ಡಿಕೆಶಿ ಕುಟುಂಬಸ್ಥರ 75 ಕೋಟಿ ಬೇನಾಮಿ ಆಸ್ತಿ ಜಪ್ತಿ!

By Web DeskFirst Published Mar 24, 2019, 12:26 PM IST
Highlights

ಡಿಕೆಶಿ ಕುಟುಂಬಸ್ಥರ 75 ಕೋಟಿ ಬೇನಾಮಿ ಆಸ್ತಿ ಜಪ್ತಿ| ಶಿವಕುಮಾರ್‌ ತಾಯಿ, ಪತ್ನಿ, ಸೋದರನ ಹೆಸರಿನಲ್ಲಿದ್ದ ಬೇನಾಮಿ ಆಸ್ತಿ| ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ

ಬೆಂಗಳೂರು[ಮಾ.24]: ಅಕ್ರಮ ಸಂಪತ್ತು ಗಳಿಕೆ, ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಆದಾಯ ತೆರಿಗೆ ಇಲಾಖೆ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಮತ್ತು ಕುಟುಂಬಸ್ಥರ ಹೆಸರಿನಲ್ಲಿದ್ದ 75 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌, ಸಚಿವರ ಹೆಸರು ಪ್ರಸ್ತಾಪಿಸದೆ ಪ್ರಕರಣದ ಕುರಿತು ವಿವರಣೆ ನೀಡಿದರು. ಶಿವಕುಮಾರ್‌ ಅವರು ತಮ್ಮ ತಾಯಿ, ಪತ್ನಿ ಸೇರಿದಂತೆ ಇತರರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಅವರ ಬಳಿಯಿದ್ದ ಜಮೀನು ಹಾಗೂ ಕಟ್ಟಡಗಳನ್ನು ಜಪ್ತಿ ಮಾಡಲಾಗಿದೆ.

ಈ ಬಗ್ಗೆ ದೆಹಲಿಯಲ್ಲಿನ ಬೇನಾಮಿ ನ್ಯಾಯಾಧಿಕರಣದಲ್ಲಿ ವಿಚಾರಣೆ ಮುಂದುವರಿದಿದೆ. ತನಿಖೆ ವೇಳೆ ಬೇನಾಮಿ ಆಸ್ತಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತವಾಗಿ ಜಪ್ತಿ ಮಾಡಿಕೊಳ್ಳಲಾಗಿದೆ. ವಿಚಾರಣೆ ಬಳಿಕ ಸರ್ಕಾರವು ಅಧಿಕೃತವಾಗಿ ಮುಟ್ಟಗೋಲು ಹಾಕಿಕೊಳ್ಳಲಿದೆ. ರಾಜ್ಯದಲ್ಲಿ ಮೂವರು ಜನಪ್ರತಿನಿಧಿಗಳ ವಿರುದ್ಧ ಬೇನಾಮಿ ಆಸ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಒಬ್ಬರು ಸಚಿವ ಸಂಪುಟದ ಸಚಿವರಾಗಿದ್ದು, ಇನ್ನಿಬ್ಬರು ಜನಪ್ರತಿನಿಧಿ ಹಾಗೂ ಅವರ ಬೆಂಬಲಿಗರಾಗಲಿದ್ದಾರೆ ಎಂದು ಬಾಲಕೃಷ್ಣನ್‌ ಹೇಳಿದರು.

ಶಿವಕುಮಾರ್‌ ಪ್ರಕರಣ ಹೊರತುಪಡಿಸಿ ರಾಜ್ಯದಲ್ಲಿ 389.4 ಕೊಟಿ ರು. ಮೌಲ್ಯದ 235 ಪ್ರಕರಣಗಳಲ್ಲಿ ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೆ 92 ಬೇನಾಮಿಗಳು ಮತ್ತು 36 ಬೇನಾಮಿ ಮಾಲೀಕರನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಕೆಲವರು ರಾಜಕೀಯದಲ್ಲಿ ಗುರುತಿಸಿಕೊಂಡಿರುವವರೂ ಇದ್ದಾರೆ.

click me!