
ಬೆಂಗಳೂರು : ನಿರೀಕ್ಷೆಯಂತೆಯೇ ಸಚಿವ ಸಂಪುಟ ಪುನಾರಚನೆ ಸಾಹಸವೂ ಕಾಂಗ್ರೆಸ್ ಪಾಳಯದಲ್ಲಿ ಭಾರಿ ತಳಮಳ ಹುಟ್ಟುಹಾಕಿದೆ. ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಬಿ.ಸಿ. ಪಾಟೀಲ್, ಎಸ್.ಆರ್.ಪಾಟೀಲ್, ಬಿ.ಕೆ.ಸಂಗಮೇಶ್, ಭೀಮಾ ನಾಯ್ಕ್, ನಾಗೇಂದ್ರ, ಆನಂದ್ಸಿಂಗ್ ಸೇರಿದಂತೆ ಹಲವು ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ನಲ್ಲಿ ಉಂಟಾಗಿರುವ ಅತೃಪ್ತರ ಆಕ್ರೋಶ ಮೂರು ವಿಭಿನ್ನ ರೀತಿಯಲ್ಲಿ ವ್ಯಕ್ತವಾಗಿದೆ.
1- ತಮ್ಮ ಹಿರಿತನವನ್ನು ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಹಿರಿಯ ಶಾಸಕರು ರೊಚ್ಚಿಗೆದ್ದಿದ್ದರೆ, ಅವರ ಬೆಂಬಲಿಗರು ಬೀದಿಗೆ ಇಳಿದಿದ್ದಾರೆ.
2- ಸಚಿವ ಸ್ಥಾನ ಕೇಳಿದರೆ, ನಿಗಮ ಮಂಡಳಿ ಸ್ಥಾನ ನೀಡಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕರ ಪೈಕಿ ಕೆಲವರು ಈಗಾಗಲೇ ನಿಗಮ ಮಂಡಳಿ ಹಾಗೂ ಇತರ ಹುದ್ದೆಯನ್ನು ತಿರಸ್ಕರಿಸುವ ಮೂಲಕ ಸಿಟ್ಟು ವ್ಯಕ್ತಪಡಿಸಿದ್ದಾರೆ.
3- ಸಚಿವ ಸ್ಥಾನದಿಂದ ಕೊಕ್ ಪಡೆದ ಶಂಕರ್ ಹಾಗೂ ರಮೇಶ್ ಜಾರಕಿಹೊಳಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ನಲ್ಲಿ ತೀವ್ರ ಅತೃಪ್ತಿ, ಅಸಮಾಧಾನವು ಬೀದಿ ಹೋರಾಟದ ಸ್ವರೂಪ ಪಡೆದಿರುವ ಬೆನ್ನಲ್ಲೇ ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗ ಹೋರಾಟ ನಡೆಸುತ್ತಿರುವ ಶಾಸಕರಿಗೆ ಕಾಂಗ್ರೆಸ್ ನಾಯಕತ್ವ ಎಚ್ಚರಿಕೆ ನೀಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಮುಂದಿನ ಮೇ ವೇಳೆಗೆ ಮತ್ತೆ ಸಂಪುಟ ಪುನಾರಚನೆ ನಡೆಯಲಿದೆ. ಈ ವೇಳೆ ಪ್ರಸ್ತುತ ಹುದ್ದೆ ವಂಚಿತರಿಗೆ ಅವಕಾಶ ನೀಡಲಾಗುವುದು. ಹಾಲಿ ಸಚಿವರ ಮೌಲ್ಯಮಾಪನ ನಡೆಸಿ ಸಾಧನೆ ತೋರದವರಿಗೆ ಕೊಕ್ ನೀಡಲಾಗುವುದು. ಹೀಗಾಗಿ ಮೇ ವೇಳೆಗೆ ಮತ್ತೆ ಅವಕಾಶ ದೊರಯಲಿದೆ. ಈ ಹಿನ್ನೆಲೆಯಲ್ಲಿ ಯಾರೂ ಪಕ್ಷದ ಹೈಕಮಾಂಡ್ ತೀರ್ಮಾನದ ವಿರುದ್ಧ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಆದರೆ, ಈ ಎಚ್ಚರಿಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವ ಅತೃಪ್ತರ ಧೋರಣೆಗೆ ಕಡಿವಾಣ ಹಾಕಿಲ್ಲ. ವಿಶೇಷವಾಗಿ ಸಚಿವ ಸ್ಥಾನದಿಂದ ಕೊಕ್ ಪಡೆದ ಅರಣ್ಯ ಸಚಿವ ಶಂಕರ್ ಬಹಿರಂಗವಾಗಿ ಕಾಂಗ್ರೆಸ್ಗೆ ಸವಾಲು ಎಸೆದಿದ್ದು, ಸರ್ಕಾರ ರಚಿಸುವಾಗ ಬಳಸಿಕೊಂಡು ಈಗ ಬಿಟ್ಟಕಾಂಗ್ರೆಸ್ಗೆ ಸದ್ಯದಲ್ಲೇ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ನಡೆ ಮಾತ್ರ ನಿಗೂಢವಾಗಿದೆ. ಇಡೀ ದಿನ ಮಾಧ್ಯಮಗಳಿಂದ ದೂರ ಉಳಿದ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗ ಶಾಸಕರ ತಂಡ ನಿಗಿ ನಿಗಿ ಕೆಂಡವಾಗಿದ್ದು, ಈ ಗುಂಪು ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿಬೀಳಬಹುದು. ಒಂದು ಮೂಲದ ಪ್ರಕಾರ ಈ ಇಡೀ ತಂಡ ಜನವರಿ ವೇಳೆಗೆ ಕಾಂಗ್ರೆಸ್ ಪಕ್ಷದಿಂದ ದೂರವಾಗುವ ನಿರ್ಧಾರವನ್ನು ಪ್ರಕಟಿಸಬಹುದು. ಆದರೆ, ರಾಜೀನಾಮೆ ನೀಡುವರೋ ಅಥವಾ ಪಕ್ಷದಲ್ಲಿದ್ದುಕೊಂಡೇ ಪ್ರತ್ಯೇಕ ಗುಂಪಿನಂತೆ ವರ್ತಿಸುವರೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಇನ್ನು ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಹಿರಿಯ ಶಾಸಕರಿಗೆ ಅವಕಾಶ ನೀಡದಿರುವುದು ಎಸ್.ಆರ್. ಪಾಟೀಲ್, ರಾಮಲಿಂಗಾರೆಡ್ಡಿ, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್ ಅವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಎಚ್.ಕೆ. ಪಾಟೀಲ್ ಅವರಿಗೆ ನೀಡಿರುವ ಪ್ರಚಾರ ಸಮಿತಿ ಉಸ್ತುವಾರಿ ತಕ್ಕ ಮಟ್ಟಿಗೆ ಫಲ ನೀಡಿದ್ದು, ಅವರು ಈ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿಕೆ ನೀಡುವ ಮೂಲಕ ಅತೃಪ್ತರ ಗುಂಪಿನಿಂದ ಹೊರ ಬಂದಿದ್ದಾರೆ.
ಉಳಿದಂತೆ ಸಚಿವ ಸ್ಥಾನ ಕೈತಪ್ಪಿರುವ ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಸದ್ಯದಲ್ಲೇ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಆಕಾಂಕ್ಷಿಗಳ ಪರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ನಿಗಮ-ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ಪಡೆದಿದ್ದ ಕೆಲ ಆಕಾಂಕ್ಷಿಗಳು ತಮಗೆ ನೀಡಲಾದ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಈ ಪೈಕಿ ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರಿಗೆ ಹುದ್ದೆ ದೊರೆಯಲಿಲ್ಲ ಎಂದು ಸಂಸದೀಯ ಕಾರ್ಯದರ್ಶಿ ಹುದ್ದೆ ತಿರಸ್ಕರಿಸಿದ ಸೌಮ್ಯ ರೆಡ್ಡಿ ಅವರ ಬದಲಾಗಿ ಎ.ಅಬ್ದುಲ್ ಜಬ್ಬಾರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ನೀಡುವ ಮೂಲಕ ಕಾಂಗ್ರೆಸ್ ನಾಯಕತ್ವವು ಈ ಬೆದರಿಕೆ ತಂತ್ರಕ್ಕೆ ಜಗ್ಗುವುದಿಲ್ಲ ಎಂಬ ಸಂದೇಶ ನೀಡಿದೆ. ಆದರೆ ನಿಗಮ ಮಂಡಳಿ ಹುದ್ದೆ ತಿರಸ್ಕರಿಸಿ ಹೇಳಿಕೆ ನೀಡಿರುವ ಎನ್.ಎ.ಹ್ಯಾರಿಸ್ ಹಾಗೂ ಬಿ.ಕೆ.ಸಂಗಮೇಶ್ ಅವರ ವಿಚಾರದಲ್ಲಿ ಮೌನ ತಾಳಿದೆ.
ರಾಮಲಿಂಗಾರೆಡ್ಡಿ ಬೆಂಬಲಿಗರಿಂದ ಪ್ರತಿಭಟನೆ
ತಮ್ಮ ತಂದೆಗೆ ಸಚಿವ ಸ್ಥಾನ ದೊರೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸೌಮ್ಯಾರೆಡ್ಡಿ, ದೆಹಲಿಯಲ್ಲಿ ಲಾಬಿ ನಡೆಸಿದರೆ ಮಾತ್ರ ಮಂತ್ರಿಗಿರಿ ದೊರೆಯುತ್ತದೆ. ಕಾಂಗ್ರೆಸ್ ಪಕ್ಷಕ್ಕಾಗಿ ನಮ್ಮ ತಂದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನನಗೆ ಈಗ ಯಾವುದೇ ಸಂಸದೀಯ ಹುದ್ದೆ ಬೇಡ. ತಂದೆಯನ್ನು ಸಚಿವ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಮಲಿಂಗಾರೆಡ್ಡಿ ಪರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಮೇಯರ್ ಎನ್. ಮಂಜುನಾಥರೆಡ್ಡಿ, ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿರುವ ರಾಮಲಿಂಗಾರೆಡ್ಡಿ ಅವರಿಗೆ ಅನ್ಯಾಯವಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ ಎಂದರೆ ರಾಮಲಿಂಗಾರೆಡ್ಡಿ ಕಾರಣ. ಹೀಗಾಗಿ ರಾಮಲಿಂಗಾರೆಡ್ಡಿ ಅಭಿಮಾನಿಗಳಾದ ನಾವೆಲ್ಲಾ ಸ್ವಯಂಪ್ರೇರಿತವಾಗಿ ಬೀದಿಗಿಳಿದಿದ್ದೇವೆ. ಹೋರಾಟ ತೀವ್ರತೆ ಪಡೆದುಕೊಳ್ಳುವುದರ ಒಳಗೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.