‘ತೂಗು ಸೇತುವೆ ತಜ್ಞ’ ಕಟ್ಟಿದ 8 ಸೇತುವೆಗಳು ಸರ್ವನಾಶ

By Web DeskFirst Published Aug 11, 2019, 10:28 AM IST
Highlights

ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎಲ್ಲರೂ ತತ್ತರಿಸುವಂತೆ ಮಾಡಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಪರ್ಕ ಕ್ಲಪಿಸುವ ಕೊಂಡಿಗಳಾಗಿದ್ದ ಹಲವು ಸೇತುವೆಗಳು ಕುಸಿದಿವೆ. ಇದು ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. 

ಬೆಂಗಳೂರು [ಆ.11]:  ರಾಜ್ಯದಲ್ಲಿ ನೆರೆ ಮತ್ತು ಪ್ರವಾಹದಿಂದ ಜನರ ಸಂಕಷ್ಟದಿನೇ ದಿನೇ ಹೆಚ್ಚುತ್ತಿದ್ದು ಒಟ್ಟಾರೆ 8 ತೂಗು ಸೇತುವೆಗಳು ಕುಸಿದಿವೆ. ಮನುಷ್ಯ ಬದುಕನ್ನು ಜೋಡಿಸಲೆಂದೇ ಕಟ್ಟಲಾಗಿದ್ದ ತೂಗು ಸೇತುವೆಗಳು ಈಗ ಈ ಅವಸ್ಥೆಗೆ ಕಾರಣವಾಗಿರುವುದರಿಂದ ಜನರ ಸಂಕಟ ಅರಿತ ಸೇತುವೆಯ ರೂವಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಅಪಾರ ನೋವು ಅನುಭವಿಸುತ್ತಿದ್ದಾರೆ.

ಈಗಾಗಲೇ ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹ ಮತ್ತು ಪ್ರವಾಹದಲ್ಲಿ ಕೊಚ್ಚಿ ಬಂದ ಮರಗಳ ಹೊಡೆತಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 3, ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತೂಗು ಸೇತುವೆಗಳು ನಷ್ಟವಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಸೇತುವೆಗೂ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆಯಂತೂ ನಾಮಾವಶೇಷಗೊಂಡಿದೆ.

Latest Videos

ಗಿರೀಶ್‌ ಭಾರಧ್ವಾಜ್‌ ಪಾಲಿಗೆ ತೂಗುಸೇತುವೆ ನಿರ್ಮಾಣ ಪಾಲಿಗೆ ಕೇವಲ ಉದ್ಯಮವೋ, ವ್ಯವಹಾರವೋ, ಲಾಭ ನಷ್ಟಗಳ ಲೆಕ್ಕಾಚಾರವೋ ಆಗಿರಲಿಲ್ಲ. ಅದೊಂದು ಭಾವನಾತ್ಮಕ ಸಂಗತಿಯಾಗಿತ್ತು. ಆ ಕಾರಣಕ್ಕಾಗಿಯೇ ಭಾರದ್ವಾಜ್‌ ಇಂದು ವಿಶ್ವಮಾನ್ಯರು ಮತ್ತು ಅದಕ್ಕಾಗಿಯೇ ಅವರಿಗೆ ಪದ್ಮಶ್ರೀಯಂತಹ ಉನ್ನತ ಪ್ರಶಸ್ತಿಗಳು ಅರಸಿ ಬಂತು.

ಸೂಕ್ಷ್ಮ ಮನಸ್ಸಿನ ಗಿರೀಶ್‌ ಭಾರದ್ವಾಜ್‌ ಅವರಿಗೆ ಆ ಪ್ರದೇಶದ ಜನರು ಫೋನ್‌ ಮೂಲಕ ಮಾಹಿತಿ ನೀಡಿದಾಗ ಅವರು ಚಿಂತೆಗೊಳಗಾಗಿದ್ದಾರೆ. ಈ ನೋವನ್ನು ಅವರು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

‘ನನಗೆ ಸೇತುವೆಗಿಂತಲೂ ಅಲ್ಲಿನ ಜನರು ಮತ್ತೊಮ್ಮೆ ಸಂಕಟಕ್ಕೆ ಈಡಾದ ಚಿತ್ರಣವೇ ಕಾಣಿಸುತ್ತದೆ. ಅವರ ಅಪಾರ ಪ್ರೀತಿ ಸಿಕ್ಕಿತ್ತು. ಎಲ್ಲವೂ ಕೊಚ್ಚಿಹೋಯಿತು. ಆ ಊರುಗಳ ಜನರ ದಿನನಿತ್ಯದ ಬದುಕಿಗೆ ಕೊಂಡಿಯಾಗಿದ್ದ ತೂಗುಸೇತುವೆ ನಾಶವಾಗಿರುವುದರಿಂದ ಅವರ ಬದುಕು ಮುಂದೆ ಹೇಗೆ ಎನ್ನುವುದೇ ನನಗೆ ಎದುರಾಗಿರುವ ಚಿಂತೆ’ ಎಂದು ಕನ್ನಡಪ್ರಭದೊಂದಿಗೆ ತಮ್ಮ ಭಾವನೆ ಹಂಚಿಕೊಂಡಾಗ ಗಿರೀಶ್‌ ಅವರಲ್ಲಿ ದುಃಖ ಮಡುಗಟ್ಟಿತ್ತು. ಮಾತುಗಳು ಹೊರಡುತ್ತಿರಲಿಲ್ಲ.

click me!