
ಬೆಳಗಾವಿ (ನ.12): ನಾಳೆಯಿಂದ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿಯ ಸುವರ್ಣಸೌಧ ಸಜ್ಜಾಗಿದೆ. ಈ ಬಾರಿಯ ಅಧಿವೇಶನ ಕಾಂಗ್ರೆಸ್ ಸರ್ಕಾರದ ಸಾಧನೆ-ವೈಫಲ್ಯ ಕುರಿತು ಆರೋಪ-ಪ್ರತ್ಯಾರೋಪಗಳ ಜಂಗೀಕುಸ್ತಿಯ ಅಖಾಡವಾಗುವ ನಿರೀಕ್ಷೆಯಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನ ಇದಾಗಿದೆ. ಪ್ರತಿಪಕ್ಷಗಳು ವೈಫಲ್ಯಗಳ ಪಟ್ಟಿಯೊಂದಿಗೆ ಮುಗಿಬೀಳಲು ಸಜ್ಜಾಗಿದ್ದರೆ, ಸಾಧನೆಗಳ ಅಸ್ತ್ರ ಪ್ರಯೋಗಿಸಿ ತಿರುಗೇಟು ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಅಧಿವೇಶನದಲ್ಲಿ ಹೋರಾಟ ನಡೆಸುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ. ನೀರಾವರಿ ಯೋಜನೆ ಸೇರಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿವಾದ, ಕಬ್ಬು ಬೆಳೆಗಾರರ ಸಮಸ್ಯೆ ಈ ಬಾರಿಯೂ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಇನ್ನು ಪರಿಷತ್ ಕಲಾಪಕ್ಕೆ 805 ಪ್ರಶ್ನೆಗಳು ಬಂದಿವೆ. 75 ಚುಕ್ಕೆ ಗುರುತಿನ ಪ್ರಶ್ನೆಗಳಿವೆ. 8ನೇ ಚಳಿಗಾಲ ಅಧಿವೇಶನಕ್ಕೆ ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಕೊನೆ ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಯ ಶಕ್ತಿಸೌಧ ಸಾಕ್ಷಿಯಾಗುತ್ತಿದೆ. ಚಳಿಗಾಲ ಅಧಿವೇಶನಕ್ಕಾಗಿ ಆಗಮಿಸುವ ಮುಖ್ಯಮಂತ್ರಿ ಸಿಎಂ, ಸ್ಪೀಕರ್, ಸಭಾಪತಿ, ಸಚಿವರು, ಶಾಸಕರು ಸದಸ್ಯರಾದಿಯಾಗಿ 4 ಸಾವಿರಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಂದಾನಗರಿಯಲ್ಲಿ ಇರಲಿದ್ದಾರೆ. ಅಧಿವೇಶನಕ್ಕೆ ಆಗಮಿಸುವ ಗಣ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಡಳಿತದಿಂದ ಊಟ, ವಸತಿ, ವಾಹನದ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಸಿದ್ಧತೆ ಮಾಡಲಾಗುತ್ತಿದೆ.
ಅಧಿವೇಶನಕ್ಕೆ ಆಗಮಿಸುವವರಿಗೆ ಜಿಲ್ಲಾಡಳಿತ ಭರ್ತಿ 1500 ಹೋಟೆಲ್ ರೂಮ್'ಗಳನ್ನ ಬುಕ್ ಮಾಡಲಾಗಿದೆ. ಅಧಿವೇಶನದ ಉದ್ದಕ್ಕೂ ಉತ್ತರ ಕರ್ನಾಟಕದ ಶಕ್ತಿ ಕೇಂದ್ರದ ಹೊರಗೆ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಹೀಗಾಗಿ ಬೆಳಗಾವಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಭದ್ರತೆಗಾಗಿ ಬೇರೆ ಬೇರೆ ಜಿಲ್ಲೆಯಿಂದ ಪೊಲೀಸರನ್ನೂ ನಿಯೋಜಿಸಲಾಗಿದೆ. ಜೊತೆಗೆ ದ್ವೊರೆಸ್ವಾಮಿ ನೇತೃತ್ವದಲ್ಲಿ ತಮಟೆ ಚಳವಳಿ, ರೈತರು, ಖಾಸಗಿ ವೈದ್ಯರ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೇರಿ 40ಕ್ಕೂ ಅಧಿಕ ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯಲಿವೆ. ಹೀಗೆ ಪ್ರತಿಭಟನೆಗಾಗಿ ಸುವರ್ಣ ವಿಧಾನಸೌಧ ಹೊರಗೆ ಪ್ರತ್ಯೇಕವಾಗಿ ಸ್ಥಳವನ್ನ ಗುರುತಿಸಿ ಪೆಂಡಾಲ್ಗಳನ್ನ ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.