
ಬೆಂಗಳೂರು(ಫೆ.23): ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಟಿಕೆಟ್ ಲೆಕ್ಕಾಚಾರ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಸೇರಿದಂತೆ ಹಲವು ಘಟಾನುಘಟಿ ನಾಯಕರು ತಮ್ಮ ಮಕ್ಕಳು ಹಾಗೂ ಸಂಬಂಧಿಕರನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಮೂಲಕ ಕಾಂಗ್ರೆಸ್ಸಿನ ಪ್ರಮುಖ ನಾಯಕರು ತಮ್ಮ ಮಕ್ಕಳಿಗೆ ರಾಜಕೀಯ ವಾರಸುದಾರಿಕೆ ಹಸ್ತಾಂತರಿಸಲು ವಿಧಾನಸಭಾ ಚುನಾವಣೆಯನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಇವರೆಲ್ಲರಿಗೂ ಟಿಕೆಟ್ ಸಿಗುತ್ತದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ನಾಯಕರು ತಮ್ಮ ಮಕ್ಕಳು ಮತ್ತು ಸಂಬಂಧಿಕರಿಗೆ ಟಿಕೆಟ್ ಪಡೆಯುವ ಪ್ರಯತ್ನವನ್ನಂತೂ ಗಂಭೀರವಾಗಿಯೇ ಆರಂಭಿಸಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇರುವುದರಿಂದ ಆ ಹೊತ್ತಿನ ಬೆಳವಣಿಗೆ ಆಧರಿಸಿ ಅಂತಿಮ ನಿರ್ಧಾರ ಹೊರಬೀಳಲಿದೆ.
ಸಿಎಂ ಪುತ್ರನ ಯತ್ನ: ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಯತ್ನಿಸುತ್ತಿದ್ದು, ಈಗಾಗಲೇ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಒಂದು ವೇಳೆ ಪುತ್ರನಿಗೆ ಟಿಕೆಟ್ ಖಚಿತವಾದರೆ ಸಿದ್ದರಾಮಯ್ಯಅವರು ಚಾಮುಂಡೇಶ್ವರಿ ಅಥವಾ ಬೇರೆ ಯಾವುದಾದರೂ ಕ್ಷೇತ್ರಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ.
ಸಿರಾ ಕ್ಷೇತ್ರ ಪ್ರತಿನಿಧಿಸುವ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಮಗ ಸಂತೋಷ್ ಟಿ. ಜಯಚಂದ್ರ ಅವರು ನೆರೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದಾರೆ. ಇದರ ಜತೆಗೆ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ಕೂಡ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಅಷ್ಟರಮಟ್ಟಿಗೆ ಇಬ್ಬರು ನಾಯಕರ ಪುತ್ರರ ನಡುವೆ ಪೈಪೋಟಿ ಏರ್ಪಟ್ಟಂತಾಗಿದೆ. ಇನ್ನು ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ತಮ್ಮ ಪುತ್ರಿ ಸೌಮ್ಯರೆಡ್ಡಿಗೆ ಬೊಮ್ಮನಹಳ್ಳಿ ಅಥವಾ ಜಯನಗರಕ್ಷೇತ್ರದಿಂದ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಪಕ್ಷ ಬಯಸಿದರೆ ತಮ್ಮ ಬಿಟಿಎಂ ಬಡಾವಣೆ ಕ್ಷೇತ್ರ ಪುತ್ರಿಗೆ ಬಿಟ್ಟುಕೊಟ್ಟು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ತಾವೇ ವಲಸೆ ಹೋಗಲೂ ಸಹ ರಾಮ ಲಿಂಗಾರೆಡ್ಡಿ ಸಿದ್ಧರಿದ್ದಾರೆ ಎನ್ನಲಾಗಿದೆ.
ಇನ್ನು ಮೂಡಿಗೆರೆ ಕ್ಷೇತ್ರದಿಂದ ಹಿರಿಯ ನಾಯಕಿ ಮೊಟಮ್ಮ ಅವರ ಪುತ್ರಿ ನಯನಾ, ಕೆಜಿಎಫ್ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್‌ಗೆ ಟಿಕೆಟ್ ಕೊಡಿಸಲು ಗಟ್ಟಿಪ್ರಯತ್ನ ಮುಂದುವರೆದಿದೆ. ಕೆಜಿಎಫ್ ಶಾಸಕರಾಗಿದ್ದ ವೈ. ಸಂಪಂಗಿ ಭ್ರಷ್ಟಾಚಾರ ಪ್ರಕರಣದ ಬಳಿಕ ತಮ್ಮ ತಾಯಿ ವೈ. ರಾಮಕ್ಕ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು. ಇದೀಗ ಈ ಕ್ಷೇತ್ರದಿಂದ ತಮ್ಮ ಪುತ್ರಿಗೆ ಟಿಕೆಟ್ ಕೊಡಿಸಲು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಪ್ರಯತ್ನಿಸುತ್ತಿದ್ದಾರೆ.
ಸಚಿವ ಎ. ಮಂಜು ಮಗ ಮಂಥರ್‌ಗೌಡ ಅರಕಲಗೂಡು ಕ್ಷೇತ್ರದಿಂದ ಕಣಕ್ಕಿಳಿಸಲು ಯತ್ನಿಸಿದ್ದು, ಪುತ್ರನಿಗೆ ಟಿಕೆಟ್ ದೊರೆತರೆ ತಾವು ಬೇಲೂರು ಅಥವಾ ಅರಸಿಕೆರೆಯಿಂದ ಸ್ಪರ್ಧಿಸುವ ಇಂಗಿತವನ್ನು ಮಂಜು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಿವಾಜಿನಗರ ಕ್ಷೇತ್ರದಿಂದ ರೋಷನ್‌ಬೇಗ್ ಪುತ್ರ ರುಮನ್ ಬೇಗ್ ಅವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಯುತ್ತಿದ್ದು, ತಾವು ಲೋಕಸಭೆ ಚುನಾವಣೆಗೆ ನಿಲ್ಲುವ ಸಿದ್ಧತೆಯಲ್ಲಿ ಸಚಿವ ರೋಷನ್ ಬೇಗ್ ಇದ್ದಾರೆ. ಇನ್ನು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಜಯನಗರ ಕ್ಷೇತ್ರದಿಂದ ತಮ್ಮ ಪುತ್ರ ಮನ್ಸೂರ್ ಅಲಿ ಖಾನ್‌ಗೆ ಟಿಕೆಟ್ ಕೊಡಿಸಲು ಶತಪ್ರಯತ್ನ ನಡೆಸುತ್ತಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿಗೆ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಇಟ್ಟಿದ್ದಾರೆ. ಒಂದು ವೇಳೆ ಸಹೋದರನಿಗೆ ತಾವು ಪ್ರತಿನಿಧಿಸುವ ಗೋಕಾಕ್ ಕ್ಷೇತ್ರದಿಂದ ಟಿಕೆಟ್ ದೊರೆತರೆ ತಾವು ಬೆಳಗಾವಿ ಉತ್ತರದಿಂದ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾಜಿ ಸಂಸದ ಎಚ್. ವಿಶ್ವನಾಥ್ ಅವರ ಪುತ್ರ ಅಮಿತ್ ವಿ.ದೇವರಟ್ಟಿಅವರು ಕೆ.ಆರ್. ನಗರ ಕ್ಷೇತ್ರದಿಂದ ಸ್ಪರ್ಧಿಸಲು ಹವಣಿಸುತ್ತಿದ್ದು, ಪ್ರಸ್ತುತ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿರುವ ಅಮಿತ್ ಅವರಿಗೆ ಟಿಕೆಟ್ ನೀಡುವಂತೆ ಈಗಾಗಲೇ ಲಾಬಿ ಶುರುವಾಗಿದೆ. ಉಳಿದಂತೆ ಮಾಜಿ ಸಂಸದ ಐ.ಜಿ. ಸನದಿ ಪುತ್ರ ಶಾಕೀರ್ ಸನದಿ ಹಾವೇರಿಯ ಯಾವುದೇ ಕ್ಷೇತ್ರದಿಂದ ಟಿಕೆಟ್ ನೀಡಿದರೂ ಸ್ಪರ್ಧಿಸುವುದಾಗಿ ಓಡಾಡುತ್ತಿದ್ದರೆ, ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಅವರು ಕಾರವಾರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಚಿವ ಎಚ್.ಸಿ.ಮಹ ದೇವಪ್ಪ ಮಗ ಸುನಿಲ್ ಬೋಸ್ ಅವರೂ ಪ್ರಯತ್ನ ನಡೆಸಲಿದ್ದಾರೆ.
1.ಸಿದ್ದರಾಮಯ್ಯ ಪುತ್ರಡಾಯತೀಂದ್ರ, ವರುಣಾ ಕ್ಷೇತ್ರ
2. ರಾಮಲಿಂಗಾರೆಡ್ಡಿ ಪುತ್ರಿಸೌಮ್ಯಾ ರೆಡ್ಡಿ, ಜಯನಗರ/ಬೊಮ್ಮನಹಳ್ಳಿ
3. ಮಾರ್ಗರೆಟ್ ಆಳ್ವ ಪುತ್ರನಿವೇದಿತ್ ಆಳ್ವ, ಕಾರವಾರ
4. ಕೆ.ಎಚ್.ಮುನಿಯಪ್ಪ ಪುತ್ರಿರೂಪಾ ಶಶಿಧರ್, ಕೆಜಿಎಫ್
5. ಟಿ.ಬಿ.ಜಯಚಂದ್ರ ಪುತ್ರಸಂತೋಷ್.ಟಿ., ಚಿಕ್ಕನಾಯಕನಹಳ್ಳಿ
6. ಕೆ.ಎನ್.ರಾಜಣ್ಣ ಪುತ್ರರಾಜೇಂದ್ರ, ಚಿಕ್ಕನಾಯಕನಹಳ್ಳಿ
7. ಮೋಟಮ್ಮ ಪುತ್ರಿನಯನಾ, ಮೂಡಿಗೆರೆ
8. ಎ.ಮಂಜು ಪುತ್ರಮಂಥರ್‌ಗೌಡ, ಅರಕಲಗೂಡು
9. ರೋಷನ್ ಬೇಗ್ ಪುತ್ರರುಮನ್ ಬೇಗ್, ಶಿವಾಜಿನಗರ
10. ಕೆ.ರೆಹಮಾನ್ ಖಾನ್ ಪುತ್ರಮನ್ಸೂರ್ ಅಲಿ, ಜಯನಗರ
11. ರಮೇಶ್ ಜಾರಕಿಹೊಳಿ ಸೋದರಲಖನ್ ಜಾರಕಿಹೊಳಿ, ಗೋಕಾಕ
12. ಎಚ್.ವಿಶ್ವನಾಥ್ ಪುತ್ರಅಮಿತ್.ವಿ., ಕೆ.ಆರ್.ನಗರ
13. ಐ.ಜಿ.ಸನದಿ ಪುತ್ರಶಾಕೀರ್ ಸನದಿ, ಹಾವೇರಿ
14. ಎಚ್.ಸಿ.ಮಹದೇವಪ್ಪ ಪುತ್ರಸುನಿಲ್ ಬೋಸ್, ನಂಜನಗೂಡು/ಇತರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.