡಿರುವುದರಿಂದ ಡಿಟಿಎಚ್‌ಗಳು ಕೇಬಲ್ ಟೀವಿ ಗ್ರಾಹಕರನ್ನು ಸೆಳೆದು ಕಷ್ಟವಾಗಲಾರದು. ಇದರಿಂದ ಕೇಬಲ್ ಟೀವಿ ಉದ್ಯಮ ನೆಲಕಚ್ಚಲಿದ್ದು, ಅದರಲ್ಲಿರುವ ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ.
.60ನಲ್ಲಿ ವೇತನ, ಬಾಡಿಗೆ, ನಿರ್ವಹಣೆ ಕಷ್ಟ : ಹೊಸ ನೀತಿಯ ಪ್ರಕಾರ .130 ಸೇವಾ ಶುಲ್ಕ ಹಾಗೂ ಪೇ ಚಾನಲ್‌ಗಳ ಶೇಕಡವಾರು ಹಂಚಿಕೆಯಲ್ಲಿ ಕೇಬಲ್ ಟೀವಿ ಆಪರೇಟರ್‌ಗಳಿಗೆ ಒಂದು ಮನೆಯಿಂದ ಸುಮಾರು .60 ಸಿಗಲಿದೆ. ಈ ಹಣದಲ್ಲಿ ಕೇಬಲ್ ಟಿವಿ ಆಪರೇಟರ್‌ಗಳು ಮೂರು ಜನ ಸಿಬ್ಬಂದಿ ವೇತನ, ಮಳಿಗೆ ಬಾಡಿಗೆ, ವಿದ್ಯುತ್ ಬಿಲ್, ದುರಸ್ತಿ ವೆಚ್ಚ ಎಲ್ಲವನ್ನು ಭರಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಕೇಬಲ್ ಟಿವಿ ಉದ್ಯಮ ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಲಿದ್ದು, ಸಿಬ್ಬಂದಿ ಬೀದಿಗೆ ಬರಲಿದ್ದಾರೆ ಎಂದು ಕೇಬಲ್ ಟೀವಿ ಆಪರೇಟರ್‌ಗಳು ಹೇಳುತ್ತಾರೆ.
ಸೇವಾ ಶುಲ್ಕ ಹಾಗೂ ಪೇ ಚಾನಲ್ ಶುಲ್ಕದ ಹಂಚಿಕೆಯಲ್ಲಿ ಕೇಬಲ್ ಟಿವಿ ಅಪರೇಟರ್‌ಗಳಿಗೆ ಅನ್ಯಾಯವಾಗಿದೆ. ಬರುವ ಆದಾಯದಲ್ಲಿ ಉದ್ಯಮ ನಡೆಸುವುದಕ್ಕೆ ಸಿಬ್ಬಂದಿಗೆ ವೇತನ ಕೊಡುವುದಕ್ಕೆ ಸಾಧ್ಯವಿಲ್ಲ. ಇದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವುದು ಖಚಿತ.
- ಪ್ಯಾಟ್ರಿಕ್ ರಾಜು, ಅಧ್ಯಕ್ಷ, ಕರ್ನಾಟಕ ಕೇಬಲ್ ಟೀವಿ ಅಪರೇಟರ್‌ಗಳ ಅಸೋಸಿಯೇಷನ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.