
ನವದೆಹಲಿ(ಫೆ.23): ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ರಾಜಧಾನಿಯಾಗಿರುವ ಬೆಂಗಳೂರು ಈಗ ‘ಮಿಲಿಯನೇರ್’ ಹಾಗೂ ‘ಬಿಲಿಯನೇರ್’ಗಳ ಪಟ್ಟಿಯಲ್ಲಿ ಇತರ ನಗರಗಳನ್ನು ಹಿಂದೂಡಿ, ದಾಪುಗಾಲು ಇಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಸದ್ಯ 7700 ಮಂದಿ ಮಿಲಿಯನೇರ್‌ಗಳು (10 ಲಕ್ಷ ಅಮೆರಿಕನ್ ಡಾಲರ್ ಅಥವಾ 6.7 ಕೋಟಿ ರು.ಗಿಂತ ಹೆಚ್ಚಿನ ಸಂಪತ್ತು ಹೊಂದಿದವರು) ಇದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈ (6600), ಪುಣೆ (4500) ಹಾಗೂ ಗುಡಗಾಂವ್ (4000)ಗಿಂತ ಇದು ಅಕ ಎಂದು ‘ನ್ಯೂ ವರ್ಲ್ಡ್ ವೆಲ್ತ್ ರಿಪೋರ್ಟ್- 2016’ ಹೇಳಿದೆ.
ಮತ್ತೊಂದೆಡೆ, ಬೆಂಗಳೂರಿನಲ್ಲಿ 8 ಬಿಲಿಯನೇರ್ (100 ಶತಕೋಟಿ ಡಾಲರ್ ಅಥವಾ 6700 ಕೋಟಿ ರು. ಸಂಪತ್ತು ಹೊಂದಿದವರು)ಗಳು ಇದ್ದಾರೆ. ಹೈದರಾಬಾದ್ (6), ಪುಣೆ (5), ಕೋಲ್ಕತಾ (4), ಗುಡಗಾಂವ್ (2)ಗೆ ಹೋಲಿಸಿದರೆ ಇದು ಹೆಚ್ಚು ಎಂದು ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಧನಿಕರು ಇಂದಿರಾನಗರ ಹಾಗೂ ಸದಾಶಿವನಗರದಲ್ಲೇ ಹೆಚ್ಚಾಗಿ ನೆಲೆಯೂರಿದ್ದಾರೆ ಎಂದು ಹೇಳಿದೆ.
ಮಿಲಿಯನೇರ್‌ಗಳ ಪಟ್ಟಿಯಲ್ಲಿ ಕೋಲ್ಕತಾ (9600) ಹಾಗೂ ಹೈದರಾಬಾದ್ (9000) ನಗರಗಳು ಬೆಂಗಳೂರನ್ನು ಮೀರಿಸಿದ್ದರೆ, ಬಿಲಿಯನೇರ್‌ಗಳ ಪಟ್ಟಿಯಲ್ಲಿ ಬೆಂಗಳೂರು ಆ ನಗರಗಳನ್ನು ಹಿಂದೂಡಿದೆ ಎಂದು ಈ ವರದಿ ತಿಳಿಸಿದೆ.
ಬೆಂಗಳೂರಿನ ಧನಿಕರ ಬಳಿಕ ಒಟ್ಟಾರೆ 21 ಲಕ್ಷ ಕೋಟಿ ರು. ಸಂಪತ್ತು ಇದ್ದರೆ, ಹೈದರಾಬಾದ್‌ನ ಧನಿಕರು 20 ಲಕ್ಷ ಕೋಟಿ ಹಾಗೂ ಕೋಲ್ಕತಾದ ಸಿರಿವಂತರು 19 ಲಕ್ಷ ಕೋಟಿ ರು. ಸಂಪತ್ತು ಹೊಂದಿದ್ದಾರೆ. ಆದರೆ, ಮುಂಬೈ ಹಾಗೂ ದೆಹಲಿಗೆ ಹೋಲಿಸಿದರೆ ಬೆಂಗಳೂರಿನಲ್ಲಿರುವ ಶ್ರೀಮಂತರ ಸಂಖ್ಯೆ ಕಡಿಮೆ. ಮುಂಬೈ 46000 ಮಿಲಿಯನೇರ್ ಹಾಗೂ 28 ಬಿಲಿಯನೇರ್‌ಗಳಿಗೆ ಆಶ್ರಯ ನೀಡುವ ಮೂಲಕ 55 ಲಕ್ಷ ಕೋಟಿ ರು. ಸಂಪತ್ತು ಹೊಂದಿದೆ. ಅದೇ ದೆಹಲಿಯಲ್ಲಿ 23 ಸಾವಿರ ಮಿಲಿಯನೇರ್‌ಗಳು ಹಾಗೂ 18 ಬಿಲಿಯನೇರ್‌ಗಳು ಇದ್ದಾರೆ. 30 ಲಕ್ಷ ಕೋಟಿ ರು. ಸಂಪತ್ತು ಆ ನಗರದಲ್ಲಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಭಾರತದಲ್ಲಿ 2.64 ಲಕ್ಷ ಮಿಲಿಯನೇರ್‌ಗಳು ಹಾಗೂ 95 ಬಿಲಿಯನೇರ್‌ಗಳು ಇದ್ದಾರೆ. 2016ರ ಡಿಸೆಂಬರ್‌ಗೆ ಅನ್ವಯವಾಗುವಂತೆ 409 ಲಕ್ಷ ಕೋಟಿ ರು. ಸಂಪತ್ತು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಈ ನಡುವೆ 2016ನೇ ಸಾಲಿನಲ್ಲಿ ದೇಶದ 6000 ಮಿಲಿಯನೇರ್‌ಗಳು ಪರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಹಿಂದಿನ ವರ್ಷ ಈ ಸಂಖ್ಯೆ 4000ದಷ್ಟಿತ್ತು ಎಂದು ವರದಿ ತಿಳಿಸಿದೆ. ಅಲ್ಲದೆ, ಹಣಕಾಸು ಸೇವೆ, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಆರೋಗ್ಯ ಹಾಗೂ ಮಾಧ್ಯಮ ವಲಯಗಳಲ್ಲಿ ಮುಂದಿನ ದಶಕದಲ್ಲಿ ಬಲವಾದ ಪ್ರಗತಿ ಕಂಡುಬರಲಿದೆ. ಇದರಿಂದ ಬೆಂಗಳೂರು ಸೇರಿ ಹಲವು ನಗರಗಳ ಸಂಪತ್ತು ವೃದ್ಧಿಯಾಗಲಿದೆ ಎಂದು ತಿಳಿಸಿದೆ.
a) 409 ಲಕ್ಷ ಕೋಟಿ: ಭಾರತದ 2.64 ಲಕ್ಷ ಮಿಲಿಯನೇರ್, 95 ಬಿಲಿಯನೇರ್‌ಗಳ ಆಸ್ತಿ
b) 8 ಮಂದಿ: ಬಿಲಿಯನ್ ಡಾಲರ್ (6700 ಕೋಟಿ) ಸಿರಿವಂತಿಕೆ ಇರುವ ಬೆಂಗಳೂರಿಗರು
c) ಬೆಂಗಳೂರಿನಲ್ಲಿ ಇಂದಿರಾನಗರ ಹಾಗೂ ಸದಾಶಿವನಗರಗಳು ಶ್ರೀಮಂತರ ನೆಲೆವೀಡು
d) ನಂ.1: ಬಿಲಿಯನೇರ್‌ಗಳ ಪಟ್ಟಿಯಲ್ಲಿ ಹೈದ್ರಾಬಾದ್, ಪುಣೆ, ಕೊಲ್ಕತಾಕ್ಕಿಂತ ಮುಂದೆ
e) ನಂ.3: ಮಿಲಿಯನೇರ್ ಪಟ್ಟಿಯಲ್ಲಿ ಬೆಂಗ್ಳೂರಿಗೆ ಕೊಲ್ಕತಾ, ಹೈದ್ರಾಬಾದ್ ನಂತರದ ಸ್ಥಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.